ವರ್ಷವಿಡೀ ಉದ್ಯೋಗ ನೀಡಿ, ರೈತ ಸಂಘದ ಆಗ್ರಹ

ಶಿವಮೊಗ್ಗ: ರಾಜ್ಯದಾದ್ಯಂತ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಹಾಗೂ ಕೃಷಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುವುದರ ಜತೆಗೆ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು. ಬರ ನಿರ್ವಹಣೆಗೆ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಒತ್ತಾಯಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಎನ್ನದೆ ರಾಜ್ಯದ ಬಹುತೇಕ ಪ್ರದೇಶಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಬರ ಘೋಷಣೆಯ ಬಳಿಕ ರೈತರಿಗೆ ದೊರೆಯುವ ಪರಿಹಾರವು ಬೆಳೆ ನಷ್ಟಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದ್ದು, ಇದರಿಂದ ರೈತರ ಸಂಕಷ್ಟ ಪರಿಹಾರವಾಗುತ್ತಿಲ್ಲ ಎಂದರು.

HR-Basavarajappa-Raitha-Sanga-President.webp

ಬರ ನಿರ್ವಹಣೆಗೆ ಸಂಬಂಧಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಒದಗಿಸಲು ಆದ್ಯತೆ ನೀಡಲಾಗಿದೆ. ಅದರಂತೆ ಮೇವು ಸಂಗ್ರಹ, ಗೋಶಾಲೆ ಮತ್ತು ಅಗತ್ಯವಿರುವ ಕಡೆ ಗಂಜಿ ಕೇಂದ್ರಗಳನ್ನು ನಡೆಸಲು ಸಮರ್ಪಕ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.

ಬೆಳೆ ನಷ್ಟ ಶೇ.33ಕ್ಕಿಂತ ಹೆಚ್ಚಾದಾಗ ಮಾತ್ರ ಪರಿಹಾರ ನೀಡುವ ವ್ಯವಸ್ಥೆ ಇದೆ. ಸಣ್ಣ ರೈತರಿಗೆ ದೊರೆಯುವ ಪರಿಹಾರದಿಂದ ಬಿತ್ತನೆ ಬೀಜ ಸೇರಿದಂತೆ ಕೃಷಿ ವೆಚ್ಚವೂ ಮರಳುವುದಿಲ್ಲ. ಆದ್ದರಿಂದ ಬೆಳೆ ನಷ್ಟ ಪರಿಹಾರವನ್ನು ಎಕರೆಗೆ ₹25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ವರ್ಷವಿಡೀ ಉದ್ಯೋಗ ನೀಡಿ

ಬರ ನಿರ್ವಹಣೆಗೆ ಶಾಶ್ವತ ವ್ಯವಸ್ಥೆ ರೂಪಿಸಿ ಏತ ನೀರಾವರಿ ಹಾಗೂ ಜಲಾನಯನ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಜನರು ಮತ್ತು ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರು ಹಾಗೂ ಮೇವು ಒದಗಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ವರ್ಷವಿಡೀ ಕೆಲಸ ನೀಡಬೇಕು. ರೈತರಿಗೆ ಎಕರೆಗೆ ₹25 ಸಾವಿರ ಬೆಳೆ ನಷ್ಟ ಪರಿಹಾರ ನೀಡಬೇಕು.

ರೈತರಿಗೆ ದಿನಕ್ಕೆ ಒಟ್ಟು ಏಳು ಗಂಟೆ ಸಮರ್ಪಕ ವಿದ್ಯುತ್ ಪೂರೈಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ತೋಟಗಾರಿಕೆ ಬೆಳೆಗಾರರಿಗೆ ಶೇ.75ರ ಸಬ್ಸಿಡಿಯಲ್ಲಿ ನೀರಿನ ಟ್ಯಾಂಕರ್‌ಗಳನ್ನು ಒದಗಿಸಬೇಕು. ಕೃಷಿ ವಿಜ್ಞಾನಿಗಳು ಗ್ರಾಮಗಳಿಗೆ ಭೇಟಿ ನೀಡಿ ಬರ ನಿರ್ವಹಣೆ ಕುರಿತು ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾ ಘಟಕದ ಅಧ್ಯಕ್ಷ ಕೆ. ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ಸಿ.ಬಿ. ಹನುಮಂತಪ್ಪ, ಸಿ. ಚಂದ್ರಪ್ಪ, ಎಂ.ಡಿ. ನಾಗರಾಜ್, ಮಹದೇವಪ್ಪ ಹಾಗೂ ಮಂಜು ಇದ್ದರು.