ಶಿವಮೊಗ್ಗ: ಜಿಲ್ಲಾ ಹಾಪ್‌ಕಾಮ್ಸ್, ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದಿಂದ ವಿನೋಬನಗರದ ಎಪಿಎಂಸಿ ಆವರಣದ ಪಕ್ಕದಲ್ಲಿ ಹಣ್ಣು ಮೇಳ ಆಯೋಜಿಸಲಾಗಿದೆ. ಇಲ್ಲಿ ಅಪರೂಪದ ತಳಿಯ ಮಾವು, ಹಲಸು ಮತ್ತು ಇತರೆ ಹಣ್ಣುಗಳ (Fruits Mela) ಮಾರಾಟ ಮತ್ತು ಪ್ರದರ್ಶನಕ್ಕೆ ಮಾಡಲಾಗುತ್ತಿದೆ.
ವಿವಿಧ ಹಣ್ಣುಗಳ ಮಾರಾಟಕ್ಕೆ ಹತ್ತು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವತ್ತು ಹಣ್ಣು ಮೇಳಕ್ಕೆ ಚಾಲನೆ ನೀಡಿದರು. ಮೇ 24 ಮತ್ತು 25ರಂದು ಹಣ್ಣು ಮೇಳ ನಡೆಯಲಿದೆ.
ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇಂತಹ ಮೇಳ ಆಯೋಜಿಸಬೇಕು. ಮೇಳಗಳಿಂದ ಅಪರೂಪದ ಎಲ್ಲಾ ತಳಿಯ ಹಣ್ಣುಗಳು ಜನರಿಗೆ ದೊರೆಯಲಿವೆ. ಮಧ್ಯವರ್ತಿಗಳ ಹಾವಳಿಯಿಲ್ಲದೇ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ಇದು ರೈತರಿಗೆ ಲಾಭದಾಯಕ.
– ಮಧು ಬಂಗಾರಪ್ಪ, ಸಚಿವ
ಆರೋಗ್ಯ ಕಾಪಾಡಿಕೊಳ್ಳಲು ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಹಣ್ಣು, ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸಬೇಕು. ರಸಾಯನಿಕ ಮುಕ್ತ ಮಾವು, ಹಲಸನ್ನು ಸೇವಿಸುವುದು ಉತ್ತಮ.
– ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ
ಗಮನ ಸೆಳೆದ ಮಿಯಾಝಾಕಿ
ಜಪಾನ್ ದೇಶದಲ್ಲಿ ಅತ್ಯಂತ ಬೇಡಿಕೆ ಇರುವ ಮಿಯಾಝಾಕಿ ಮಾವು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಅಲ್ಲಿ ಮಿಯಾಝಾಕಿ ಮಾವಿನ ಹಣ್ಣಿಗೆ ಪ್ರತಿ ಕೆ.ಜಿ.ಗೆ ಎರಡು ಲಕ್ಷ ರೂ.ವರೆಗು ಬೆಲೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮಿಯಾಝಾಕಿ ಹಣ್ಣಿನ ದುಬಾರಿ ದರದ ಮಾಹಿತಿ ತಿಳಿದು ಸಚಿವ ಮಧು ಬಂಗಾರಪ್ಪ ಸೇರಿದಂತೆ ಜನಪ್ರತಿನಿಧಿಗಳು ಬೆರಗುಗೊಂಡರು.
ರತ್ನಗಿರಿ ಮಾವು, ಕೊಪ್ಪಳ ಹಾಗೂ ಧಾರವಾಡ ಕೇಸರ್, ರೆಡ್ ಐವರಿ ಮಾವು, ಅಪ್ಪೆ, ಅಪೂಸ್, ಮಲ್ಲಿಕಾ, ಮಲಗೋವಾ ಸೇರಿದಂತೆ ವಿವಿಧ ತಳಿಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರತಿ ಸ್ಟಾಲ್‌ಗಳಿಗೂ ತೆರಳುತ್ತಿದ್ದ ಸಾರ್ವಜನಿಕರು ಮಾವಿನ ಹಣ್ಣುಗಳ ತಳಿ, ಅವುಗಳ ವಿಶೇಷತೆ ಬಗ್ಗೆ ಮಾಹಿತಿ ಪಡೆದರು.
ಹಲಸಿನ ಹಣ್ಣಿನಲ್ಲಿ ಕೆಳದಿ ಮಹಾರಾಜ ಹಲಸು, ಇಕ್ಕೇರಿ ಬಕ್ಕೆ, ಸರಗುಂದ ಬಕ್ಕೆ, ಕಾನಗೋಡು ಬಕ್ಕೆ, ರುದ್ರಾಕ್ಷಿ ಹಲಸು, ಬಿಟಿಎನ್ ಸೆಲೆಕ್ಷನ್, ಬೇಳೂರು ಚಂದ್ರ ಬಕ್ಕೆ, ಬಾಪಟ್ ಬಕ್ಕೆ, ಮಂಕಳಲೆ ರೆಡ್ ಸೇರಿದಂತೆ ವಿವಿಧ ಅಪರೂಪದ ಹಲಸಿನ ತಳಿಗಳು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿತ್ತು.
ಮಾವು, ಹಲಸು ಮಾತ್ರವಲ್ಲದೆ ಮೇಳದಲ್ಲಿ ವಾಟರ್ ಆಪಲ್, ಕಾಲಿಪಟ್ಟಿ ಸಪೋಟ, ಅಂಜೂರ, ದಾಳಿಂಬೆ, ಸೇಬು, ಪೈನಾಪಲ್, ನೇಂದ್ರ ಬಾಳೆ, ಚಂದ್ರಬಾಳೆ, ಡ್ರಾಗನ್ ಫ್ರೂಟ್, ಅವಕಾಡೊ, ಸ್ಟಾರ್ ಫ್ರೂಟ್, ವೈಟ್ ಜಾಮೂನ್, ಸಪೋಟ ಹಣ್ಣಿನ ಜತೆಯಲ್ಲಿ ತರಕಾರಿ, ಹೂವಿನ ಬೀಜಗಳು, ವಿವಿಧ ಹೂವಿನ ಸಸಿಗಳನ್ನು ಮಾರಾಟಕ್ಕೆ ಇಡಲಾಗಿದೆ.
ಹಾಪ್‌ಕಾಮ್ಸ್ ರಾಜ್ಯಾಧ್ಯಕ್ಷ ಬಿ.ಡಿ.ಭೂಕಾಂತ್, ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್, ಪ್ರಸನ್ನ ಕುಮಾರ್‌ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ » ಶಿವಮೊಗ್ಗದಿಂದ ಲಕ್ಷ ಲಕ್ಷ ಮೌಲ್ಯದ ಅಡಿಕೆ ಹೊತ್ತು ಸಾಗಿದ ಲಾರಿ ನಾಪತ್ತೆ, ಡ್ರೈವರ್ ಮೊಬೈಲ್ ಸ್ವಿಚ್ ಆಫ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200