ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಕರ್ನಾಟಕ ಗಝಲ್ ಅಕಾಡೆಮಿ ವತಿಯಿಂದ ಮೂರನೇ ಅಖಿಲ ಕರ್ನಾಟಕ ಗಝಲ್ ಸಮ್ಮೇಳನ ಹಾಗೂ ಮಿರ್ಜಾ ಗಾಲಿಬ್ ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 23 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಹ್ಯಾದ್ರಿ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ಧಯ್ಯ ತಿಳಿಸಿದ್ದಾರೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ಸದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಶಿವಮೊಗ್ಗದಲ್ಲಿ ಗಝಲ್ ವಾತಾವರಣವನ್ನು ಬೆಳೆಸುವ ಸಲುವಾಗಿ ಈ ಸಮ್ಮೇಳನ ಆಯೋಜಿಸಲಾಗಿದೆ. ಜಂಬಣ್ಣ ಅಮರಚಿಂತ ವೇದಿಕೆಯಲ್ಲಿ ನಡೆಯಲಿರುವ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಿದ್ಧಾರಾಮ ಹಿರೇಮಠ ಕೊಡ್ಲಿಗಿ ವಹಿಸಲಿದ್ದು, ಹಿರಿಯ ಸಾಹಿತಿ ಸವಿತಾ ನಾಗಭೂಷಣ್ ಉದ್ಘಾಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ರಾಜ್ಯಮಟ್ಟದ ಮಿರ್ಜಾ ಗಾಲಿಬ್ ಗಝಲ್ ಪ್ರಶಸ್ತಿಗೆ ರತ್ನ ಕೆ. ಭಟ್ ತಲೆಂಚೇರಿ ಆಯ್ಕೆಯಾಗಿದ್ದಾರೆ ಎಂದರು.

ಪದವೀಧರರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಯಾಗಿ ಮೊಹಮ್ಮದ್ ಅನ್ಸರ್ ಸಾಬ್ ಖಾದ್ರಿ ಭಾಗವಹಿಸಲಿದ್ದಾರೆ. ಡಾ. ಸಿದ್ಧಾರಾಮ ಹೊನ್ಕಲ್ ಅವರು ಗಝಲ್ ಯಾನ ಅಕಾಡೆಮಿಯ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಡಾ. ಕಾಶಿನಾಥ ಅಂಬಲಗೆ, ಕಾರ್ಯದರ್ಶಿ ಮಹಿಪಾಲ ರೆಡ್ಡಿ ಮುನ್ನೂರು, ಹಿರಿಯ ಗಝಲ್‌ಕಾರರಾದ ಅಬ್ದುಲ್ ಹೈ ತೋರಣಗಲ್ಲು, ಸಿಕಂದರ್ ಅಲಿ ತೋರಣಗಲ್ಲು, ನೀಲಮ್ಮ ಬಿ. ಮಲ್ಲಿ ಅವರು 2025-26ನೇ ಸಾಲಿನಲ್ಲಿ ಪ್ರಕಟಗೊಂಡ ಗಝಲ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮಲೆನಾಡಿನ ಖ್ಯಾತ ಗಝಲ್ ಗಾಯಕಾದ ಇಮಿಯಾಜ್ ಸುಲ್ತಾನ್ ಕೋಣಂದೂರು ಅವರಿಂದ ಗಝಲ್ ಗಾಯನ ನಡೆಯಲಿದೆ. ಸಮ್ಮೇಳನದಲ್ಲಿ ಎರಡು ಗಝಲ್ ಗೋಷ್ಟಿ, ಗಾಯನ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಸಂಜೆ 4 ಗಂಟೆಯಿಂದ ಕನ್ನಡ ಗಝಲ್ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಗಝಲ್‌ಕಾರರು, ಆಸಕ್ತರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸಮ್ಮೇಳನ ಸಂಚಾಲಕಿ ಡಾ. ಹಸೀನಾ ಎಚ್. ಖಾದ್ರಿ, ಹಸನ್ ಬೆಳ್ಳಿಗನೂಡು ಮತ್ತು ಸೈಯದ್ ಖಲಂದರ್ ಉಪಸ್ಥಿತರಿದ್ದರು.