ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಸೆಪ್ಟೆಂಬರ್ 2021
ಪ್ರಯಾಣಿಕರೊಬ್ಬರು ಆಟೋದಲ್ಲೇ ಬಿಟ್ಟು ಹೋಗಿದ್ದ ಐದು ಲಕ್ಷ ಮೌಲ್ಯದ ವಸ್ತುಗಳನ್ನು ಚಾಲಕ ಪೊಲೀಸರಿಗೆ ಒಪ್ಪಿಸಿ, ವಾರಸುದಾರರಿಗೆ ಸೇರುವಂತೆ ನೋಡಿಕೊಂಡು ಪ್ರಾಮಾಣಿಕತೆ ಮೆರೆದಿದ್ದಾರೆ.
ಕರ್ನಾಟಕ ಸಂಘದ ಆಟೋ ನಿಲ್ದಾಣದ ಚಾಲಕ ಮಜೀದ್ ಅವರು ಐದು ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ವಾರಸುದಾರರ ಕೈ ಸೇರುವಂತೆ ನೋಡಿಕೊಂಡಿದ್ದಾರೆ.
ಏನಿದು ಪ್ರಕರಣ?
ಜೈಲ್ ರಸ್ತೆಯಲ್ಲಿ ಪ್ರಯಾಣಿಕರೊಬ್ಬರು ಆಟೋ ಹತ್ತಿದ್ದರು. ಗುಂಡಪ್ಪ ಶೆಡ್ ತನಕ ಆಟೋದಲ್ಲಿ ತೆರಳಿದ್ದರು. ಇಳಿಯುವಾಗ ಗಡಿಬಿಡಿಯಲ್ಲಿ ಕೆಲವು ವಸ್ತುಗಳನ್ನು ಆಟೋದಲ್ಲೇ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಚಾಲಕ ಮಜೀದ್, ನೇರವಾಗಿ ಕೋಟೆ ಠಾಣೆಗೆ ಬಂದು ವಸ್ತುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಐದು ಲಕ್ಷ ಮೌಲ್ಯದ ವಸ್ತುಗಳು
ಮಜೀದ್ ತಂದುಕೊಟ್ಟ ವಸ್ತುಗಳನ್ನು ಪರಿಶೀಲಿಸಿದ ಪೊಲೀಸರು, ಅವು ಸೋಗಾನೆಯ ರಮೇಶ್ ಎಂಬುವವರಿಗೆ ಸೇರಿದ್ದು ಎಂಬುದನ್ನು ಖಚಿತಪಡಿಸಿಕೊಂಡರು. ಅವರನ್ನು ಸಂಪರ್ಕಿಸಿ ಠಾಣೆಗೆ ಬರುವಂತೆ ಸೂಚಿಸಿ, ವಸ್ತುಗಳನ್ನು ಹಸ್ತಾಂತರಿಸಿದರು. ರಮೇಶ್ ಅವರು ಹೊಯ್ಸಳ ಕೋ ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿಯಾಗಿದ್ದಾರೆ. ಸೊಸೈಟಿಗೆ ಸೇರಿದ ಚೆಕ್ ಬುಕ್’ಗಳು, ಸೋಗಾನೆಯಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಿರುವ ಜಮೀನಿನ ದಾಖಲೆಗಳು, ಕೆಲ ಬಾಂಡ್’ಗಳು ಸೇರಿ ಐದು ಲಕ್ಷ ಮೌಲ್ಯದ ವಸ್ತುಗಳನ್ನು ಬಿಟ್ಟು ಹೋಗಿದ್ದರು.
ಆಟೋ ಚಾಲಕ ಮಜೀದ್ ಅವರ ಕಾರ್ಯಕ್ಕೆ ಪೊಲೀಸರು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200