ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಡಿಸೆಂಬರ್ 2021
ಪಶುವೈದ್ಯಕೀಯ ಮಹಾವಿದ್ಯಾಲಯದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಇವತ್ತು ದಾಳಿ ನಡೆಸಿದ್ದಾರೆ. ಬೆಂಗಳೂರು ಮತ್ತು ಶಿವಮೊಗ್ಗದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿಯಲ್ಲಿಭಾಗವಹಿಸಿವೆ. ಬೆಳಗ್ಗೆಯಿಂದ ಪರಿಶೀಲನಾ ಕಾರ್ಯ ನಡೆಯುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೋಮಿನಕೊಪ್ಪ ಸಮೀಪದ ಪಶುವೈದ್ಯಕೀಯ ಮಹಾವಿದ್ಯಾಲಯದ ಲ್ಯಾಬ್ ಒಂದರಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಸುಮಾರು ಹತ್ತು ಅಧಿಕಾರಿಗಳ ತಂಡ ದಾಳಿ ಮತ್ತು ಪರಿಶೀಲನೆಯಲ್ಲಿ ತೊಡಗಿದೆ.
ಬೆಂಗಳೂರಿನಿಂದ ಬಂತು ಟೀಮ್
ಶಿವಮೊಗ್ಗ ಮತ್ತು ಬೆಂಗಳೂರಿನಿಂದ ಆಗಮಿಸಿರುವ ಅರಣ್ಯಾಧಿಕಾರಿಗಳ ತಂಡ ದಾಳಿಯಲ್ಲಿ ಪಾಲ್ಗೊಂಡಿದೆ. ಎಸಿಎಫ್ ವೀರೇಶ್ ಗೌಡ ಪೊಲೀಸ್ ಪಾಟೀಲ್ ಅವರ ನೇತೃತ್ವದಲ್ಲಿ ಅರಣ್ಯ ಅಪರಾಧ ನಿಯಂತ್ರಣ ವಿಭಾಗದ ಅಧಿಕಾರಿಗಳು ಬೆಂಗಳೂರಿನಿಂದ ಬಂದಿದ್ದಾರೆ. ಇನ್ನು, ಡಿಎಫ್ಒ ರವೀಂದ್ರ ಕುಮಾರ್ ಅವರ ನೇತೃತ್ವದಲ್ಲಿ ಶಿವಮೊಗ್ಗದ ತಂಡ ದಾಳಿಯಲ್ಲಿ ಪಾಲ್ಗೊಂಡಿದೆ.
ಲ್ಯಾಬ್ ಮೇಲೆ ದಾಳಿಗೆ ಕಾರಣವೇನು?
ಪಶುವೈದ್ಯಕೀಯ ಮಹಾವಿದ್ಯಾಲಯದ ಲ್ಯಾಬ್’ನಲ್ಲಿ ಷೆಡ್ಯೂಲ್ 1ಕ್ಕೆ ಸೇರಿದ ಪ್ರಾಣಿಗಳ ಅಂಗಗಳನ್ನು ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅಂಗಗಳನ್ನು ಇಟ್ಟುಕೊಂಡಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ದೂರು ಬಂದಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಲ್ಯಾಬ್’ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಾಣಿಗಳ ಅಂಗ ಇಲ್ಲಿಗೆ ಬಂದಿದ್ದು ಹೇಗೆ?
ಅರಣ್ಯ ಇಲಾಖೆ ವೈದ್ಯರು ವಿವಿಧ ಅರಣ್ಯಗಳಲ್ಲಿ ಮೃತಪಟ್ಟ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಪಶುವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಕೂಡ ಈ ಮರಣೋತ್ತರ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತಹ ಸಂದರ್ಭ ವಿದ್ಯಾರ್ಥಿಗಳ ಅಧ್ಯಯನದ ದೃಷ್ಟಿಯಿಂದ ಪ್ರಾಣಿಗಳ ಕೆಲವು ಅಂಗಗಳನ್ನು ತಂದು ಲ್ಯಾಬ್’ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.
ಷೆಡ್ಯೂಲ್ 1ರಲ್ಲಿ ಬರುವ ಪ್ರಾಣಿಗಳ ಅಂಗಗಳನ್ನು ಸಂಗ್ರಹಿಸುವುದು ಅಪರಾಧ. ಅಧ್ಯಯನ ದೃಷ್ಟಿಯಿಂದ ಇವುಗಳನ್ನು ತಂದು ಇಟ್ಟುಕೊಳ್ಳುವುದಕ್ಕೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಕೇವಲ ಮೌಕಿಕ ಅನುಮತಿ ಮೇರೆಗೆ ಅಂಗಗಳನ್ನು ತಂದು ಇಟ್ಟುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬೆಂಗಳೂರಿನಲ್ಲಿರುವ ಅರಣ್ಯ ಅಪರಾಧ ನಿಯಂತ್ರಣ ವಿಭಾಗಕ್ಕೆ ದೂರು ನೀಡಲಾಗಿದೆ.
ಏನಿದು ಷೆಡ್ಯೂಲ್ 1 ಪ್ರಾಣಿಗಳು?
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಪ್ರಾಣಿಗಳನ್ನು ಐದು ಷೆಡ್ಯೂಲ್’ಗಳಲ್ಲಿ ವಿಂಗಡಿಸಲಾಗಿದೆ. ಷೆಡ್ಯೂಲ್ 1ರಲ್ಲಿ ಮೂರು ವಿಭಾಗಗಳಿವೆ. ಪ್ರಾಣಿಗಳು, ಜಲಚರಗಳು ಮತ್ತು ಪಕ್ಷಿಗಳು ಎಂದು ವಿಭಾಗಿಸಲಾಗಿದೆ. ಹುಲಿ, ಚಿರತೆ, ಕಾಡು ಕೋಣ ಸೇರಿದಂತೆ 41 ಪ್ರಾಣಿಗಳು ಈ ಭಾಗದಲ್ಲಿವೆ. ಇವುಗಳ ಅಂಗಗಳನ್ನು ಸಂಗ್ರಹಿಸುವುದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧವಾಗಲಿದೆ.
ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು
ಶಿವಮೊಗ್ಗದ ಸೋಮಿನಕೊಪ್ಪದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯವು ರಾಜ್ಯದ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿದೆ. ಸದ್ಯ ಇಲ್ಲಿ ಮುನ್ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಬೃಹತ್ ಕ್ಯಾಂಪಸ್’ನೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಆದರೆ ಷೆಡ್ಯೂಲ್ 1ರಲ್ಲಿ ಬರುವ ಪ್ರಾಣಿಗಳ ಅಂಗಗಳನ್ನು ಅನುಮತಿ ಇಲ್ಲದೆ ಸಂಗ್ರಹಿಸಿರುವ ಕಳಂಕಕ್ಕೆ ತುತ್ತಾಗಿದೆ.