SHIVAMOGGA LIVE NEWS | 15 AUGUST 2023
SHIMOGA : ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಧ್ವಜಾರೋಹಣ (Flag Hoisting) ನೆರವೇರಿಸಿದರು. ಬಳಿಕ ಸ್ವಾತಂತ್ರ್ಯೋತ್ಸವ ಸಂದೇಶ (Independence Day Speech) ನೀಡಿದರು.
ಸಂದೇಶದ ಪ್ರಮುಖ 6 ಪಾಯಿಂಟ್ ಇಲ್ಲಿದೆ
ಮುಂಗಾರು ಮಳೆ ವಿಳಂಬವಾಗಿದೆ. ಜಿಲ್ಲೆಯಲ್ಲಿ ಈವರೆಗು ಕಡಿಮೆ ಮಳೆಯಾಗಿದೆ. ರೈತರ ನಿರೀಕ್ಷೆಯಂತೆ ಹಿಂಗಾರು ಮಳೆ ಬರುವ ಆಶಾ ಭಾವನೆ ಇದೆ. ಮಳೆಯಿಂದಾಗಿ ಆಗಿರುವ ಜನ-ಜಾನುವಾರುಗಳ ಜೀವಹಾನಿ, ಬೆಳೆಹಾನಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಂತ್ರಸ್ಥರಿಗೆ ಕೂಡಲೆ ಪರಿಹಾರ ಬಿಡುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ.
ಶಾಲೆಗಳ ಆರಂಭದ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂಗಳನ್ನು ಪೂರೈಸಲಾಗಿದೆ. ಈ ಹಿಂದೆ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೆ 1 ಮೊಟ್ಟೆ ನೀಡುತ್ತಿದ್ದು, ಈಗ ವಾರಕ್ಕೆ 2 ಮೊಟ್ಟೆ ನೀಡಲಾಗುತ್ತದೆ. 10ನೇ ತರಗತಿವರೆಗೆ ಈ ಯೋಜನೆ ವಿಸ್ತರಿಸಲಾಗಿದೆ. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ 2 ಬಾರಿ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಇದರಿಂದ ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಿಕ್ಷಕರ ನೇಮಕಾತಿ, ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
ಹಲವು ದಶಕಗಳಿಂದ ಕಗ್ಗಂಟಾಗಿರುವ ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಶೀಘ್ರದಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಲಾಗುತ್ತದೆ. ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವಿನ ಭೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ.
ಅಡಿಕೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಎಲೆಚುಕ್ಕೆ ರೋಗ ಬೆಳೆಗಾರರಲ್ಲಿ ಆತಂಕ ತಂದೊಡ್ಡಿದೆ. ಮಾರುಕಟ್ಟೆ ಅಸ್ಥಿರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಜಿಲ್ಲೆಯಲ್ಲಿ ಭತ್ತದ ಬೆಳೆ ಕಡಿಮೆಯಾಗುತ್ತಿದ್ದು, ಇದಕ್ಕೆ ಪ್ರೋತ್ಸಾಹ ನೀಡಲು ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ, ವಿವಿಧೆಡೆ ಧ್ವಜಾರೋಹಣ
ಜಿಲ್ಲೆಯಲ್ಲಿ ವೃತ್ತಿಪರ ಶಿಕ್ಷಣ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಜನರ ಬಹುದಿನಗಳ ಬೇಡಿಕೆಯಂತೆ ನಗರದ ಪ್ರಮುಖ ಸ್ಥಳದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಹಾಗೂ ಪ್ರಸ್ತಾಪಿಸಲಾಗಿರುವ ಆಯುಷ್ ವಿಶ್ವವಿದ್ಯಾಲಯ ಆರಂಭಿಸಲು ವಿಶೇಷ ಗಮನ ಹರಿಸಲಾಗುತ್ತದೆ.
ಗ್ರಾಮೀಣ ಭಾಗದ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಿ, ಅತ್ಯಾಧುನಿಕ ಹಾಗೂ ಸುಸಜ್ಜಿತ ಇ-ಲೈಬ್ರರಿಗಳನ್ನಾಗಿ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದಾಗಿ ಗ್ರಾಮೀಣ ಜನರ ಬೌದ್ಧಿಕ ವಿಕಾಸಗೊಳಿಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಕರೆತರಲು ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200