ಶಿವಮೊಗ್ಗದ ಲೈವ್.ಕಾಂ | SHIMOGA NEWS | 25 ಡಿಸೆಂಬರ್ 2021
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಪರಿಣಾಮ ನಗರದೆಲ್ಲೆಡೆ ಧೂಳು ಆವೃತ್ತವಾಗಿದ್ದು, ಸಾರ್ವಜನಿಕರ ಆರೋಗ್ಯ ಹದಗೆಡುತ್ತಿದೆ. ಕರೋನಾಕ್ಕಿಂತಲೂ ಧೂಳಿನ ಭೀತಿಯಿಂದಾಗಿ ಮಾಸ್ಕ್ ಧರಿಸಿ ಓಡಾಡುವಂತಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸ್ಮಾರ್ಟ್ ಸಿಟಿ ಯೋಜನೆ ಅಡಿ ಏಕಕಾಲಕ್ಕೆ ಚರಂಡಿ, ರಸ್ತೆ, ಫುಟ್‌ಪಾತ್ ಹೀಗೆ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ, ಜನರಿಗೆ ನಿತ್ಯ ಧೂಳಿನ ಸ್ನಾನವಾಗುತ್ತಿದೆ. ಹೊರಗಡೆ ಓಡಾಡಿದರೆ ಸಾಕು ಹಲವರಲ್ಲಿ ಶೀತ, ಗಂಟಲು ನೋವು, ತಲೆ ಭಾರದ ಅನುಭವ, ಪಿತ್ತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕೊರೊನಾ ಭೀತಿಯಿಂದಾಗಿ ಜನ ಆಸ್ಪತ್ರೆಗೆ ಹೋಗದೇ ಮೆಡಿಕಲ್‌ಗಳಲ್ಲಿಯೇ ಔಷಧ ಪಡೆಯುತ್ತಿದ್ದಾರೆ. ವಿಶೇಷವೆಂದರೆ, ಇತ್ತೀಚೆಗೆ ಇಂತಹವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
ಶ್ವಾಸಕೋಶದಲ್ಲಿ ಧೂಳು ಶೇಖರಣೆ
ಈಗಾಗಲೇ ಸೈನುಸೈಟಿಸ್ ಹಾಗೂ ಅಸ್ತಮಾ ಸಮಸ್ಯೆ ಇರುವವರಿಗೆ ಇದರಿಂದ ಗಂಭೀರ ಸಮಸ್ಯೆಗಳಾಗುತ್ತಿವೆ. ಶ್ವಾಸಕೋಶದಲ್ಲಿ ಧೂಳು ಶೇಖರಣೆಯಾಗಿ ನಾನಾ ಬಗೆಯ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಇದ್ಯಾವುದರ ಪರಿವೆಯೇ ಇಲ್ಲದೇ ಆಡಳಿತ ಯಂತ್ರ ಮೌನವಾಗಿದೆ. ಉತ್ತಮ ಆರೋಗ್ಯ ಜನರ ಹಕ್ಕಾಗಿದೆ. ಆದರೆ, ಅದನ್ನೇ ಆಡಳಿತ ಯಂತ್ರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ.
ಮೂರು ಬಗೆಯ ಧೂಳು
ಧೂಳಿನಲ್ಲಿ ಪ್ರಮುಖವಾಗಿ ಮೂರು ಪ್ರಭೇದಗಳಿದ್ದು, ಕಾರ್ಖಾನೆ, ಭೂಮಿ ಅಗೆದಾಗ ಹಾಗೂ ಸಿಮೆಂಟ್ ಇತ್ಯಾದಿ ಕಾಮಗಾರಿಗಳಿಂದಾಗಿಯೂ ಧೂಳು ವಾತಾವರಣದಲ್ಲಿ ಮಿಶ್ರಣವಾಗುತ್ತದೆ. ಶಿವಮೊಗ್ಗ ನಗರದಲ್ಲಿ ಪ್ರಸ್ತುತ ಸಿಮೆಂಟ್ ಮತ್ತು ಭೂಮಿ ಅಗೆಯುವುದರಿಂದ ಉಂಟಾಗುವ ಧೂಳಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಲ್ಲಿ ಸಿಮೆಂಟ್, ಜಲ್ಲಿ ಇತ್ಯಾದಿಗಳ ಧೂಳು ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.
ಭೂಮಿ ಅಗೆದಾಗ ಅದರಿಂದ ಹಾರುವ ಧೂಳಿನಿಂದ ಆ ಕ್ಷಣಕ್ಕೆ ಶೀತ, ಸೀನು, ಕೆಮ್ಮು, ಪಿತ್ತ ಶೇಖರಣೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಶಿವಮೊಗ್ಗದಲ್ಲಿ ಕಾಮಗಾರಿಗಳಿಂದಾಗಿ ಸಿಮೆಂಟ್ ಮತ್ತು ಮಣ್ಣಿನ ಧೂಳಿನಲ್ಲಿ ಹೆಚ್ಚಳವಾಗಿದೆ. ಹೀಗಾಗಿ, ಸಂಬಂಧಪಟ್ಟವರು ಇದರೆಡೆಗೆ ಗಮನಹರಿಸಬೇಕು. ಇಲ್ಲದಿದ್ದರೆ, ಜನರ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳಾಗುವ ಸಾಧ್ಯತೆಯೂ ಇದೆ.
ಸೈನುಸೈಟಿಸ್, ಅಸ್ತಮಾ ಇದ್ದವರು ಹುಷಾರ್
ಈಗಾಗಲೇ ಸೈನುಸೈಟಿಸ್, ಅಸ್ತಮಾ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿದ್ದವರು ಧೂಳಿನಿಂದ ಜಾಗೃತೆ ವಹಿಸಲೇಬೇಕಿದೆ. ಇಲ್ಲದಿದ್ದರೆ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಯೂ ಇದೆ.
ಸೈನುಸೈಟಿಸ್ ತೊಂದರೆ ಇರುವವರಿಗೆ ವರ್ಷಕ್ಕೊಮ್ಮೆ ಉಸಿರಾಟ ಸಂಬಂಧ ಸಮಸ್ಯೆ ಉಲ್ಬಣವಾಗುತ್ತದೆ. ಆದರೆ, ಇಂತಹ ಧೂಳು ಸೇವನೆಯಿಂದ ಈ ಸಮಸ್ಯೆ ಪದೇ ಪದೆ ಉಂಟಾಗುವ ಸಾಧ್ಯತೆಯೂ ಇದೆ. ಜೊತೆಗೆ, ಉಸಿರಾಟ ತೊಂದರೆ, ವಿಂಡ್ ಪೈಪ್‌ನಲ್ಲಿ ಸಮಸ್ಯೆಗಳು ಉಲ್ಬಣಿಸಬಹುದು. ಅದಕ್ಕಾಗಿ, ಈಗಾಗಲೇ ಸಮಸ್ಯೆಗಳಿರುವವರು ಸಾಧ್ಯವಾದಷ್ಟು ಧೂಳಿನಿಂದ ದೂರವಿರಬೇಕು. ಕಡ್ಡಾಯವಾಗಿ ಮಾಸ್ಕ್ ಧದರಿಸಬೇಕು ಎನ್ನುವುದು ತಜ್ಞ ವೈದ್ಯರ ಸಲಹೆ.
ಕೋವಿಡ್‌ನಿಂದ ಗುಣಮುಖರಾಗಿ 6 ತಿಂಗಳಿಂದ 1 ವರ್ಷವಾದಲ್ಲಿ ಅಂತಹವರ ಶ್ವಾಸಕೋಶದಲ್ಲಿ ಈಗಾಗಲೇ ಕೆಲವು ಗಾಯಗಳಾಗಿರುತ್ತವೆ. ಒಂದುವೇಳೆ, ನಿತ್ಯ ಧೂಳು ಮಿಶ್ರಿತ ಗಾಳಿ ಉಸಿರಾಡಿದ್ದಲ್ಲಿ ಅವರಿಗೆ ಹೆಚ್ಚಿನ ತೊಂದರೆ ಕಟ್ಟಿಟ್ಟ ಬುತ್ತಿ.
ಸೈನಯಸೈಟಿಸ್, ಅಸ್ತಮಾ, ಕೋವಿಡ್‌ನಿಂದ ಗುಣಮುಖರಾದವರು ಧೂಳಿನಿಂದ ದೂರವಿರಬೇಕು. ಇಲ್ಲದಿದ್ದದರೆ ಆರೋಗ್ಯದಲ್ಲಿ ಸಾಕಷ್ಟು ತೊಂದರೆಗಳಾಗುವ ಸಾಧ್ಯತೆ ಇದೆ. ಮಾಸ್ಕ್ ಧಾರಣೆ, ಬೈಕ್‌ನಲ್ಲಿ ಹೋಗಬೇಕಾದರೆ ಪೂರ್ಣ ಹೆಲ್ಮೆಟ್ ಧರಿಸಿ ಗ್ಲಾಸ್ ಹಾಕಿಕೊಳ್ಳಬೇಕು ಅನ್ನುತ್ತಾರೆ ಇಎನ್‌ಟಿ ಸರ್ಜನ್ ಡಾ.ಎಂ.ವಿ.ವಿನಯ್.
ನೀರು ಸಿಂಪಡಣೆ ಮಾಡುತ್ತಿಲ್ಲ
ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಆಗಾಗ ನೀರು ಸಿಂಪಡಣೆ ಮಾಡಿದರೆ ಧೂಳು ಏಳುವುದು ಕಡಿಮೆಯಾಗಲಿದೆ. ಆದರೆ ಸ್ಮಾರ್ಟ್ ಸಿಟಿ ಇಂಜಿನಿಯರ್’ಗಳಾಗಲಿ, ಗುತ್ತಿಗೆದಾರರಾಗಲಿ ಈ ಬಗ್ಗೆ ಕ್ಯಾರೆ ಅನ್ನುತ್ತಿಲ್ಲ. ಇದೆ ಕಾರಣಕ್ಕೆ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ.
ಸಾರ್ವಜನಿಕರು ಧೂಳಿನಿಂದ ದೂರವಿರುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ತಾವು ಮುತುವರ್ಜಿ ವಹಿಸಬೇಕು. ಜೊತೆಗೆ, ಮಹಾನಗರ ಪಾಲಿಕೆಯಿಂದ ಎಲ್ಲೆಲ್ಲಿ ಕಾಮಗಾರಿ ನಡೆಯುತ್ತಿದದೆಯೋ ಅಂತಹ ಸ್ಥಳಗಳಲ್ಲಿ, ಜನದಟ್ಟಣೆ ಹೆಚ್ಚಿರುವ ಸ್ಥಳದಲ್ಲಿ ನೀರು ಸಿಂಪಡಣೆ ಮಾಡಬೇಕು. ಇದರಿಂದ ಧೂಳು ಹಾರುವುದನ್ನು ತಡೆಗಟ್ಡಬಹುದಾಗಿ ಅನ್ನುತ್ತಾರೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನ್ಸಲ್ಟೆಂಟ್ ಫಿಜಿಶಿಯನ್ ಡಾ.ಶೂನ್ಯಸಂಪದ.
ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಶಿವಮೊಗ್ಗ ನಗರ ಮತ್ತಷ್ಟು ಅಂದಗೊಳ್ಳಲಿದೆ ಎಂದು ಜನರು ಭಾವಿಸಿದ್ದರು. ಆದರೆ ಧೂಳು, ಗುಂಡಿಗಳಿಂದಾಗಿ ಜನರ ಆರೋಗ್ಯ ಹದಗೆಡುತ್ತಿದ್ದು, ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.
Smart city alla Daridra city