ಶಿವಮೊಗ್ಗ ಏರ್‌ಪೋರ್ಟ್‌, ಇನ್ನು ಮೂರ್ನಾಲ್ಕು ತಿಂಗಳು ವಿಮಾನ ಹಾರಾಟ ಇಲ್ಲ, ಕಾರಣವೇನು?

ಶಿವಮೊಗ್ಗ: ಉಡಾನ್ ಯೋಜನೆಯ ಒಪ್ಪಂದದ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮುಂದಿನ 3 ರಿಂದ 4 ತಿಂಗಳ ಕಾಲ ಯಾವುದೇ ವಿಮಾನ ಸೇವೆ ಲಭ್ಯವಿರುವುದಿಲ್ಲ ಎಂದು ಕೆ.ಎಸ್.ಐ.ಐ.ಡಿ.ಸಿ ಅಧ್ಯಕ್ಷ ನಂಜಯ್ಯನಮಠ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 59 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ನಗರದ ಮಲ್ನಾಡ್‌ ಶೈರ್‌ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿ ದೊರೆಯುತ್ತಿದ್ದ ಆರ್ಥಿಕ ನೆರವಿನ ಸೌಲಭ್ಯ ನವೆಂಬರ್ 21ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಯು ವಿಮಾನ ಸೇವೆ ಸ್ಥಗಿತಗೊಳಿಸಲಿದೆ ಎಂದರು.

Nanjaiah-Mutt-speaks-about-Shivamogga-Airport-at-Malnad-Shire-hotel

ಮುಂದಿನ 3-4 ತಿಂಗಳಲ್ಲಿ ವಿಮಾನ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲು ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ. ಈ ಕುರಿತು ಕೇಂದ್ರ ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಗಮನಕ್ಕೂ ತರಲಾಗಿದೆ ಎಂದು ವಿವರಿಸಿದರು.

ಉಡಾನ್ 6.0 ಯೋಜನೆಯಡಿ ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್, ಗೋವಾ, ಮುಂಬೈ, ತಿರುಪತಿ ಸೇರಿದಂತೆ 13 ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದಿಂದ ಮಂಜೂರಾತಿ ದೊರೆತ ತಕ್ಷಣವೇ ಸೇವೆ ಆರಂಭವಾಗಲಿದೆ ಎಂದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಶೇ 95 ರಷ್ಟು ಪೂರ್ಣಗೊಂಡಿದೆ. ಶೀಘ್ರವೇ ಫ್ಲೈಟ್ ಕ್ಯಾಲಿಬ್ರೇಷನ್ ಪ್ರಕ್ರಿಯೆ ನಡೆಯಲಿದೆ. ವಿಮಾನ ಸಂಚಾರ ಇಲ್ಲದಿದ್ದರೂ ನಿಲ್ದಾಣದ 80 ನೌಕರರನ್ನು ಕೆಲಸದಲ್ಲಿ ಮುಂದುವರಿಸಲಾಗುವುದು ಎಂದು ನಂಜಯ್ಯನಮಠ ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಅಧ್ಯಕ್ಷ ಹೆಚ್‌.ಸಿ.ಯೋಗೇಶ್, ವಿಮಾನ ನಿಲ್ದಾಣ ನಿರ್ದೇಶಕ ಶಮಂತ್, ಕೆಎಸ್ಐಎಸ್ಎಫ್ ಸಹಾಯಕ ಕಮಾಂಡೆಂಟ್ ಶಶಿಕುಮಾರ್ ನಾಯ್ಕ್ ಉಪಸ್ಥಿತರಿದ್ದರು.