ಶಿವಮೊಗ್ಗ: ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವವಿರುವ ಶಿವಮೊಗ್ಗ ದಸರಾ ಉತ್ಸವದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರ ಶಕ್ತಿ ಪ್ರದರ್ಶನಕ್ಕೆ ಕಡಿವಾಣ ಹಾಕಿ, ಶಿಷ್ಟಾಚಾರದಂತೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಬನ್ನಿ ಮಂಟಪದ ಮೇಲೆ ಅವಕಾಶ ಕಲ್ಪಿಸಬೇಕು ಎಂದು ಪೀಪಲ್ಸ್ ಫಾರ್ ಸಿವಿಲ್ ರೈಟ್ಸ್ ಸಂಘಟನೆಯ ಅಧ್ಯಕ್ಷ ಸುರೇಶ್ ಬಾಬು ಆಗ್ರಹಿಸಿದರು. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯಿಂದ ಪ್ರತಿವರ್ಷ ಆಯೋಜಿಸುವ ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರ ಅಬ್ಬರ ಹೆಚ್ಚಾಗುತ್ತಿದೆ. ಇದರಿಂದ ಧಾರ್ಮಿಕ ವಿಧಿವಿಧಾನಗಳಿಗೆ ಅಡಚಣೆಯಾಗುತ್ತಿದೆ. ಬನ್ನಿ ಮುಡಿಯುವ ಸಾಂಪ್ರದಾಯಿಕ ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಸಾವಿರಾರು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಸೇರಿದಂತೆ ಚುನಾಯಿತ ಪ್ರತಿನಿಧಿಗಳಲ್ಲದ ರಾಜಕೀಯ ಮುಖಂಡರಿಗೆ ಮಂಟಪದ ಮೇಲೆ ಅವಕಾಶ ಕಲ್ಪಿಸಬಾರದು. ಸಂಸದರು, ಸಚಿವರು, ಶಾಸಕರು, ನಿಗಮ-ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಧಾರ್ಮಿಕ ಪೂಜಾವಿಧಿ ನೆರವೇರಿಸುವ ಅರ್ಚಕರು-ಪುರೋಹಿತರಿಗೆ ಮಾತ್ರ ಆದ್ಯತೆ ಮೇರೆಗೆ ಅವಕಾಶ ನೀಡಬೇಕು ಎಂದರು.
ದಸರಾ ಸಂದರ್ಭ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಜನದಟ್ಟಣೆ ನಿಯಂತ್ರಿಸಲು ಅಗತ್ಯ ವ್ಯವಸ್ಥೆ ಮಾಡಬೇಕು. ರಾಜಮಹಾರಾಜರ ಕಾಲದಿಂದ ನಡೆದುಕೊಂಡು ಬಂದಿರುವ ಕತ್ತಿ ಪೂಜೆ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳು ಅಡಚಣೆಯಿಲ್ಲದೆ ನಡೆಯಬೇಕು. ನುರಿತ ಕಲಾತಂಡಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಪಾಲಿಕೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಸಲ್ಲಿಸುತ್ತಿದ್ದರೂ ಪಾಲಿಕೆ ಕ್ರಮ ಕೈಗೊಂಡಿಲ್ಲ. ಈ ಬಾರಿಯೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಾರ್ಯಕ್ರಮದ ಘನತೆ ಮತ್ತು ಧಾರ್ಮಿಕ ಆಚರಣೆಯ ಪಾವಿತ್ರ್ಯ ಕಾಪಾಡದಿದ್ದರೆ ಕಾನೂನುಬದ್ಧ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ನಿರಂಜನ್ ಮೂರ್ತಿ, ಯಶವಂತ್, ಎಂ. ಗುರುಕಿರಣ್, ಎಸ್. ಭರತ್, ಗಿರೀಶ್, ಎಂ.ಸಿ. ಅಭಿಜಿತ್, ರಾಜು ಹಾಗೂ ಸುಬ್ರಮಣ್ಯ ಉಪಸ್ಥಿತರಿದ್ದರು.