ಶಿವಮೊಗ್ಗ: ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಶಿವಮೊಗ್ಗದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ನಗರದ ವಿವಿಧೆಡೆ ಯುವಕರು ರಸ್ತೆಗಿಳಿದು ಘೋಷಣೆಗಳನ್ನು ಮೊಳಗಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಗುಂಪು ಚದುರಿಸಲು ಲಘು ಲಾಠಿ (lathi charge) ಪ್ರಹಾರವು ನಡೆಯಿತು.
ಬೃಹತ್ ಪರದೆಗಳಲ್ಲಿ ಪಂದ್ಯಾವಳಿ ವೀಕ್ಷಣೆ
ಐಪಿಎಲ್ ಫೈನಲ್ ಪಂದ್ಯಾವಳಿ ವೀಕ್ಷಣೆಗೆ ಶಿವಮೊಗ್ಗದ ವಿವಿಧೆಡೆ ಬೃಹತ್ ಪರದೆಗಳನ್ನು ಹಾಕಲಾಗಿತ್ತು. ಆರ್‌ಸಿಬಿ ಅಭಿಮಾನಿಗಳು ಈ ಪರದೆಗಳಲ್ಲಿ ಪಂದ್ಯಾವಳಿ ವೀಕ್ಷಿಸಿದರು. ಆರ್‌ಸಿಬಿ ತಂಡ ಫೋರ್, ಸಿಕ್ಸ್ ಬಾರಿಸಿದಾಗ, ಆರ್‌ಸಿಬಿ ಬೌಲರ್‌ಗಳು ವಿಕೆಟ್ ಪಡೆದಾಗ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು.
ಕ್ಲಬ್, ಬಾರ್‌ಗಳಲ್ಲಿ ಟೇಬಲ್ ಫುಲ್
ನಗರದ ವಿವಿಧ ಕ್ಲಬ್‌ಗಳು, ಬಾರ್‌ಗಳಲ್ಲಿ ಪಂದ್ಯಾವಳಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಹತೇಕ ಟೇಬಲ್‌ಗಳು ಭರ್ತಿಯಾಗಿದ್ದವು. ಆರ್‌ಸಿಬಿ ಗೆಲುವಿಗೆ ಮುಂದಡಿ ಇಡುತ್ತಿದ್ದಂತೆ ಸಂಭ್ರಮಾಚರಣೆ ಇರುತ್ತಿತ್ತು. ಈ ಅವಧಿಯಲ್ಲಿ ಮದ್ಯ ಮಾರಾಟವು ಬಿರುಸಾಗಿತ್ತು.
ರಸ್ತೆಗಿಳಿದು ಸಂಭ್ರಮಾಚರಣೆ
ಆರ್‌ಸಿಬಿ ಗೆಲುವಿನ ಸನಿಹಕ್ಕೆ ಬರುತ್ತಿದ್ದಂತೆ ಯುವಕರು ಶಿವಮೊಗ್ಗ ನಗರದಲ್ಲಿ ಸಂಭ್ರಮಾಚರಣೆ ಆರಂಭಿಸಿದರು. ನಗರದ ವಿವಿಧೆಡೆ ರಸ್ತೆಗಿಳಿದ ಆರ್‌ಸಿಬಿ ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು, ಬೈಕ್ ಜಾಥಾ ನಡೆಸಿದರು. ವಿವಿಧೆಡೆ ದಿಢೀರ್ ರಸ್ತೆಗಿಳಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ನಡುರಾತ್ರಿ ದೀಪಾವಳಿ ರೀತಿ ಸಂಭ್ರಮ
ಆರ್‌ಸಿಬಿ ತಂಡ ಗೆಲ್ಲುತ್ತಿದ್ದಂತೆ ಶಿವಮೊಗ್ಗ ನಗರದಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಬಹುತೇಕ ಎಲ್ಲ ಬಡಾವಣೆಗಳಲ್ಲಿಯು ಪಟಾಕಿ ಸಿಡಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ನಡುರಾತ್ರಿ ದೀಪಾವಳಿ ರೀತಿಯ ಸಂಭ್ರಮಾಚರಣೆ ಮಾಡಲಾಯಿತು.
ಲಘು ಲಾಠಿ ಪ್ರಹಾರ
ನೆಹರು ರಸ್ತೆಯಲ್ಲಿ ವಿಜಯೋತ್ಸವದ ಸಂದರ್ಭ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಆರ್‌ಸಿಬಿ ಅಭಿಮಾನಿಗಳು ತಡರಾತ್ರಿವರೆಗು ಸಂಭ್ರಮಾಚರಣೆ ಮಾಡಿದರು. ಸಮಯ ಮೀರಿದ್ದರಿಂದ ಪೊಲೀಸರು ಗುಂಪು ಚದುರಿಸಲು ಪ್ರಯತ್ನಿಸಿದರು. ಆದರೆ ಜನರು ತೆರಳದೆ ಇದ್ದಾಗ ಲಘು ಲಾಠಿ ಪ್ರಹಾರ ನಡೆಸಿದರು.
ಸಿಟಿಯಲ್ಲಿ ಬಂದೋಬಸ್ತ್ ಹೆಚ್ಚಳ
ಐಪಿಎಲ್ ಫೈನಲ್ ಪಂದ್ಯಾವಳಿ ಹಿನ್ನೆಲೆ ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಹೀಗಿದ್ದು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಬೈಕ್ ಅಪಘಾತದಲ್ಲಿ ಅಭಿಮಾನಿ ಸಾವು
ಉಷಾ ನರ್ಸಿಂಗ್ ಹೋಮ್ ಸಮೀಪ ಬೈಕ್‌ಗಳು ಡಿಕ್ಕಿಯಾಗಿ ಆರ್‌ಸಿಬಿ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದಾನೆ. ವೆಂಕಟೇಶ ನಗರದ ಅಭಿ (21) ಮೃತಪಟ್ಟಿದ್ದಾನೆ. ಗಣಪತಿ ದೇವಸ್ಥಾನದ ಪಕ್ಕದಲ್ಲಿ 100 ಅಡಿ ರಸ್ತೆಯಲ್ಲಿ ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಅಭಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ
ವಿಜಯೋತ್ಸವ ಸಂದರ್ಭ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ವಾಹನ ಡಿಕ್ಕಿ ಹೊಡೆದಿದೆ. ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಕಾಟನ್ ಜಗದೀಶ್ ಎಂಬುವವರು ನಿಲ್ಲಿಸಿದ್ದ ಕಾರಿಗೆ ರಾತ್ರಿ ವಾಹನ ಡಿಕ್ಕಿ ಹೊಡೆದಿದೆ. ಇನ್ನು, ನಗರದ ವಿವಿಧೆಡೆ ರಸ್ತೆಯಲ್ಲಿ ಮದ್ಯದ ಬಾಟಲಿಗಳನ್ನು ಒಡೆದಿರುವುದು ಕೂಡ ವರದಿಯಾಗಿದೆ. ರಸ್ತೆಯಲ್ಲಿ ವಾಹನಗಳನ್ನು ತಡೆದು, ಬಸ್ಸುಗಳನ್ನು ಅಡ್ಡಗಟ್ಟಲಾಗಿದೆ.
ಜಿಲ್ಲೆಯ ವಿವಿಧೆಡೆಯು ವಿಜಯೋತ್ಸವ
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಆರ್‌ಸಿಬಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಈ ಸಲ ಕಪ್ ನಮ್ದು ಎಂದು ಘೋಷಣೆ ಕೂಗತ್ತ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಹಳ್ಳಿ, ಹಳ್ಳಿಗಳಲ್ಲು ಆರ್‌ಸಿಬಿ ಅಭಿಮಾನಗಳು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.
ಜನಪ್ರತಿನಿಧಿಗಳ ಸಂಭ್ರಮ
ಆರ್‌ಸಿಬಿ ಗೆಲುವನ್ನು ಶಿವಮೊಗ್ಗದ ಜನಪ್ರತಿನಿಧಿಗಳು ಕೂಡ ಸಂಭ್ರಮಿಸಿದ್ದಾರೆ. ಸಂಸದ ರಾಘವೇಂದ್ರ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ‘ಈ ಸಲ ಕಪ್ ನಮ್ದೆ. ಆರ್‌ಸಿಬಿ ತಂಡಕ್ಕೆ ಶುಭಾಶಯ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


ಇದನ್ನೂ ಓದಿ » ಜೈಲಿಂದ ಹೊರ ಬಂದು ತಿಂಗಳೊಳಗೆ ಸಚಿನ್ ಕಾಲಿಗೆ ಗುಂಡು, ಮತ್ತೆ ಅರೆಸ್ಟ್ ಆದ ಶ್ಯಾಡೋ, ಏನಿದು ಕೇಸ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200