ಶಿವಮೊಗ್ಗ: ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಸೂರು ಗ್ರಾಮದಲ್ಲಿ ಅಣು ಸ್ಥಾವರ ಸ್ಥಾಪನೆ ಆಗಲಿದೆ ಎಂಬ ಸುದ್ದಿ ಹರಡಿದಾಗ, ರೈತರು ನೆಲೆ ಕಳೆದುಕೊಳ್ಳುವ ಭೀತಿಯಿಂದ ತೀವ್ರ ಹೋರಾಟ ನಡೆಸಿದ್ದರು. ಹೋರಾಟದಲ್ಲ ತಾವು ಭಾಗವಹಿಸಿದ್ದಾಗಿ ತಿಳಿಸಿದರು.

ಹಿಂದಿನ ಸಿಎಂ ಕಟ್ಟುನಿಟ್ಟು ಸೂಚನೆ
ಈ ಸಂಬಂಧ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ, ಕರ್ನಾಟಕದ ಯಾವುದೇ ಭಾಗದಲ್ಲೂ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಅವಕಾಶ ಇಲ್ಲ ಎಂದು ನಿರ್ಧರಿಸಿದೆ. ಬೇಸೂರು ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದನ್ನು ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಲಾಗಿದೆ. ಹೀಗಾಗಿ ಬೇಸೂರು ಗ್ರಾಮದ ಜನರು ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು.
ಪಂಪ್ಡ್ ಸ್ಟೋರೇಜ್ ಯೋಜನೆ ಮುಂದುವರಿಕೆ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಪ್ರಶ್ನೆಗೆ, ಈಗ ಹೊಸದಾಗಿ ಜಲಾಶಯ ಕಟ್ಟಲು ಆಗುವುದಿಲ್ಲ. ಆದರೆ ಪ್ರಸ್ತುತ ಲಭ್ಯವಿರುವ ನೀರಿನಲ್ಲೇ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ ಇರುವುದರಿಂದ ಈ ಯೋಜನೆ ಮುಂದುವರೆಯಲಿದೆ. ಪರಿಸರ ಹಾನಿ ತಪ್ಪಿಸಲು ಸಂರಕ್ಷಣೆಗೆ ಪರ್ಯಾಯ ಜಾಗ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಪ್ರಮುಖರಾದ ಹುಲ್ತಿಕೊಪ್ಪ ಶ್ರೀಧರ್, ರಮೇಶ್ ಶಂಕರಘಟ್ಟ ಇದ್ದರು.