ಶಿವಮೊಗ್ಗ: ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಮನೆಗಳ ಮೇಲ್ಛಾವಣಿ ಸೌರ ವಿದ್ಯುತ್ ಘಟಕ ಅಳವಡಿಕೆಗೆ ಪ್ರೋತ್ಸಾಹಿಸಲು ಮೆಸ್ಕಾಂ ವತಿಯಿಂದ ಜಿಲ್ಲೆಯ ಎಲ್ಲಾ ಉಪವಿಭಾಗ ಕಚೇರಿಗಳಲ್ಲಿ ಮೂರು ದಿನಗಳ ಸೇವಾಸೇತು ಶಿಬಿರ ಆಯೋಜಿಸಲಾಗಿದೆ.
ಅಕ್ಟೋಬರ್ 15 ರಿಂದ ಅಕ್ಟೋಬರ್ 17 ರವರೆಗೆ ಈ ಶಿಬಿರಗಳು ನಡೆಯಲಿವೆ. ಸಾರ್ವಜನಿಕರಲ್ಲಿ ಯೋಜನೆ ಕುರಿತು ಅರಿವು ಮೂಡಿಸುವುದು, ಅಗತ್ಯ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹಾಗೂ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಮಾರ್ಗದರ್ಶನ ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಸೌರ ವಿದ್ಯುತ್ ಘಟಕಗಳ ಅಳವಡಿಕೆಗೆ ಅಧಿಕೃತ ಮಾರಾಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ನೆರವು ನೀಡಲಾಗುತ್ತದೆ.

ಆಸಕ್ತ ಗ್ರಾಹಕರು ಇತ್ತೀಚಿನ ವಿದ್ಯುತ್ ಬಿಲ್ ಪ್ರತಿ ಹಾಗೂ ಆಧಾರ್ ಕಾರ್ಡ್ನೊಂದಿಗೆ ತಮ್ಮ ತಾಲೂಕು ವ್ಯಾಪ್ತಿಯ ಮೆಸ್ಕಾಂ ಉಪವಿಭಾಗ ಕಚೇರಿಗೆ ತೆರಳಿ ಯೋಜನೆಯ ಸೌಲಭ್ಯ ಪಡೆಯಬಹುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.