ಶಿವಮೊಗ್ಗ: ಜಂಬೂ ಸವಾರಿ ವೇಳೆ ಬೆದರಿದ ಆನೆ ಅಡ್ಡಾದಿಡ್ಡಿ ಓಡಿ ಅಂಬಾರಿ ಕೆಳಗೆ ಬೀಳಿಸಿದ ಪ್ರಕರಣ ಸಂಬಂಧ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಮೆರವಣಿಗೆ ಸಂದರ್ಭ ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ದಿಢೀರ್ ಕೈಗೊಂಡ ನಿರ್ಧಾರವೇ ಘಟನೆಗೆ ಕಾರಣವಾಗಿರಬಹುದು ಎಂಬುದನ್ನು ಪುಷ್ಠಿ ನೀಡುವಂತಹ ದೃಶ್ಯ ಅದರಲ್ಲಿದೆ. (ಶಿವಮೊಗ್ಗ ಲೈವ್.ಕಾಂ | ಮುಂದಿನ 8 ಪ್ಯಾರಾಗಳು ಕೆಳಗಿವೆ)
ಜಂಬೂ ಸವಾರಿ ವೇಳೆ ಏನಾಗಿತ್ತು?
ಅ.21ರಂದು ದಸರಾ ಜಂಬೂ ಸವಾರಿ ವೇಳೆ ಅಂಬಾರಿ ಹೊತ್ತಿದ್ದ ಆನೆ ಏಕಾಏಕಿ ಮೆರವಣಿಗೆಯಿಂದ ಹಿಂದಕ್ಕೆ ಓಡಿತ್ತು. ಅಡ್ಡಾದಿಡ್ಡಿ ಓಡಿದ್ದ ಆನೆ ಅಂಬಾರಿಯನ್ನು ಕೆಳಗೆ ಕೆಡವಿತ್ತು. ಇದು ದೇಶ, ವಿದೇಶದಲ್ಲಿ ಸುದ್ದಿಯಾಗಿದೆ. ಮೆರವಣಿಗೆಯಲ್ಲಿ ಸಾಗುತ್ತಿದ್ದ ಆನೆಗಳ ಸರತಿ ಸಾಲಿನಲ್ಲಿ ಬದಲಾವಣೆ ಮಾಡಿದ್ದೇ ಘಟನೆಗೆ ಕಾರಣ ಎಂಬ ಅನುಮಾನವಿದೆ. ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ಘಟನೆ ನಡೆದ ರಾತ್ರಿಯೇ ವರದಿ ಪ್ರಕಟಿಸಿತ್ತು. ಇಲ್ಲಿದೆ ನಾವು ಮೊದಲು ಪ್ರಕಟಿಸಿದ ವರದಿ: ಸರತಿ ಸಾಲಿನಲ್ಲಿ ದಿಢೀರ್ ಬದಲಾವಣೆಯೆ ಸೋಮಣ್ಣ ಬೆದರಿ ಓಡಲು ಕಾರಣವಾಯ್ತಾ? ಏನಿದು ಸರತಿ?

ನಿಶಾನೆ ಆನೆ ಹಿಂದೆ ಕಳಿಸಿದ್ಯಾರು?
ಮೆರವಣಿಗೆಯ ಮುಂಚೂಣಿಯಲ್ಲಿ ನಿಂತು, ಆನೆಗಳ ತಂಡಕ್ಕೆ ದಾರಿ ತೋರಿಸುವುದಕ್ಕೆ ನಿಶಾನೆ ಆನೆ ಎಂದು ಕರೆಯಲಾಗುತ್ತದೆ. ಶಿವಮೊಗ್ಗ ದಸರಾದಲ್ಲಿ ಆರು ಬಾರಿ ಅಂಬಾರಿ ಹೊತ್ತಿದ್ದ ಸಾಗರ್ ಆನೆಗೆ ಕಾಲು ನೋವಿದ್ದರಿಂದ ಸಾಗರ್ ಆನೆ ಮೇಲೆ ಅಂಬಾರಿ ಹೊರಿಸಿರಲಿಲ್ಲ. ಸಾಗರ್ಗೆ ಈ ಬಾರಿ ನಿಶಾನೆ ಆನೆಯಾಗಿ ಜವಾಬ್ದಾರಿ ನೀಡಲಾಗಿತ್ತು. ಅಲ್ಲದೆ ಮೊದಲ ಬಾರಿ ದಸರಾಗೆ ಬಂದಿದ್ದ ಸೋಮಣ್ಣ ಆನೆಯ ಮೇಲೆಯೇ ಅಂಬಾರಿ ಹೊರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದರು.
ಮೆರವಣಿಗೆ ಆರಂಭವಾದ ಕೆಲವೇ ಹೊತ್ತಿಗೆ ನಿಶಾನೆ ಆನೆಯಾಗಿದ್ದ ಸಾಗರ್ ಆನೆಯನ್ನು ಹಿಂದಕ್ಕೆ ಕಳುಹಿಸಿ, ಅಂಬಾರಿ ಹೊತ್ತ ಸೋಮಣ್ಣನನ್ನು ಮುಂದಕ್ಕೆ ತಂದು ಮೆರವಣಿಗೆ ನಡೆಸಲಾಯಿತು. ನಿಶಾನೆ ಆನೆ ಇರುವ ತನಕ ಸೋಮಣ್ಣ ಅತ್ತಿತ್ತ ಭರವಸೆಯ ಮೇಲೆ ಅದನ್ನು ಹಿಂಬಾಲಿಸುತ್ತಿತ್ತು. ಆದರೆ ಸ್ವಲ್ಪ ದೂರ ಹೋಗುತ್ತಿದ್ದಂತೆ ನಿಶಾನೆ ಆನೆಯನ್ನು ಹಿಂದಕ್ಕೆ ಕಳುಹಿಸಿ, ಚೊಚ್ಚಲ ಬಾರಿ ದಸರಾಗೆ ಬಂದು ಅಂಬಾರಿ ಹೊತ್ತ ಸೋಮಣ್ಣನನ್ನೇ ಮುಂದೆ ನಿಲ್ಲಿಸಲಾಯಿತು. ಜನ ದಟ್ಟಣೆ, ವಾದ್ಯಗಳ ಶಬ್ದದ ಅಬ್ಬರವನ್ನು ಎಂದೂ ಕೇಳಿರದ ಸೋಮಣ್ಣ ಸ್ವಲ್ಪ ದೂರ ಮೆರವಣಿಗೆಯಲ್ಲಿ ಸಾಗಿ ದಿಗಿಲುಗೊಂಡು ಹಿಂದಕ್ಕೆ ತಿರುಗಿ ಓಡಿದ್ದ.
ವಿಡಿಯೋದಲ್ಲಿ ಅಸಲಿ ಕಾರಣ ಬಹಿರಂಗ
ಘಟನೆ ನಡೆದು ಎರಡು ದಿನದ ನಂತರ ವಿಡಿಯೋ ತುಣುಕೊಂದು ವೈರಲ್ ಆಗಿದೆ. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಪುಷ್ಪಾರ್ಚನೆ ಬಳಿಕ ಸಾಗರ್, ಅಂಬಾರಿ ಹೊತ್ತ ಸೋಮಣ್ಣ ಮತ್ತು ಅದರ ಹಿಂದೆ ಬಹದ್ದೂರ್ ಆನೆಗಳು ಮೆರವಣಿಯಲ್ಲಿ ಸಾಗುತ್ತಿದ್ದವು. ಹಳೆ ತಾಲೂಕು ಕಚೇರಿ ಬಳಿ ಶಾಸಕ ಚನ್ನಬಸಪ್ಪ ಅವರು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಎಫ್ಒ ಪ್ರಸನ್ನಕೃಷ್ಣ ಪಟಗಾರ್ ಅವರನ್ನು ಕರೆದು ಮಾತನಾಡಿದರು. ಕೆಲವೇ ಕ್ಷಣದಲ್ಲಿ ಆನೆ ಸಿಬ್ಬಂದಿಯ ಬಳಿಗೆ ತೆರಳಿದ ಡಿಎಫ್ಒ ಸೂಚನೆ ನೀಡಿರುವುದು ವಿಡಿಯೋದಲ್ಲಿದೆ. ಕೂಡಲೆ ನಿಶಾನೆ ಆನೆಯಾಗಿದ್ದ ಸಾಗರ್ನನ್ನು ಪಕ್ಕಕ್ಕೆ ಸರಿಸಿ, ಅಂಬಾರಿ ಹೊತ್ತ ಸೋಮಣ್ಣನನ್ನು ಮೆರವಣಿಗೆಯ ಕ್ಯಾಪ್ಟನ್ ಮಾಡಲಾಗುತ್ತದೆ.
ದಿಗಿಲುಗೊಂಡು ಅಡ್ಡಾದಿಡ್ಡಿ ಓಡಿದ ಆನೆ
ಅಲ್ಲಿಂದ ಸ್ವಲ್ಪ ದೂರ ಮೆರವಣಿಗೆಯಲ್ಲಿ ಸಾಗಿದ ಸೋಮಣ್ಣ ಆನೆ ವಾದ್ಯಗಳ ಶಬ್ದ, ಜನ ದಟ್ಟಣೆ ಕಂಡು ಹೆದರಿತು. ಒಮ್ಮೆಲೆ ಹಿಂದಕ್ಕೆ ತಿರುಗಿ, ಗೀಳಿಡುತ್ತ ಓಡಲು ಆರಂಭಿಸಿತು. ಕೋಟೆ ರಸ್ತೆಯ ಅಂಚೆ ಕಚೇರಿ ಬಳಿ ಅಂಬಾರಿಯನ್ನು ಕೆಳಗೆ ಬೀಳಿಸಿತು.
ನಿಶಾನೆ ಆನೆ ಬದಲಾಯಿಸಿದ ವಿಡಿಯೋ ಈಗ ಲಭ್ಯವಾಗಿದೆ. ಈಗಾಗಲೇ ಘಟನೆ ಸಂಬಂಧ ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಮಂತಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ಇದನ್ನು ಪರಿಗಣಿಸುತ್ತಾರೆಯೇ. ಇನ್ನು, ವಿವಿಧ ಸಂಘಟನೆಗಳು ಕೂಡ ವನ್ಯಜೀವಿ ವಿಭಾಗದ ಡಿಎಫ್ಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಇವರ ಆಗ್ರಹಗಳನ್ನು ತನಿಖೆ ವೇಳೆ ಪರಿಗಣಿಸುತ್ತಾರೆಯೆ ಎಂಬುದು ಸದ್ಯದ ಪ್ರಶ್ನೆ.