ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸವವು ಮೇ 6ರಂದು ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಈ ಭಾರಿ ಘಟಿಕೋತ್ಸವದಲ್ಲಿ 79 ವಿದ್ಯಾರ್ಥಿಗಳು 155 ಸ್ವರ್ಣ ಪದಕಗಳನ್ನು (gold medals) ಪಡೆಯಲಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಈ ಬಾರಿ 68 ಮಹಿಳೆಯರು ಹಾಗೂ 11 ಪುರುಷ ವಿದ್ಯಾರ್ಥಿಗಳು ಪದಕ ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ 21 ನಗದು ಬಹುಮಾನಗಳನ್ನು ಒಟ್ಟು 29 ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ತಿಳಿಸಿದರು.

ಅಭಿಶೇಕ್‌ಗೆ ಅತಿ ಹೆಚ್ಚು ಪದಕ
ಮೌಲ್ಯಮಾಪನ ಕುಲಸಚಿವ ಪ್ರೊ. ಆರ್.ತಿಮ್ಮರಾಯಪ್ಪ ಮಾತನಾಡಿ, ಎಂ.ಎ ಕನ್ನಡ ವಿಭಾಗದ ಅಭಿಶೇಕ್ ಹೆಚ್.ಎಂ. ಅತಿ ಹೆಚ್ಚು ಸ್ವರ್ಣ ಪದಕ ಪಡೆದಿದ್ದಾರೆ. ಅಭಿಶೇಕ್, 10 ಸ್ವರ್ಣದ ಪದಕ ಹಾಗೂ 2 ನಗದು ಬಹುಮಾನ ಪಡೆದಿದ್ದಾರೆ ಎಂದು ತಿಳಿಸಿದರು. ಕುವೆಂಪು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಆರ್.ತಿಮ್ಮರಾಯಪ್ಪ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಾರೆಲ್ಲ ಎಷ್ಟು ಸ್ವರ್ಣ ಪದಕ ಪಡೆದಿದ್ದಾರೆ?
- ರಕ್ಷಾ (ಎಂ.ಎಸ್ಸಿ ಪರಿಸರ ವಿಜ್ಞಾನ): 7 ಸ್ವರ್ಣ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
- ಸೃಷ್ಟಿ ಆರ್. (ಎಂ.ಎಸ್ಸಿ ಜೈವಿಕ ತಂತ್ರಜ್ಞಾನ): ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ 6 ಸ್ವರ್ಣ ಪದಕ ಪಡೆದಿದ್ದಾರೆ.
- ಸಹನಾ ಗಣೇಶ್ ಶೇಟ್ (ಎಂ.ಬಿ.ಎ): ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿನಿ 5 ಸ್ವರ್ಣ ಪದಕ ಹಾಗೂ 1 ನಗದು ಬಹುಮಾನ ಪಡೆದಿದ್ದಾರೆ.
- ಸಜನಾ.ಎಸ್ (ಎಂ.ಎ ಸಮಾಜಶಾಸ್ತ್ರ): ಜ್ಞಾನ ಸಹ್ಯಾದ್ರಿಯ ವಿದ್ಯಾರ್ಥಿನಿ 5 ಸ್ವರ್ಣ ಪದಕ ಪಡೆದಿದ್ದಾರೆ.
- ಅಭಿಲಾಷ್ ಎಲ್. (ಎಂ.ಎಸ್ಸಿ ಗಣಿತಶಾಸ್ತ್ರ): ಚಿಕ್ಕಮಗಳೂರಿನ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ 4 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ : ಕುವೆಂಪು ವಿವಿ 35ನೇ ಘಟಿಕೋತ್ಸವ, ದಿನಾಂಕ ಪ್ರಕಟ, ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳೆಷ್ಟು?
4 ಮತ್ತು 3 ಸ್ವರ್ಣ ಪದಕ ಪಡೆದವರು
ಶಶಾಂಕ್.ಐ (ಎಂ.ಎ ಇತಿಹಾಸ), ಚೈತ್ರಾ ಪಿ. ಪಾಟೀಲ್ (ಎಂ.ಎಸ್ಸಿ ಔದ್ಯೋಗಿಕ ರಸಾಯನಶಾಸ್ತ್ರ), ಐಶ್ವರ್ಯ ಈ.ಎಂ (ಎಂ.ಎಸ್ಸಿ ಸಸ್ಯಶಾಸ್ತ್ರ) ಹಾಗೂ ಅಕ್ಷಯ್ ಎ.ಎಲ್. (ಬಿ.ಕಾಂ) ಅವರು ಪಡೆದುಕೊಂಡಿದ್ದಾರೆ.
ಅಂಕಿತಾ.ಎಂ.ಸಿ. (ಪತ್ರಿಕೋದ್ಯಮ), ಅನು ಆರ್. (ಎಂ.ಎಸ್ಸಿ. ಭೌತಶಾಸ್ತ್ರ) ಹಾಗೂ ಸುಮ.ಜಿ (ಬಿ.ಎಡ್) ಅವರು ತಲಾ 3 ಸ್ವರ್ಣ ಪದಕ ಹಾಗೂ 1 ನಗದು ಬಹುಮಾನ ಪಡೆದಿದ್ದಾರೆ. ಉಳಿದಂತೆ ಮನೋಹರ ನಾಯ್ಕ್.ಕೆ (ಎಂ.ಎ ರಾಜ್ಯಶಾಸ್ತ್ರ), ಸೋನಾಲಿ.ಸಿ (ಎಂ.ಎ ಅರ್ಥಶಾಸ್ತ್ರ), ಅಭಿಜ್ಞಾ.ಟಿ.ಕೆ (ಎಂ.ಸಿ.ಎ), ಸ್ಮಿತಾ.ಹೆಚ್.ಸಿ (ಎಂ.ಕಾಂ) ಮತ್ತು ಪ್ರತಿಕ್ಷಾ.ವಿ.ಆರ್ (ಎಂ.ಎಸ್ಸಿ ಪ್ರಾಣಿಶಾಸ್ತ್ರ) ಅವರು ತಲಾ 3 ಸ್ವರ್ಣ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಭಾಗವಾರು ಪಿ.ಹೆಚ್.ಡಿ ವಿವರ
ಈ ಬಾರಿ ಒಟ್ಟು 163 ಅಭ್ಯರ್ಥಿಗಳು ಪಿ.ಹೆಚ್.ಡಿ ಪದವಿ ಪಡೆಯುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 84 ಸಂಶೋಧಕರು (48 ಪುರುಷರು, 36 ಮಹಿಳೆಯರು) ಪದವಿ ಪಡೆಯುತ್ತಿದ್ದಾರೆ.
ಕಲಾ ವಿಭಾಗದಲ್ಲಿ 63 ಅಭ್ಯರ್ಥಿಗಳು (46 ಪುರುಷರು, 17 ಮಹಿಳೆಯರು) ಸಂಶೋಧನಾ ಪದವಿ ಪಡೆಯಲಿದ್ದಾರೆ. ಶಿಕ್ಷಣ ವಿಭಾಗದಲ್ಲಿ 9 ಅಭ್ಯರ್ಥಿಗಳು (8 ಪುರುಷರು, 1 ಮಹಿಳೆ) ಹಾಗೂ ವಾಣಿಜ್ಯ ವಿಭಾಗದಿಂದ 6 ಅಭ್ಯರ್ಥಿಗಳು (3 ಪುರುಷರು, 3 ಮಹಿಳೆಯರು) ಪದವಿ ಮುಡಿಗೇರಿಸಿಕೊಳ್ಳಲಿದ್ದಾರೆ. ಕಾನೂನು ವಿಭಾಗದಿಂದ ಒಬ್ಬ ಪುರುಷ ಅಭ್ಯರ್ಥಿ ಪಿ.ಹೆಚ್.ಡಿ ಪದವಿ ಪಡೆಯಲು ಅರ್ಹರಾಗಿದ್ದಾರೆ. ಒಟ್ಟಾರೆಯಾಗಿ 106 ಪುರುಷರು ಹಾಗೂ 57 ಮಹಿಳೆಯರು ಈ ಬಾರಿ ಸಂಶೋಧನಾ ಪದವಿಯನ್ನು ಸ್ವೀಕರಿಸಲಿದ್ದಾರೆ ಎಂದು ವಿಶ್ವವಿದ್ಯಾಲಯದ ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.
