ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಹಾಲಿನ ದರ ಪ್ರತಿ ಲೀಟರಿಗೆ ₹8 ಹೆಚ್ಚಳ ಮಾಡಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿ ನಗರ ಬಿಜೆಪಿ ವತಿಯಿಂದ ಶಿವಪ್ಪ ನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. (ಈ ಸುದ್ದಿಯನ್ನು ಇನ್ನು 76 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪ್ರತಿಭಟನೆ ವೇಳೆ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೆ ವರ್ಷದಲ್ಲಿ ನಾಲ್ಕು ಬಾರಿ ಹಾಲಿನ ದರ ಹೆಚ್ಚಳವಾಗಿದೆ. ಈತನಕ ₹17 ಹೆಚ್ಚಳ ಮಾಡಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ರೈತರ ಖಾತೆಗೆ ಸಾವಿರಾರು ಕೋಟಿ ಹಣ ನೇರವಾಗಿ ಜಮಾ ಮಾಡುತ್ತಿದೆ. ಆದರೆ ಅದು ನಾಗರಿಕರ ಜೇಬಿಗೆ ಕತ್ತರಿ ಹಾಕಿಲ್ಲ. ಸರ್ಕಾರದ ಬೊಕ್ಕಸದಿಂದಲೇ ನೀಡುತ್ತಿದೆ. ಆದರೆ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬೊಕ್ಕಸ ಖಾಲಿ ಮಾಡಿ ಕುಳಿತಿದ್ದು ರೈತರಿಗೆ ಮೋಸ ಮಾಡುತ್ತಿದೆ. ನಾಗರಿಕರ ಜೇಬಿಗೆ ಕತ್ತರಿ ಹಾಕಿ ರೈತರಿಗೆ ನೀಡುವ ನಾಟಕ ಮಾಡುತ್ತಿದ್ದು ಇದು ಅಕ್ಷಮ್ಯ ಅಪರಾಧ ಎಂದು ಆರೋಪಿಸಿದರು.

ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಹಾಲಿನ ದರ ಏರಿಕೆ ಪ್ರಸ್ತಾವನೆ ಬಂದಾಗ ಜನರಿಗೆ ಹೊರೆಯಾಗಬಾರದು ಎಂದು ಸರ್ಕಾರದ ಬೊಕ್ಕಸದಿಂದ ರೈತರಿಗೆ ಪ್ರೋತ್ಸಾಹ ಧನ ನೀಡಿದರು. ಕೆಲವು ತಿಂಗಳಿಂದ ಈ ಸರ್ಕಾರ ಆ ಹಣವನ್ನು ನೀಡುತ್ತಿಲ್ಲ. ಬರಗಾಲದಲ್ಲಿ ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರ ಜನಸಾಮಾನ್ಯರಿಗೆ ಬರೆ ಹಾಕಿ ಆ ಹಣವನ್ನು ರೈತರಿಗೆ ನೀಡಲು ಹೊರಟಿದೆ ಎಂದು ಚನ್ನಬಸಪ್ಪ ಟೀಕಿಸಿದರು.
ಈಗ ನಮ್ಮನ್ನು ರೈತ ವಿರೋಧಿಗಳು ಎನ್ನುತ್ತಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಹಾಲಿಗೆ ಪ್ರೋತ್ಸಾಹ ಧನ ಮತ್ತು ದೇಶದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿ ರೈತರ ಸಂಕಷ್ಟಗಳಿಗೆ ನೆರವಾಗಿದ್ದು ಬಿಜೆಪಿ ಸರ್ಕಾರ.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಶಾಸಕ
ಪ್ರತಿಭಟನೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ. ಸುರೇಖಾ ಮುರಳೀಧರ್, ಶಾಂತಾ ಸುರೇಂದ್ರ, ರಶ್ಮಿ ಶ್ರೀನಿವಾಸ್, ಶ್ರೀನಾಗ್, ಮಾಲತೇಶ್, ನವುಲೆ ಮಂಜುನಾಥ್, ಪ್ರಭು ಸೇರಿ ಹಲವರು ಇದ್ದರು.