SHIVAMOGGA LIVE NEWS, 6 FEBRUARY 2025
ಶಿವಮೊಗ್ಗ : ರಾಜ್ಯದಲ್ಲಿ 25 ಕಂಬಳ ನಡೆಯಲಿದೆ. ಶಿವಮೊಗ್ಗದಲ್ಲಿ ಕೊನೆಯ ಕಂಬಳ (Kambala) ಆಯೋಜಿಸಲಾಗುತ್ತಿದೆ. ಕಂಬಳದ ಟ್ರ್ಯಾಕ್‌ಗೆ ಫೆ.10ರಂದು ಮಧ್ಯಾಹ್ನ 3 ಗಂಟೆಗೆ ಭೂಮಿ ಪೂಜೆ ನಡೆಸಲಾಗುತ್ತದೆ ಎಂದು ಮಲೆನಾಡ ತುಂಗಭದ್ರಾ ಜೋಡುಕರೆ ಕಂಬಳ ಸಮಿತಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಬಳ ಸಮಿತಿ ಪ್ರಮುಖರು, ಶಿವಮೊಗ್ಗ – ಭದ್ರಾವತಿ ರಸ್ತೆಯ ಮಾಚೇನಹಳ್ಳಿಯ ಜಯಲಕ್ಷ್ಮಿ ಪೆಟ್ರೋಲ್ ಬಂಕ್ ಹಿಂಭಾಗ 16 ಎಕರೆ ಜಾಗದಲ್ಲಿ ಕಂಬಳ ನಡೆಸಲಾಗುತ್ತಿದೆ.
ಯಾರೆಲ್ಲ ಏನೆಲ್ಲ ಹೇಳಿದರು?
ಇದು ಕೇವಲ ಕೋಣ ಓಡಿಸುವ ಸ್ಪರ್ಧೆಯಲ್ಲ. ಇದರಲ್ಲಿ ತುಳುನಾಡಿನ ಇತಿಹಾಸ ಮತ್ತು ಸಂಪ್ರದಾಯ ಇದೆ. ಕೃಷಿ ಚಟುವಟಿಕೆ ಮುಗಿದ ನಂತರ ಈ ಸ್ಪರ್ಧೆಗಳು ನಡೆಯುತ್ತವೆ. ಪ್ರತಿ ಬಾರಿ 25 ಕಂಬಳ ನಡೆಯುತ್ತವೆ. ಈ ಬಾರಿಯ ಕೊನೆಯ ಕಂಬಳ ಶಿವಮೊಗ್ಗದಲ್ಲಿ ನಡೆಯಲಿದೆ. ಕಂಬಳ ನಡೆಸಲು ಹಲವು ನಿಯಮಗಳಿವೆ. ಆ ನಿಯಮದಂತೆಯೇ ಸ್ಪರ್ಧೆ ಆಯೋಜಿಸಲಾಗುತ್ತದೆ.
ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ
ಫೆ.10 ಮಧ್ಯಾಹ್ನ 3 ಗಂಟೆಗೆ ಭೂಮಿ ಪೂಜೆ ನಡೆಯಲಿದೆ. ಕಂಬಳ ಉತ್ಸವ ಇಡೀ ಊರಿನ ಹಬ್ಬವಾಗಿರಲಿದೆ. ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಕೆ.ಈ.ಕಾಂತೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಶಿವಮೊಗ್ಗದಲ್ಲಿ ಇದೇ ಮೊದಲು ಕಂಬಳ ನಡೆಯುತ್ತಿದೆ. ಈಗಾಗಲೆ ಸಂಸದ ರಾಘವೇಂದ್ರ, ಸಚಿವ ಮಧು ಬಂಗಾರಪ್ಪ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಏ.19 ಮತ್ತು 20 ರಂದು ಸ್ಪರ್ಧೆಗಳು ನಡೆಯಲಿದೆ. ಟ್ರ್ಯಾಕ್ ಸಿದ್ಧತೆಗೆ ಒಂದು ತಿಂಗಳು ಹಿಡಿಯಲಿದೆ. ತುಳುನಾಡು, ಮಲೆನಾಡು ಒಂದಾಗಿ ಉತ್ಸವ ನಡೆಯುತ್ತಿದೆ.
ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ
ಶಿವಮೊಗ್ಗ ಕಂಬಳದ ಹೈಲೈಟ್
» ಶಿವಮೊಗ್ಗದಲ್ಲಿ ಇದೇ ಮೊದಲು ಕಂಬಳ ಸ್ಪರ್ಧೆ ನಡೆಯುತ್ತಿದೆ.
» ಮಾಚೇನಹಳ್ಳಿಯಲ್ಲಿ ಫೆ.10ರಂದು ಕಂಬಳದ ಟ್ರ್ಯಾಕ್‌ಗೆ ಗುದ್ದಲಿ ಪೂಜೆ ಆಯೋಜಿಸಲಾಗಿದೆ.
» 16 ಎಕರೆ ವಿಸ್ತೀರ್ಣದಲ್ಲಿ ಕಂಬಳ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೃಹತ್ ವೇದಿಕೆ ನಿರ್ಮಾಣವಾಗಲಿದೆ.
» ನಟ, ಸಂಗೀತ ನಿರ್ದೇಶಕ ಗುರುಕಿರಣ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ.ಮೋಹನ್ ಆಳ್ವ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
» ಶಿವಮೊಗದಲ್ಲಿ ಸುಮಾರು 100 ಜೋಡಿ ಚಾಂಪಿಯನ್ ಕೋಣಗಳು ಭಾಗವಹಿಸಲಿವೆ.
» ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಕಂಬಳ ಉತ್ಸವ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಇ.ವಿಶ್ವಾಸ್, ಸಂದೀಪ್ ಶೆಟ್ಟಿ, ಕಿರಣ್ ಕುಮಾರ್ ಮಂಜಿಲಾ, ಶಶಿಧರ್ ಶೆಟ್ಟಿ, ಜಾಧವ್, ಚಿದಾನಂದ್, ಶಿವಾಜಿ, ಕುಬೇರಪ್ಪ, ಹರಿಪ್ರಸಾದ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ರಾತ್ರೋರಾತ್ರಿ ಹಾಡೋನಹಳ್ಳಿಯಲ್ಲಿ ಅಧಿಕಾರಿಗಳ ದಾಳಿ, ಅಬ್ಬಲಗೆರೆ ಬಳಿ ಟಿಪ್ಪರ್ ಸೀಜ್, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200