ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 30 MAY 2023
SHIMOGA : ಪ್ರತಿ ದಿನ ನೂರಾರು ಜನ ಇಲ್ಲಿ ಬಸ್ಸಿಗಾಗಿ ಕಾದು ನಿಲ್ಲುತ್ತಾರೆ. ಸರ್ಕಾರಿ, ಖಾಸಗಿ ಬಸ್ಸುಗಳು ಇಲ್ಲಿ ನಿಲುಗಡೆ ಕೊಡುತ್ತವೆ. ಆದರೆ ಇಲ್ಲಿ ಪ್ರಯಾಣಿಕರಿಗೆ ಗಾಳಿ, ಮಳೆ, ಬಿಸಿಲಿನಿಂದ ರಕ್ಷಣೆಯೇ (Safety) ಇಲ್ಲ.
ಇದು ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಸಂಗೊಳ್ಳಿ ರಾಯಣ್ಣ ಸರ್ಕಲ್ನ ಬಸ್ ಸ್ಟಾಪ್ ಪರಿಸ್ಥಿತಿ. ರಸ್ತೆಯ ಎರಡು ಬದಿಯಲ್ಲಿ ಇಲ್ಲಿ ಬಸ್ಸುಗಳ ನಿಲುಗಡೆ ಇದೆ. ಆದರೆ ಬಸ್ ಸ್ಟಾಪ್ ಇಲ್ಲದೆ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ.
ಎಲ್ಲಿಗೆಲ್ಲ ಬಸ್ ಹೋಗುತ್ತವೆ?
ಹೊನ್ನಾಳಿ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ಸುಗಳು ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕವೆ ಹಾದು ಹೋಗುತ್ತವೆ. ಮೇಲ್ಸೇತುವೆ ಪಕ್ಕದಲ್ಲಿ ಬಸ್ ಸ್ಟಾಪ್ ಇದೆ. ಉದ್ಯೋಗಿಗಳು, ವಿವಿಧ ಊರುಗಳಿಗೆ ತೆರಳುವವರು ಇಲ್ಲೆಯೇ ಕೆಎಸ್ಆರ್ಟಿಸಿ ಬಸ್ ಹತ್ತುತ್ತಾರೆ. ಇನ್ನು, ಶಾಂತಿನಗರದ ಕಡೆಗೆ ತೆರಳುವ ಸಿಟಿ ಬಸ್ಸುಗಳು ಕೂಡ ಇಲ್ಲಿ ಸ್ಟಾಪ್ ಕೊಡುತ್ತವೆ.
ಮತ್ತೊಂದೆಡೆ ಹೊನ್ನಾಳಿ, ದಾವಣಗೆರೆ ಮತ್ತು ಉತ್ತರ ಕರ್ನಾಟಕ ಭಾಗದಿಂದ ಶಿವಮೊಗ್ಗ ನಗರಕ್ಕೆ ಬರುವ ಕೆಎಸ್ಆರ್ಟಿಸಿ ಬಸುಗಳು ಮೇಲ್ಸೇತುವೆಯಿಂದ ಕೆಳಗಿಳಿಯುತ್ತಿದ್ದಂತೆ ಸರ್ಕಲ್ನಲ್ಲಿ ಸ್ಟಾಪ್ ಕೊಡುತ್ತವೆ.
ಸರ್ಕಲ್ನಲ್ಲಿರುವ ಕಟ್ಟೆಯೇ ಆಸರೆ
ಶಿವಮೊಗ್ಗ ನಗರದಲ್ಲಿ 117 ಕಡೆ ಸಿಟಿ ಬಸ್ಗಳ ನಿಲುಗಡೆ ಗುರುತಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಪೈಕಿ ಸಂಗೊಳ್ಳಿ ರಾಯಣ್ಣ ಸರ್ಕಲ್ ಕೂಡ ಒಂದು. ಆದರೆ ಇಲ್ಲಿ ಪ್ರಯಾಣಿಕರ ತಂಗುದಾಣವೆ ಇಲ್ಲ. ಪ್ರತಿದಿನ ನೂರಾರು ಜನರು ಬಹು ಹೊತ್ತು ಬಿಸಿಲಿನಲ್ಲಿ ಬಸ್ಸುಗಳಿಗೆ ಕಾದು ಕೂರುತ್ತಾರೆ. ದೂರದ ಊರುಗಳಿಗೆ ಹೋಗುವವರು ಮಕ್ಕಳು, ಲಗೇಜ್ಗಳನ್ನು ಹೊತ್ತುಕೊಂಡು ಬಿಸಿಲಿನಲ್ಲಿ ಬಸ್ಗಳಿಗೆ ಕಾಯುವಷ್ಟರಲ್ಲಿ ಹೈರಾಣಾಗುತ್ತಾರೆ.
ಇದನ್ನೂ ಓದಿ – ಇನ್ಮುಂದೆ ಎಲ್ಲೆಂದರಲ್ಲಿ ಸಿಟಿ ಬಸ್ ನಿಲ್ಲಿಸುವಂತಿಲ್ಲ, ಶಿವಮೊಗ್ಗದಲ್ಲಿ 117 ಬಸ್ ಸ್ಟಾಪ್ ಗುರುತಿಸಿ ಅಧಿಸೂಚನೆ ಪ್ರಕಟ
ಮಳೆ ಸುರಿದರೆ ಇಲ್ಲಿ ಪರಿಸ್ಥಿತಿಯೇ ವಿಭಿನ್ನ. ಪಕ್ಕದ ಪೆಟ್ರೋಲ್ ಬಂಕ್ನಲ್ಲೇ ಪ್ರಯಾಣಿಕರು ಆಶ್ರಯ ಪಡೆಯಬೇಕು. ಬಸ್ಸು ಬಂತೆಂದು ದಿಢೀರನೆ ಅಲ್ಲಿಂದ ಓಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಕೆಇಬಿ ಸರ್ಕಲ್ ಕಡೆಯಿಂದ ಹೊನ್ನಾಳಿ ರಸ್ತೆಗೆ ತೆರಳುವ ವಾಹನಗಳು ಇಲ್ಲಿ ತಿರುವು ಪಡೆಯುತ್ತವೆ. ಸ್ವಲ್ಪ ಯಾಮಾರಿದರೆ ಅಪಘಾತವಾಗುತ್ತದೆ.
ʼಪ್ರಯಾಣಿಕರ ತಂಗುದಾಣ ಬೇಕುʼ
ಈ ಸರ್ಕಲ್ನಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಿದ್ದಾರೆ. ಇದರ ಬದಲು ಬಸ್ ಸ್ಟಾಪ್ ಮಾಡಿದ್ದರೆ, ಪ್ರತಿದಿನ ಓಡಾಡುವ ಪ್ರಯಾಣಿಕರಿಗೆ ಅನುಕೂಲ ಆಗುತ್ತಿತ್ತು. ಅಧಿಕಾರಿಗಳು ಇದನ್ನೆಲ್ಲ ಗಮನಿಸುತ್ತಾರೋ ಇಲ್ಲವೊ ಗೊತ್ತಿಲ್ಲ ಅನ್ನುತ್ತಾರೆ ನಿತ್ಯ ಹೊನ್ನಾಳಿ ಕಡೆಗೆ ತೆರಳುವ ಶಾಲೆ ಶಿಕ್ಷಕ (ಹೆಸರು ಬಹಿರಂಗಪಡಿಸಬೇಡಿ ಎಂದು ಮನವಿ).
ಬಸ್ಸು ಯಾವ ಟೈಮಿಗೆ ಬರುತ್ತೆ ಅನ್ನವುದು ಗೊತ್ತಾಗುವುದಿಲ್ಲ. ಮಗು ಹೊತ್ತುಕೊಂಡು ಬಿಸಲಿನಲ್ಲಿ ಕಾದು ನಿಲ್ಲುವುದು ಕಷ್ಟ. ಇಲ್ಲಿ ಬಸ್ ಸ್ಟಾಪ್ ಇದ್ದಿದ್ದರೆ ನೆರಳಲ್ಲಿ ಕೂರಬಹುದಿತ್ತು ಅನ್ನುತ್ತಾರೆ ಹರಿಹರದ ಬಸ್ಸಿಗಾಗಿ ಕಾದು ನಿಂತಿದ್ದ ಪ್ರಮೀಳಾ.
ಈ ಸ್ಥಳದಲ್ಲಿ ತಂಗುದಾಣ ನಿರ್ಮಾಣಕ್ಕೆ ಸೂಕ್ತ ಸ್ಥಳದ ಕೊರತೆ ಇರಬಹುದು. ಇದಕ್ಕೆ ಪರಿಹಾರವಾಗಿ ರೈಲ್ವೇ ನಿಲ್ದಾಣದ ಎದುರಿನ ಸರ್ವಜ್ಞ ಸರ್ಕಲ್ನಲ್ಲಿ ಒಂದು ದೊಡ್ಡ ಹಾಗೂ ಸುಸಜ್ಜಿತ ಸರ್ವೀಸ್ ಬಸ್ ನಿಲ್ದಾಣ ಮತ್ತು ಸಿಟಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು. ಇದು ರೈಲ್ವೆ ಪ್ರಯಾಣಿಕರಿಗಂತೂ ತುಂಬಾ ಅನುಕೂಲಕರ. ಶಂಕರಮಠ ಕಡೆಯಿಂದ ಬರುವ ಬಸ್ಗಳು ಕಡ್ಡಾಯವಾಗಿ ಸರ್ವಜ್ಞ ಸರ್ಕಲ್ ಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವಂತೆ ಮಾಡಬೇಕು ಅನ್ನುತ್ತಾರ ಶಿವಮೊಗ್ಗದ ಚನ್ನುಡಿ ಬಳಗದ ತ್ಯಾಗರಾಜ ಮಿತ್ಯಾಂತ.
ಸ್ಮಾರ್ಟ್ ಸಿಟಿ ವತಿಯಿಂದ ನಗರದ ವಿವಿಧೆಡೆ ಅತ್ಯಾಧುನಿಕ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ. ಇದೆ ಮಾದರಿಯ ಬಸ್ ನಿಲ್ದಾಣವನ್ನು ಸರ್ವಜ್ಞ ವೃತ್ತದಲ್ಲಿಯು ನಿರ್ಮಿಸಬೇಕಿದೆ. ಇದರಿಂದ ಪ್ರಯಾಣಿಕರು ನಿತ್ಯ ಪರದಾಡುವುದು ತಪ್ಪಲಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422