ಶಿವಮೊಗ್ಗ: ಆನ್‌ಲೈನ್ ಇ-ಫಾರ್ಮಸಿಗಳು (Online E-Pharmacies) ಮತ್ತು ಕ್ವಿಕ್ ಕಾಮರ್ಸ್ ಆಪ್‍ಗಳ (Quick Commerce Apps) ಮೂಲಕ ಕಾನೂನುಬಾಹಿರವಾಗಿ ಔಷಧ ಮಾರಾಟ ಮಾಡುವುದನ್ನು ವಿರೋಧಿಸಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ (AIOCD) ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಶಿವಮೊಗ್ಗದಲ್ಲಿಯೂ ಒಂದು ದಿನ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಿ ಮಾಲೀಕರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ (DC Office) ಮುಂಭಾಗ ಪ್ರತಿಭಟನೆ ನಡೆಸಿದ ಮೆಡಿಕಲ್ ಶಾಪ್‌ಗಳ ಮಾಲೀಕರು, ಸರ್ಕಾರ ಕೂಡಲೇ ಆನ್‌ಲೈನ್ ಮೂಲಕ ಔಷಧ ಮಾರಾಟವನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.

ಮೂರು ಪ್ರಮುಖ ಬೇಡಿಕೆಗಳು
- ಕಾರಣ 1: ಔಷಧಿಗಳ ಆನ್‌ಲೈನ್ ಮಾರಾಟವನ್ನು (Online medicine sales) ತಕ್ಷಣದಿಂದಲೇ ಸಂಪೂರ್ಣವಾಗಿ ನಿಲ್ಲಿಸಬೇಕು.
- ಕಾರಣ 2: ಕಾರ್ಪೊರೇಟ್ ಮೆಡಿಕಲ್ ಶಾಪ್‌ಗಳು ಹಾಗೂ ಆನ್‌ಲೈನ್ ನೆಟ್‌ವರ್ಕ್‌ಗಳು ನೀಡುತ್ತಿರುವ ಭಾರಿ ರಿಯಾಯಿತಿಯಿಂದಾಗಿ (Deep discounts) ಸಾಂಪ್ರದಾಯಿಕ ಮತ್ತು ಸ್ಥಳೀಯ ಔಷಧಿ ವ್ಯಾಪಾರಿಗಳ ವ್ಯವಹಾರಕ್ಕೆ ಧಕ್ಕೆ ಉಂಟಾಗುತ್ತಿದೆ.
- ಕಾರಣ 3: ಆನ್‌ಲೈನ್‌ನಲ್ಲಿ ನೀಡಲಾಗುವ ಭಾರಿ ರಿಯಾಯಿತಿಗಳ ಹಿನ್ನೆಲೆಯಲ್ಲಿ ಗುಣಮಟ್ಟವಿಲ್ಲದ ಹಾಗೂ ನಕಲಿ ಔಷಧಿಗಳು (Counterfeit medicines) ಸುಲಭವಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿದೆ.
ಈ ಪ್ರತಿಭಟನೆಯು ಯಾವುದೇ ರೋಗಿಗಳ ಅಥವಾ ಸಾರ್ವಜನಿಕರ ವಿರುದ್ಧವಾದುದಲ್ಲ. ಇದು ಕೇವಲ ನಮ್ಮ ಅಸ್ತಿತ್ವಕ್ಕಾಗಿ ಮತ್ತು ಸರ್ಕಾರದ ತಪ್ಪು ನೀತಿಗಳ ವಿರುದ್ಧ ನಾವು ನಡೆಸುತ್ತಿರುವ ಹೋರಾಟವಾಗಿದೆ.
– ಮಧುಕರ್, ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ
ಆನ್‌ಲೈನ್‌ನಲ್ಲಿ ಔಷಧ ಮಾರಾಟದಿಂದಾಗಿ ಯುವ ಸಮೂಹ ಹಾದಿ ತಪ್ಪುವಂತಾಗಿದೆ. ನಿದ್ರೆ ಬರಿಸುವ ಔಷಧ, ಕಾಫ್ ಸಿರಪ್‌ಗಳು (Cough syrups) ಯುವ ಸಮೂಹದ ಕೈಗೆ ಸುಲಭವಾಗಿ ದೊರೆಯುತ್ತಿವೆ. ಇವುಗಳಿಂದಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ಕೂಡಲೇ ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ತಡೆಯೊಡ್ಡಬೇಕು.
– ವಿವೇಕಾನಂದ ನಾಯಕ್, ಮಾಜಿ ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ
ಜಿಲ್ಲೆಯಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ಒಂದೂವರೆ ಸಾವಿರದಷ್ಟು ಮೆಡಿಕಲ್ ಶಾಪ್‌ಗಳಿವೆ. ಈ ಪೈಕಿ ಸುಮಾರು 600 ಮೆಡಿಕಲ್ ಶಾಪ್‌ಗಳು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿವೆ. ದೇಶಾದ್ಯಂತ ಮುಷ್ಕರದ (Nationwide strike) ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ಜಿಲ್ಲೆಯ ಎಲ್ಲ ಮೆಡಿಕಲ್ ಶಾಪ್‌ಗಳನ್ನು 24 ಗಂಟೆಗಳ ಕಾಲ ಬಂದ್ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಮೆಡಿಕಲ್ ಶಾಪ್ ಮಾಲೀಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಕಂಪನಿ ಮೆಡಿಕಲ್ ಶಾಪ್‌ಗಳು ಓಪನ್
ಜಿಲ್ಲೆಯಲ್ಲಿರುವ ಕೆಲವು ಕಂಪನಿಗಳ ಮೆಡಿಕಲ್ ಶಾಪ್‌ಗಳು ಮಾತ್ರ ಬಾಗಿಲು ತೆರೆದಿವೆ. ಅಪೋಲೊ ಮೆಡಿಕಲ್ ಶಾಪ್‌ಗಳು (Apollo Pharmacy) ಬಂದ್ ಆಗಿವೆ. ಮೆಡ್ ಪ್ಲಸ್ ಮೆಡಿಕಲ್ ಶಾಪ್‌ಗಳು (MedPlus pharmacy) ಎಂದಿನಂತೆ ಸೇವೆ ಒದಗಿಸುತ್ತಿವೆ. ಇನ್ನು ಜನೌಷಧ ಕೇಂದ್ರಗಳು (Jan Aushadhi Kendra) ಹಾಗೂ ಆಸ್ಪತ್ರೆಗಳಲ್ಲಿರುವ ಮೆಡಿಕಲ್ ಶಾಪ್‌ಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ತುರ್ತು ಔಷಧದ ಅಗತ್ಯ ಇರುವವರು ಈ ಔಷಧ ಕೇಂದ್ರಗಳನ್ನು ಅವಲಂಬಿಸುವಂತಾಗಿದೆ.

