ಕೇಂದ್ರ ಸರ್ಕಾರಕ್ಕೆ ಸುಳ್ಳು ಹೇಳಿದ ಸಂಸದ ರಾಘವೇಂದ್ರ, ಏನದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ವಿದ್ಯಾನಗರ ರೈಲ್ವೆ ಗೇಟ್ (LC 46) ಬಳಿ ಮೇಲ್ಸೇತುವೆ ನಿರ್ಮಾಣದ ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಸುಳ್ಳು ಹೇಳಬೇಕಾಯಿತು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು

➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ವಿದ್ಯಾನಗರದಲ್ಲಿ ರೈಲ್ವೆ ಕೆಳ ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, “ವಿದ್ಯಾನಗರ ರೈಲ್ವೆ ಗೇಟ್ ಬಳಿ ಇರುವ ರಸ್ತೆ ವಾಸ್ತವವಾಗಿ ರಾಷ್ಟ್ರೀಯ ಹೆದ್ದಾರಿಗೆ (NH) ಸೇರಿದ್ದಲ್ಲ. ಅದು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿತ್ತು. ಆದರೆ, ಅಲ್ಲಿ ಮೇಲ್ಸೇತುವೆ ನಿರ್ಮಾಣವಾಗಲೇಬೇಕು ಎಂಬ ಹಠದಿಂದ, ರಾಷ್ಟ್ರೀಯ ಹೆದ್ದಾರಿ ಇಲಾಖೆಯವರಿಗೆ ಇದು ನಿಮ್ಮದೇ ಜಾಗ ಎಂದು ಸುಳ್ಳು ಹೇಳಿ ಯೋಜನೆಗೆ ಚಾಲನೆ ನೀಡಲಾಗಿತ್ತು” ಎಂದು ಸ್ಮರಿಸಿಕೊಂಡರು.

280626 MP BY Raghavendra with Channabasappa and DS Arun at Vidyanagara

ಅಧಿಕಾರಿಗಳಿಗೆ ಮಸ್ಕಾ ಹೊಡೆಯಬೇಕಾಯ್ತು

“ಕೇಂದ್ರದಿಂದ ಯೋಜನೆ ಮಂಜೂರಾದ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿತ್ತು. ಇದು ನಮ್ಮ ಇಲಾಖೆಯ ಜಾಗವೇ ಅಲ್ಲ ಎಂದು ಅಧಿಕಾರಿಗಳು ಯೋಜನೆಯನ್ನು ರದ್ದುಗೊಳಿಸಲು (ರಿಜೆಕ್ಟ್) ಮುಂದಾಗಿದ್ದರು. ಆ ಸಂದರ್ಭ ಅಧಿಕಾರಿಗಳಿಗೆ ಹೇಗೋ ಮಸ್ಕಾ ಹೊಡೆದು, ಮನವೊಲಿಸಿ ಕೊನೆಗೂ ಅಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವಂತೆ ಮಾಡಿದೆ” ಎಂದು ಸಂಸದ ರಾಘವೇಂದ್ರ ಆ ಸಂದರ್ಭ ಮೆಲುಕು ಹಾಕಿದರು.

ಟೆಂಡರ್ ಆಗಿ ನಿಂತಿದ್ದ ಕೆಲಸಕ್ಕೆ ಮರುಚಾಲನೆ

“ಸದ್ಯ ಇದೇ ಎಲ್‌ಸಿ 46 ರಸ್ತೆ ಜಂಕ್ಷನ್‌ನಲ್ಲಿ ₹5 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದಲೇ (NH) ಅಂಡರ್‌ಪಾಸ್ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಈ ಕೆಲಸವು ನೀರಾವರಿ ಇಲಾಖೆಯ ವರದಿಯಿಂದಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಅರ್ಧಕ್ಕೆ ನಿಂತುಹೋಗಿತ್ತು. ಮಳೆಗಾಲದಲ್ಲಿ ಈ ಅಂಡರ್‌ಪಾಸ್ ಸಂಪೂರ್ಣವಾಗಿ ಜಲಾವೃತಗೊಳ್ಳಲಿದೆ ಎಂದು ನೀರಾವರಿ ಇಲಾಖೆಯು ವರದಿ ನೀಡಿತ್ತು. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಈಗ ಆ ತಾಂತ್ರಿಕ ಸಮಸ್ಯೆಯನ್ನೂ ಮೀರಿ ಕೆಲಸ ಆರಂಭಿಸಲಾಗಿದೆ. ಒಂದು ವೇಳೆ ಮಳೆಗಾಲದಲ್ಲಿ ನೀರು ತುಂಬಿಕೊಂಡರೆ, ತಕ್ಷಣವೇ ಮಹಾನಗರ ಪಾಲಿಕೆಯಿಂದ ಹೈ-ಪವರ್ ಮೋಟಾರ್‌ಗಳನ್ನು ತಂದು ನೀರನ್ನು ಹೊರಗೆ ಪಂಪ್ ಮಾಡುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು” ಎಂದು ರಾಘವೇಂದ್ರ ಭರವಸೆ ನೀಡಿದರು.

ಶಾಸಕ ಎಸ್‌.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್‌, ಬಲ್ಕಿಸ್‌ ಬಾನು, ಪ್ರಮುಖರಾದ ಮೋಹನ್‌ ರೆಡ್ಡಿ, ಯಮುನಾ ರಂಗೇಗೌಡ ಸೇರಿ ಹಲವರು ಇದ್ದರು.