ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 15 NOVEMBER 2024 : ಸರ್ಕಾರಿ ನೌಕರರ ಜಿಲ್ಲಾ ಶಾಖೆಯ ನಿರ್ದೇಶಕರ ಆಯ್ಕೆಗೆ ನಾಳೆ ಚುನಾವಣೆ (Election) ನಡೆಯಲಿದೆ. ಇದಕ್ಕೂ ಮುನ್ನ ನಡೆದ ಹಲವು ಬೆಳವಣಿಗೆ ತೀವ್ರ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ನೌಕರರ ಸಂಘದ ಚುನಾವಣೆ ರಾಜಕೀಯ ಮೇಲಾಟಕ್ಕು ಕಾರಣವಾಗಿದೆ.
38 ಮಂದಿ ಅವಿರೋಧ ಆಯ್ಕೆ
ಜಿಲ್ಲಾ ಘಟಕದ 68 ಸ್ಥಾನಗಳಿಗೆ ಅ.28ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ಒಟ್ಟು 168 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ನ.11 ಕೊನೆಯ ದಿನವಾಗಿತ್ತು. ಈಗಾಗಲೇ 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಿಗೆ ನ.16ರಂದು ಚುನಾವಣೆ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.
ಬಿ.ಹೆಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢ ಶಾಲೆ ವಿಭಾಗದಲ್ಲಿ ಚುನಾವಣೆ ನಡೆಯಲಿದೆ. ಅರ್ಹ ಮತದಾರರು ಯಾವುದೇ ಬೆದರಿಕೆ, ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭತಿಯಿಂದ ಮತ ಚಲಾಯಿಸಬೇಕು.
ಎಸ್.ಆರ್.ಚಂದ್ರಪ್ಪ, ಚುನಾವಣಾಧಿಕಾರಿ
ತೀವ್ರ ಕುತೂಹಲ, ಕೆಲವರಿಗೆ ಢವಢವ
ನೌಕರರ ಸಂಘದ ಚುನಾವಣೆ ಸರ್ಕಾರಿ ನೌಕರರ ವಿವಿಧ ಗುಂಪುಗಳ ಮಧ್ಯೆ ಮಾತ್ರ ಪ್ರತಿಷ್ಠೆಗೆ ಕಾರಣವಾಗಬೇಕಿತ್ತು. ಆದರೆ ಈ ಬಾರಿ ರಾಜಕಾರಣಿಗಳು ಮಧ್ಯ ಪ್ರವೇಶಿಸಿರುವ ಆರೋಪವಿದೆ. ಇದೇ ಕಾರಣಕ್ಕೆ ಹಲವರ ವರ್ಗಾವಣೆ, ಕೆಲವರಿಗೆ ಒತ್ತಡ ಹೇರುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಹಾಗಾಗಿ ನೌಕರರ ಸಂಘದ ಚುನಾವಣೆ ನೌಕರರಷ್ಟೆ ಅಲ್ಲದೆ ಸಾರ್ವಜನಿಕ ವಲಯದಲ್ಲಿಯು ಕುತೂಹಲ ಮೂಡಿಸಿದೆ.
ಚುನಾವಣೆ ಪ್ರಕ್ರಿಯೆ ಆರಂಭಕ್ಕು ಮೊದಲೇ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಷ್.ಷಡಾಕ್ಷರಿ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೆ ಸರ್ಕಾರ ಆಡಳಿತಾತ್ಮಕ ಕಾರಣ ನೀಡಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಷಡಾಕ್ಷರಿ ನಡುವಿನ ಶೀತಲ ಸಮರವೆ ಈ ಬೆಳವಣಿಗೆಗೆ ಕಾರಣ ಎಂದು ನೌಕರರ ವಲಯದಲ್ಲಿ ಚರ್ಚೆ ಇದೆ. ಈಗ ಕಂದಾಯ ಇಲಾಖೆಯಿಂದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದ ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ವರ್ಗವಾಗಿದೆ. ಚುನಾವಣೆಗೆ ಎರಡು ದಿನ ಮೊದಲು ನಡೆದ ಈ ಬೆಳವಣಿಗೆ ನೌಕರರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ, ಕಣದಲ್ಲಿರುವ ಮತ್ತಷ್ಟು ಅಭ್ಯರ್ಥಿಗಳಿಗು ಮುಂದೇನು ಎಂಬ ಭೀತಿ ಇದೆ.
ಚುನಾವಣೆಗೆ ಸ್ಪರ್ಧೆ ಮಾಡಿರುವ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ಧಮ್ಕಿ ಹಾಕಲಾಗುತ್ತಿದೆ. ಅವರ ಸ್ವಾತಂತ್ರ್ಯ ಕಸಿಯುವ, ಹೆದರಿಸುವ ಕೆಲಸ ಆಗುತ್ತಿದೆ. ತಹಶೀಲ್ದಾರ್ ಶಿವಮೊಗ್ಗಕ್ಕೆ ಬಂದು 9 ತಿಂಗಳಾಗಿದೆ. ಅಷ್ಟರಲ್ಲೆ ಅವರ ವರ್ಗಾವಣೆ ಮಾಡಿದ್ದಾರೆ. ಅಧಿಕಾರಿಗಳು ಇಂತಹ ಗೊಡ್ಡು ಬೆದರಿಕೆಗೆ ಹೆದರಬಾರದು.
ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ಗೆಲ್ಲೋದ್ಯಾರು? ಯಾರ ಬಣಕ್ಕೆ ಬಲ ಸಿಗಲಿದೆ?
ವಿವಿಧ ಇಲಾಖೆಗಳಿಂದ 38 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇವರೆಲ್ಲ ಸಿ.ಎಸ್.ಷಡಾಕ್ಷರಿ ಬಣದವರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಷಡಾಕ್ಷರಿ ವರ್ಗವಾಗಿದ್ದರೂ ಅವರ ಪ್ರಾಬಲ್ಯ ಇನ್ನು ಇದೆ ಎಂದು ಬಿಂಬಿಸುವ ಪ್ರಯತ್ನವಾಗಿತ್ತು.
ಇದನ್ನೂ ಓದಿ » ಶಿವಮೊಗ್ಗ ತಹಶೀಲ್ದಾರ್ ವರ್ಗಾವಣೆ, ಅನುಮಾನ ಮೂಡಿಸಿದ ನಡೆ
ಇತ್ತ, ನೌಕರರ ಸಂಘದ ಮಾಜಿ ಅಧ್ಯಕ್ಷ ರಘುರಾಮ್ ದೇವಾಡಿಗ, ಮೋಹನ್ ಕುಮಾರ್ ಅವರೊಂದಿಗೆ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದರು. ಈ ಮೂಲಕ ಸಚಿವರು ಮತ್ತು ಸರ್ಕಾರ ತಮ್ಮೊಂದಿಗಿದೆ ಎಂದು ಪ್ರಚುರ ಪಡಿಸುವ ಯತ್ನವಾಗಿತ್ತು. ಹಾಗಾಗಿ, ಶನಿವಾರ ನಡೆಯುವ ಚುನಾವಣೆ ಮಹತ್ವ ಪಡೆದುಕೊಂಡಿದೆ. ಗೆಲ್ಲುವವರಾರು, ಯಾರ ಬಣಕ್ಕೆ ಬಲ ಸಿಗಲಿದೆ ಎಂಬ ಚರ್ಚೆ ಜೋರಿದೆ.
Election
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422