SHIVAMOGGA LIVE NEWS | 1 MARCH 2023
SHIMOGA : 7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು (Employees) ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಜನರಿಲ್ಲದೆ ಬಿಕೋ ಅನ್ನುತ್ತಿದ್ದವು. ಈ ನಡುವೆ ಸರ್ಕಾರ ವೇತನ ಹೆಚ್ಚಳ ಕುರಿತು ಆದೇಶ ಹೊರಡಿಸಿದ್ದು, ಮುಷ್ಕರ ಕೈ ಬಿಡುವುದಾಗಿ ಸರ್ಕಾರಿ ನೌಕರರ (Employees) ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೌನ
ಸದಾ ಅಧಿಕಾರಿಗಳು, ಜನ ಜಂಗುಳಿಯಿಂದ ಇರುತ್ತಿದ್ದ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಕಟ್ಟಡಗಳಲ್ಲಿ ಇವತ್ತು ಮೌನ ಆವರಿಸಿತ್ತು. ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಜಿಲ್ಲಾಧಿಕಾರಿ ಕೊಠಡಿ ಹೊರತು ಉಳಿದೆಲ್ಲ ಕೊಠಡಿಗಳಿಗೆ ಬೀಗ ಹಾಕಲಾಗಿತ್ತು. ಹಾಗಾಗಿ ಇಡೀ ಕಟ್ಟಡದಲ್ಲಿ ಮೌನ ಆವರಿಸಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇನ್ನು, ತಾಲೂಕು ಕಚೇರಿ ಕಟ್ಟಡದಲ್ಲಿ ಎ.ಸಿ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವು ಪ್ರಮುಖ ಕಚೇರಿಗಳಿವೆ. ನಾಡ ಕಚೇರಿಯು ಇರುವುದರಿಂದ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಭೂಮಿ ಅರ್ಜಿ ಸ್ವೀಕೃತಿ ಕೇಂದ್ರ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರ ಸೇರಿದಂತೆ ವಿವಿಧ ಯೋಜನೆಗಳ ಕಚೇರಿಗಳು ಇವೆ. ನಿತ್ಯ ಸಾವಿರಾರು ಜನರು ಇಲ್ಲಿಗೆ ಬಂದು ಹೋಗುತ್ತಿದ್ದರು. ಮುಷ್ಕರದ ಹಿನ್ನೆಲೆ ಕಟ್ಟಡದಲ್ಲಿ ವಾತಾವರಣ ಬಿಕೋ ಅನ್ನುತ್ತಿತ್ತು.
ಇದನ್ನೂ ಓದಿ – ಯಾವುದಕ್ಕೂ ಸಾಕಾಗುತ್ತಿಲ್ಲ ಸರ್ಕಾರದ ಹಣ, 30 ಸಾವಿರಕ್ಕೆ ಹೆಚ್ಚಿಸುವಂತೆ ವಿದ್ಯಾರ್ಥಿಗಳ ಆಗ್ರಹ
ಕೆಲಸಕ್ಕೆ ಬಂದವರ ಪರದಾಟ
ಇನ್ನು, ಮುಷ್ಕರದ ಕುರಿತು ಸರಿಯಾದ ಮಾಹಿತಿ ಇಲ್ಲದೆ ಕೆಲವು ಸಾರ್ವಜನಿಕರು ಕಚೇರಿಗಳಿಗೆ ಆಗಮಿಸಿದ್ದರು. ಅಂತಹವರು ಕಚೇರಿಗಳು ಬಂದ್ ಆಗಿರುವುದನ್ನು ಕಂಡು ಗೊಂದಲಕ್ಕೀಡಾದರು. ಮಾಧ್ಯಮದವರು, ಕಚೇರಿ ಆವರಣದಲ್ಲಿದ್ದವರಿಂದ ಮಾಹಿತಿ ಪಡೆದು, ಹಿಂದಕ್ಕೆ ಮರಳಿದರು.
ಒಪಿಡಿ ಬಂದ್, ಕಪ್ಪು ಪಟ್ಟಿ ಧರಿಸಿ ಕೆಲಸ
ಮುಷ್ಕರಕ್ಕೆ ವೈದ್ಯರು ಕೂಡ ಬೆಂಬಲ ನೀಡಿದ್ದರು. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಲು ನಿರ್ಧರಿಸಲಾಗಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಿರಲಿಲ್ಲ. ಆದರೆ ಒಪಿಡಿಯಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಲಿಲ್ಲ. ಉಳಿದೆಡೆ ವೈದ್ಯರು ಎಂದಿನಂತೆ ಸೇವೆ ನೀಡಿದರು. ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಿದರು. ಕೆಲಸದ ವೇಳೆ ಎಲ್ಲರೂ ಕಪ್ಪು ಪಟ್ಟಿ ಧರಿಸಬೇಕು ಎಂದು ನಿರ್ಧರಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮತ್ತೊಂದು ವಿಶ್ವವಿದ್ಯಾಲಯ, ಗುಜರಾತ್ ನಲ್ಲಷ್ಟೆ ಇತ್ತು ಈ ವಿವಿ, ಏನಿದರ ವಿಶೇಷತೆ? ಏನೆಲ್ಲ ಕೋರ್ಸ್ ಇದೆ?
ಶಾಲೆ, ಕಾಲೇಜುಗಳಲ್ಲಿ ಪಾಠವಿಲ್ಲ
ಸರ್ಕಾರಿ ಶಾಲೆ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಕೂಡ ಮುಷ್ಕರ ನಡೆಸಿದರು. ಸರ್ಕಾರಿ ಶಾಲೆಗಳಿಗೆ ಶಿಕ್ಷಕರು, ಕಾಲೇಜುಗಳಿಗೆ ಉಪನ್ಯಾಸಕರು ಬಾರದ ಹಿನ್ನೆಲೆ ಶಿಕ್ಷಣ ಸಂಸ್ಥೆಗಳಲ್ಲಿ ರಜೆಯ ವಾತಾವರಣವಿತ್ತು. ದುರ್ಗಿಗುಡಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಭಾನುವಾರದ ವಾತಾವರಣ ಕಂಡು ಬಂತು.
ಮುಷ್ಕರ ಹಿಂಪಡೆದ ನೌಕರರ ಸಂಘ
ಈ ನಡುವೆ ರಾಜ್ಯ ಸರ್ಕಾರ ನೌಕರರ ಬೇಡಿಕೆ ಈಡೇರಿಕೆ ಸಂಬಂಧ ಆದೇಶ ಹೊರಡಿಸಿದೆ. ಹೀಗಾಗಿ ಮುಷ್ಕರನ್ನು ಕೈ ಬಿಡಲಾಗಿದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಸರ್ಕಾರ ಮಧ್ಯಂತರ ಪರಿಹಾರವಾಗಿ ಶೇ.17ರಂದು ವೇತನ ಹೆಚ್ಚಳ ಮತ್ತು ಹಳೆ ಪಿಂಚಣಿ ನೀತಿಯ ಮರು ಜಾರಿ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಲು ಒಪ್ಪಿಕೊಂಡಿದೆ. ಈ ತೀರ್ಮಾನವನ್ನು ಒಪ್ಪಿಕೊಂಡು ಮುಷ್ಕರ ಅಂತ್ಯಗೊಳಿಸುತ್ತಿದ್ದೇವೆ’ ಎಂದು ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.