SHIVAMOGGA LIVE NEWS | 9 JANUARY 2024
SHIMOGA : ಹಾಲು ಖರೀದಿ ದರವನ್ನು ಸರ್ಕಾರ ಇಳಿಕೆ ಮಾಡಿರುವುದನ್ನು ಖಂಡಿಸಿ ಹಾಲು ಉತ್ಪಾದಕರು ಮಾಚೇನಹಳ್ಳಿಯಲ್ಲಿರುವ ಶಿವಮೊಗ್ಗ ಹಾಲು ಒಕ್ಕೂಟದ ಮುಂದೆ ಪ್ರತಿಭಟನೆ ನಡೆಸಿದರು. ಹೆದ್ದಾರಿ ಮೇಲೆ ಹಾಲು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯದ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯ ಹಾಲು ಉತ್ಪಾದಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
8 ತಿಂಗಳಲ್ಲಿ ದರ ಏರಿಳಿತ
2023ರ ಆಗಸ್ಟ್ 1ರಂದು ರಾಜ್ಯ ಸರ್ಕಾರ ಒಂದು ಲೀಟರ್ ಹಾಲಿಗೆ ಉತ್ಪಾದಕರಿಗೆ ನೀಡುತ್ತಿದ್ದ ದರವನ್ನು 3 ರೂ. ಏರಿಕೆ ಮಾಡಿತ್ತು. ಆಗ ರೈತರಿಗೆ ಪ್ರತಿ ಲೀಟರ್ ಹಾಲಿಗೆ 33.50 ರೂ. ಸಿಗುತ್ತಿತ್ತು. ಅಕ್ಟೋಬರ್ 1ರಂದು ಪ್ರತಿ ಲೀಟರ್‌ಗೆ 1.25 ರೂ. ಕಡಿತಗೊಳಿಸಲಾಯಿತು. ಆಗ ಲೀಟರ್‌ಗೆ 31.75 ರೂ. ದೊರೆಯುತ್ತಿತ್ತು. ಈಗ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2 ರೂ. ಕಡಿತಗೊಳಿಸಲಾಗಿದೆ. ಕಳೆದ 8 ತಿಂಗಳಲ್ಲಿ ಪ್ರತಿ ಲೀಟರ್‌ಗೆ 3 ರೂ. ಏರಿಕೆ ಮಾಡಿ 3.70 ರೂ. ಕಡಿತಗೊಳಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಶಿಮುಲ್ ಗೇಟ್‌ಗೆ ಅಡ್ಡಲಾಗಿ ಪ್ರತಿಭಟನೆ
ಶಿವಮೊಗ್ಗ ಹಾಲು ಒಕ್ಕೂಟದ ಗೇಟ್ ಮುಂಭಾಗ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು. ಹಾಗಾಗಿ ಶಿಮುಲ್ ಗೇಟ್ ಬಂದ್ ಮಾಡಲಾಗಿತ್ತು. ಇನ್ನು, ಗೇಟ್ ಮುಂಭಾಗದಲ್ಲಿಯೇ ಪ್ರತಿಭಟನಾ ಸಭೆ ನಡೆಸಿ, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಕನಿಷ್ಠ 3.50 ರೂ. ಫ್ಯಾಟ್‌ಗೆ 50 ರೂ. ನಿಗದಿ ಮಾಡಬೇಕು. ಪಶು ಆಹಾರದ ದರವನ್ನು 50 ಕೆ.ಜಿ.ಗೆ 800 ರೂ. ನಿಗದಿ ಮಾಡಬೇಕು. ಪಶು ಆಹಾರ ಕಾರ್ಖಾನೆಗಳಿಗೆ ರಾಜ್ಯದ ರೈತರು ಬೆಳೆದ ಮೆಕ್ಕೆಜೋಳವನ್ನೇ ಖರೀದಿ ಮಾಡಬೇಕು ಸೇರಿದಂತೆ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದರು.
ರಸ್ತೆಗೆ ಹಾಲು, ಟ್ರಾಫಿಕ್ ಜಾಮ್
ಹಾಲಿನ ದರ ಕಡಿತ ಖಂಡಿಸಿ ರೈತರು ಹಾಲನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಶಿಮುಲ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ರೈತರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು. ಇದರಿಂದ ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಹೆದ್ದಾರಿಯ ಎರಡು ಬದಿಯಲ್ಲು ವಾಹನಗಳು ಬಹು ದೂರದವರೆಗೆ ಸಾಲುಗಟ್ಟಿ ನಿಂತಿದ್ದವು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಇದನ್ನೂ ಓದಿ – ಶಿವಮೊಗ್ಗಕ್ಕೆ ವೈದ್ಯಕೀಯ ಶಿಕ್ಷಣ ಸಚಿವ, ಮೂರು ದಿನ ಪ್ರವಾಸ, ಎರಡು ದಿನ ಡಿಸಿ ಕಚೇರಿಯಲ್ಲಿ ಮಹತ್ವದ ಮೀಟಿಂಗ್
ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಕೆ.ಸಿ.ಸದಾಶಿವಪ್ಪ ಪ್ರವೀಣ್ ಪಟೇಲ್, ಪ್ರಮುಖರಾದ ಗಂಗಾಧರ ಕಾಸರಗೋಡು, ಭೀಮರಾವ್, ಸುಧಾ ಪರಮೇಶ್ವರಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200