ಶಿವಮೊಗ್ಗ: ವಿಜಯದಶಮಿ ಮೆರವಣಿಗೆ ಸಂದರ್ಭ ಅಂಬಾರಿ ಹೊತ್ತ ಆನೆ ಅಡ್ಡಾದಿಡ್ಡಿ ಓಡಿದ್ದ ಪ್ರಕರಣದ ಬೆನ್ನಿಗೆ, ಶಿವಮೊಗ್ಗದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ ಪಟಗಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. (ಈ ಸುದ್ದಿಯನ್ನು ಇನ್ನು 58 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪ್ರಸನ್ನಕೃಷ್ಣ ಪಟಗಾರ್ ಅವರನ್ನು ಮಡಿಕೇರಿಯ ಸಂಶೋಧನ ವಿಭಾಗದ ಡಿಸಿಎಫ್ ಆಗಿ ನೇಮಕ ಮಾಡಲಾಗಿದೆ. ಇವರಿಂದ ತೆರವಾದ ಸ್ಥಾನಕ್ಕೆ 2021ರ ಬ್ಯಾಚ್ನ ಐಎಫ್ಎಸ್ ಅಧಿಕಾರಿ ರಾಘವೇಂದ್ರ ರಾವ್ ಅವರನ್ನು ನೇಮಕ ಮಾಡಲಾಗಿದೆ. ರಾಘವೇಂದ್ರ ರಾವ್ ಅವರು ಪ್ರಸ್ತುತ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಶಿವಮೊಗ್ಗ ವಿಭಾಗದ ಡಿಸಿಎಫ್ ಮತ್ತು ವಿಭಾಗ ವ್ಯವಸ್ಥಾಪಕರಾಗಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು, ರಾಘವೇಂದ್ರ ರಾವ್ ಅವರಿಂದ ತೆರವಾದ ಸ್ಥಾನಕ್ಕೆ ಮುನಿರಾಬಾದ್ನ ತುಂಗಭದ್ರ ಕಾಡಾದ ಡಿಸಿಎಫ್ ಮತ್ತು ಡಿಎಒ ಆಗಿರುವ ಭಾಗ್ಯಲಕ್ಷ್ಮಿ .ಎಂ.ಸಿ ಅವರನ್ನು ವರ್ಗಾಯಿಸಲಾಗಿದೆ.

ವಿಜಯದಶಮಿ ಮೆರವಣಿಗೆ ವೇಳೆ ಸೋಮಣ್ಣ ಆನೆ ಅಡ್ಡಾದಿಡ್ಡಿ ಓಡಿ ಅಂಬಾರಿಯನ್ನು ಕೆಳಗೆ ಕೆಡವಿತ್ತು. ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿದ್ದ ಸಾಗರ್ ಆನೆಯನ್ನು ಪಕ್ಕಕ್ಕೆ ಸರಿಸಿ ಅಂಬಾರಿ ಹೊತ್ತ ಸೋಮಣ್ಣ ಆನೆಯನ್ನು ಏಕಾಏಕಿ ಮುಂದಕ್ಕೆ ತಂದು ನಿಲ್ಲಿಸಲಾತ್ತು. ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಅವರ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ನಿಶಾನೆ ಆನೆ ಕಾಣದೆ ಬೆದರಿದ ಸೋಮಣ್ಣ ಆನೆ ಅಂಬಾರಿ ಹೊತ್ತುಕೊಂಡೆ ಓಡಿತ್ತು. ನಿಶಾನೆ ಬದಲಿಸುವಾಗ ಪ್ರಸನ್ನಕೃಷ್ಣ ಪಟಗಾರ್ ಅವರು ನೀಡಿದ ಸೂಚನೆಯ ವಿಡಿಯೋವನ್ನು ಶಿವಮೊಗ್ಗ ಲೈವ್.ಕಾಂ ಪ್ರಕಟಿಸಿತ್ತು. ಇದರ ಬೆನ್ನಿಗೆ ವಿವಿಧ ಸಂಘಟನೆಗಳು, ಪರಿಸರವಾದಿಗಳು ಡಿಸಿಎಫ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.