ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 26 ಫೆಬ್ರವರಿ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೋಟೆ ಶ್ರೀ ಮಾರಕಾಂಬ ದೇವಿಯನ್ನು ಇವತ್ತು ಮಾರಿಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಿಯನ್ನು ಕಣ್ತುಂಬಿಕೊಂಡು, ಪ್ರಾರ್ಥಿಸಿ, ಹರಕೆ ತೀರಿಸಲು ಭಾರೀ ಸಂಖ್ಯೆಯ ಭಕ್ತರು ಇವತ್ತು ದೇವಸ್ಥಾನಕ್ಕೆ ಬಂದಿದ್ದರು.
ಮಾರಿಗದ್ದುಯಲ್ಲಿ ಪ್ರತಿಷ್ಠಾಪನೆ
ಮೊದಲ ದಿನ ಗಾಂಧಿ ಬಜಾರ್’ನಲ್ಲಿರುವ ತವರು ಮನೆಯಲ್ಲಿ ಮಾರಿಕಾಂಬೆ ದೇವಿಗೆ ಪೂಜೆ ಸಲ್ಲಿಸಲಾಯಿತು. ಸಾವಿರಾರು ಜನರು ಜಾತ್ರೆಯ ದೇವಿಯ ದರ್ಶನ ಪಡೆದಿದ್ದರು. ಮಂಗಳವಾರ ರಾತ್ರಿ ತವರು ಮನೆಯಿಂದ ಮೆರವಣಿಗೆ ಮೂಲಕ ಮಾರಿ ಗದ್ದುಗೆಗೆ ಕರೆತರಲಾಯಿತು. ರಾತ್ರಿ ಇಡೀ ನಡೆದ ಮೆರವಣಿಗೆ ಬೆಳಗ್ಗೆ ಮಾರಿಗದ್ದುಗೆ ತಲುಪಿತು. ಇವತ್ತು ಬೆಳಗ್ಗೆಯಿಂದ ಗದ್ದುಗೆ ಮೇಲೆ ಪೂಜೆ ಸಲ್ಲಿಸಲಾಗುತ್ತಿದೆ.
ಧಾರ್ಮಿಕ ವಿಧಿವಿಧಾನದ ಬಳಿಕ ದರ್ಶನ
ಗದ್ದುಗೆಯಲ್ಲಿ ಮಾರಿಕಾಂಬ ದೇವಿ ಪ್ರತಿಷ್ಠಾಪಿಸುತ್ತಿದ್ದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಾಬುದಾರ ಚೌಡಿಕೆ ಕುಟುಂಬವು, ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ಆ ನಂತರ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಯಿತು.
ಬೇವಿನುಡಿಗೆ, ಕೋಳಿ ಹರಕೆ
ಗದ್ದುಗೆ ಮೇಲೆ ಪ್ರತಿಷ್ಠಾಪಿಸಲಾಗಿರುವ ಮಾರಿಕಾಂಬ ದೇವಿಗೆ, ಬೇವಿನುಡುಗೆಯ ಹರಕೆ ತೀರಿಸಲಾಯಿತು. ಬೇವಿನ ಉಡುಗೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು, ಅದನ್ನು ದೇವಿಗೆ ಸಮರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ, ದೇವಿಯ ಕೃಪೆ ಲಭಿಸಲಿದೆ ಎಂಬ ನಂಬಿಕೆ ಇದೆ. ಇನ್ನು ದೇವರ ಮೂರ್ತಿಯತ್ತ ಕೋಳಿ ತೂರಿಬಿಡುವ ಪದ್ಧತಿಯು ಇದೆ. ಹಾಗಾಗಿ ದೇವಿ ದರ್ಶನಕ್ಕೆ ಸರತಿಯಲ್ಲಿ ಬರುತ್ತಿದ್ದ ಭಕ್ತರು ದೇವಿಯತ್ತ ಕೋಳಿ ತೂರುತ್ತಿದ್ದರು. ಇನ್ನು, ಮಕ್ಕಳನ್ನು ದೇವಿಯ ಮೂರ್ತಿ ಮುಟ್ಟಿಸಿ, ಆಶೀರ್ವಾದ ಕೊಡಿಸಲಾಯಿತು.
ವಿಐಪಿ ಎಂಟ್ರಿಗೆ ಫುಲ್ ಡಿಮಾಂಡ್
ಮಾರಿಕಾಂಬ ದೇವಿ ದರ್ಶನಕ್ಕೆ ವಿಐಪಿ ಎಂಟ್ರಿಗೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಹಿಂಬದಿ ಗೇಟ್’ನಲ್ಲಿ ವಿಐಪಿ ಎಂಟ್ರಿಗೆ ಟೋಕನ್ ವಿತರಿಸಲಾಗುತ್ತದೆ. 150 ರೂ. ಪವಾತಿಸಿದರೆ ಮೂವರು ದೇವರ ದರ್ಶನ ಪಡೆಯಬಹುದಾಗಿದೆ. ಟೋಕನ್ ಪಡೆಯುವವರಿಗೆ ಸ್ಥಳದಲ್ಲೇ ಪ್ರಸಾದ ವಿತರಿಸಲಾಗುತ್ತದೆ. ಮೊದಲ ದಿನವೇ ವಿಐಪಿ ಪ್ರವೇಶಕ್ಕೆ ಭಾರೀ ಡಿಮಾಂಡ್ ಇದೆ.
ಕಳೆಗಟ್ಟಿದ ಜಾತ್ರೆ, ಖರೀದಿ ಜೋರು
ಜಾತ್ರೆ ಹಿನ್ನೆಲೆ ಕೋಟೆ ರಸ್ತೆ, ಪೋಸ್ಟ್ ಆಫೀಸ್ ರಸ್ತೆಯಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ. ಮಕ್ಕಳ ಆಟಿಕೆ, ಮನರಂಜನಾ ಕ್ರೀಡೆ, ನಾವೆಲ್ಟಿ ಶಾಪ್, ಮಂಡಕ್ಕಿ, ತಿಂಡಿ, ಊಟದ ಕ್ಯಾಂಟೀನ್, ತಿನಿಸುಗಳು ಸೇರಿದಂತೆ ವಿವಿಧ ಮಳಿಗೆಗಳನ್ನು ತೆರೆಯಲಾಗಿದೆ. ಜಾತ್ರೆಗೆ ಬರುವವರು ಇಲ್ಲಿ ತಮ್ಮಿಷ್ಟದ ವಸ್ತುಗಳು, ತಿನಿಸುಗಳನ್ನು ಖರೀದಿಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]