ಶಿವಮೊಗ್ಗ ಸಿಟಿಯಲ್ಲಿ ದಿಢೀರ್‌ ಕಾರ್ಯಾಚರಣೆ, 70 ಆಟೊಗಳು ವಶಕ್ಕೆ, ಕಾರಣವೇನು?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಆಟೊ ರಿಕ್ಷಾಗಳ ವಿರುದ್ಧ ಟ್ರಾಫಿಕ್‌ ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ತಪಾಸಣೆ ವೇಳೆ 70 ಆಟೊಗಳನ್ನು ವಶಕ್ಕೆ ಪಡೆಯಲಾಗಿದೆ.

Shivamogga-Traffic-Police-Seized-70-Autos

ಅಶೋಕ ವೃತ್ತ, ಶಿವಪ್ಪನಾಯಕ ವೃತ್ತ ಹಾಗೂ ರೈಲು ನಿಲ್ದಾಣದ ಆಸುಪಾಸಿನಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಚಾಲಕರ ಚಾಲನಾ ಪರವಾನಗಿ, ವಿಮೆ, ಫಿಟ್‌ನೆಸ್ ಪ್ರಮಾಣಪತ್ರ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಮತ್ತು ಡಿಸ್‌ಪ್ಲೇ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಯಿತು.

##70 ಆಟೋಗಳು ವಶಕ್ಕೆ

ತಪಾಸಣೆ ವೇಳೆ ದಾಖಲೆಗಳಿಲ್ಲದ 70 ಆಟೋಗಳನ್ನು ಜಪ್ತಿ ಮಾಡಲಾಗಿದೆ. ಫಿಟ್‌ನೆಸ್ ಪ್ರಮಾಣಪತ್ರದ ಅವಧಿ ಮುಕ್ತಾಯಗೊಂಡಿರುವ ಆಟೊಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯ (RTO) ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಮುಂದೆ ಇಂತಹ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗುವುದು ಎಂದು ಟ್ರಾಫಿಕ್‌ ಪೊಲೀಸರು ಎಚ್ಚರಿಸಿದ್ದಾರೆ.

##ಮೀಟರ್ ದರ ಕಡ್ಡಾಯ ಆಟೊ ಚಾಲಕರು ಕಡ್ಡಾಯವಾಗಿ ಮೀಟರ್ ಬಳಸಿ, ಮೀಟರ್‌ನಲ್ಲಿ ನಮೂದಾದ ದರವನ್ನು ಮಾತ್ರ ಪ್ರಯಾಣಿಕರಿಂದ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಯಾಣಿಕರ ಸುರಕ್ಷತೆ ಮತ್ತು ಪಾರದರ್ಶಕ ಸಾರಿಗೆ ವ್ಯವಸ್ಥೆಗಾಗಿ ಸಹಕರಿಸುವಂತೆ ಸೂಚನೆ ನೀಡಲಾಗಿದೆ. ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಟಿ.ವಿ.ದೇವರಾಜ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.