SHIVAMOGGA LIVE NEWS | 10 FEBRUARY 2024
SHIMOGA : ಇವತ್ತು ನಿಗದಿಯಾಗಿದ್ದ ವಿದ್ಯಾನಗರದಲ್ಲಿನ ವೃತ್ತಾಕಾರದ ರೈಲ್ವೆ ಮೇಲ್ಸೆತುವೆ ಉದ್ಘಾಟನೆ ಕಾರ್ಯಕ್ರಮ ದಿಢೀರ್ ರದ್ದಾಗಿದೆ. ಇದು ಚರ್ಚೆಗೆ ಕಾರಣವಾಗಿದೆ.
ಶಿವಮೊಗ್ಗದ ವಿದ್ಯಾನಗರದಲ್ಲಿ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಸಮಯ ನಿಗದಿಯಾಗಿತ್ತು. ಸಚಿವ ಮಧು ಬಂಗಾರಪ್ಪ ಅವರ ಪ್ರವಾಸದ ಪಟ್ಟಿಯಲ್ಲಿ ಸೇತುವೆ ಉದ್ಘಾಟನೆಯ ಸಮಯ ತಿಳಿಸಲಾಗಿತ್ತು. ಫೆ.10ರಂದು ಬೆಳಗ್ಗೆ 9 ಗಂಟೆಗೆ ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮ ಎಂದು ಪ್ರಕಟಿಸಲಾಗಿತ್ತು.
ಅಂತಿಮ ಸಿದ್ಧತೆ ಭರದಿಂದ ಸಾಗಿತ್ತು
ಇತ್ತ ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಅಂತಿಮ ಸಿದ್ಧತೆಗಳು ಕೂಡ ನಡೆಸಲಾಗಿತ್ತು. ಸೇತುವೆ ಮುಂಭಾಗ ಗುಂಡಿ ಬಿದ್ದ ರಸ್ತೆಗೆ ಡಾಂಬಾರ್ ಹಾಕಲಾಗಿದೆ. ಹೊಸದಾಗಿ ನಿರ್ಮಿಸಿರುವ ಡಿವೈಡರ್ಗೆ ಬಣ್ಣ ಬಳಿಯಲಾಗಿದೆ. ಇನ್ನು, ಮೇಲ್ಸೇತುವೆ ಕೂಡ ವಾಹನ ಸಂಚಾರಕ್ಕೆ ಸಂಪೂರ್ಣ ಸಿಜ್ಜಾಗಿತ್ತು.
ದಿಢೀರ್ ಪ್ಲಾನ್ ಕ್ಯಾನ್ಸಲ್
ನಿಗದಿಯಂತೆ ಕಾರ್ಯಕ್ರಮ ಆಗಿದ್ದರೆ ವಿದ್ಯಾನಗರದ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ಮೇಲೆ ಈ ಹೊತ್ತಿಗೆ ವಾಹನ ಸಂಚಾರ ಆರಂಭವಾಗಿರುತ್ತಿತ್ತು. ಆದರೆ ಸಚಿವರ ಪ್ರವಾಸದ ಪಟ್ಟಿ ದಿಢೀರ್ ಬದಲಾಗಿದೆ. ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಕೈಬಿಡಲಾಗಿದೆ. ಪೂರ್ವ ನಿಗದಿಯಂತೆ ತೀರ್ಥಹಳ್ಳಿಯಲ್ಲಿ ನಡೆಯಲಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಸಚಿವ ಮಧು ಬಂಗಾರಪ್ಪ ಭಾಗವಹಿಸಲಿದ್ದಾರೆ ಎಂದು ಪರಿಷ್ಕೃತ ಪ್ರವಾಸದ ಪಟ್ಟಿಯಲ್ಲಿ ತಿಳಿಸಲಾಗಿದೆ. ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮ ದಿಢೀರ್ ರದ್ದಾಗಿದ್ದೇಕೆ ಅನ್ನುವುದಕ್ಕೆ ಸ್ಪಷ್ಟ ಕಾರಣ ತಿಳಿಸಿಲ್ಲ.
ಚುನಾವಣೆ ಹೊತ್ತಲ್ಲಿ ಉದ್ಘಾಟನೆ ರಾಜಕೀಯ
ನಗರದ ಮೂರು ಕಡೆ ರೈಲ್ವೆ ಮೇಲ್ಸೇತುವೆ, ಒಂದು ಅಂಡರ್ ಪಾಸ್ ಹಾಗೂ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ಅಡ್ಡಲಾಗಿ ಹೊಸದಾಗಿ ಸೇತುವೆ ನಿರ್ಮಿಸಲಾಗಿದೆ. ಈಚೆಗೆ ಸಂಸದ ರಾಘವೇಂದ್ರ ತುಂಗಾ ನದಿ ಹೊಸ ಸೇತುವೆ, ಸೋಮಿನಕೊಪ್ಪದ ಬಳಿ ರೈಲ್ವ ಮೇಲ್ಸೇತುವೆ, ಅಂಡರ್ ಪಾಸ್, ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ರಾಜ್ಯ ಸರ್ಕಾರದ ಅನುದಾನವು ಇರುವುದರಿಂದ ಸಚಿವರಿಗೆ ತಿಳಿಸದೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದು ಸರಿಯಲ್ಲಿ ಎಂದು ಕಾಂಗ್ರೆಸ್ ಆಪಾದಿಸಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಈ ಕಾಮಗಾರಿಗಳ ಅಧಿಕೃತ ಉದ್ಘಾಟನೆ ನಡೆಯಲಿದೆ. ಅಲ್ಲಿಯವರೆಗೆ ವಾಹನ ಸಂಚಾರಕ್ಕೆ ಮಾತ್ರ ಮುಕ್ತಗೊಳಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಇದನ್ನೂ ಓದಿ – ಕೆಮಿಕಲ್ನಲ್ಲಿ ಪೇಪರ್ ಅದ್ದಿ 500 ರೂ. ನೋಟ್ ತಯಾರಿ, ಕಣ್ಣಾರೆ ಕಂಡು ನಂಬಿದ ವ್ಯಕಿಗೆ ಲಕ್ಷ ಲಕ್ಷ ಟೋಪಿ
ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಶಿವಮೊಗ್ಗದಲ್ಲಿ ಕಾಮಗಾರಿಗಳ ಉದ್ಘಾಟನೆ ವಿಚಾರ ರಾಜಕೀಯ ಚರ್ಚೆ ಹುಟ್ಟುಹಾಕಿದೆ. ಈಗ ನಿಗದಿಯಾಗಿದ್ದ ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮ ದಿಢೀರ್ ರದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200