ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 21 MARCH 2021
ದೇಶದ ಜನರ ರೊಟ್ಟಿಯನ್ನು ತಿಜೋರಿಯಲ್ಲಿ ಇರಿಸಿ ಬಂದ್ ಮಾಡಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ ಎಂದು ದೆಹಲಿ ರೈತ ಹೋರಾಟದ ರೂವಾರಿ, ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ರಾಕೇಶ್ ಟಿಕಾಯತ್ ಹೇಳಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್, ಕೃಷಿ ಮಾರುಕಟ್ಟೆಯನ್ನು ಕಬಳಿಸಲು ಅನೇಕ ಬಹುರಾಷ್ಟ್ರೀಯ ಕಂಪನಿಗಳು ಹಾತೊರೆಯುತ್ತಿವೆ. ಈಗಾಗಲೇ ತರಕಾರಿ ಸೇರಿದಂತೆ ಹಲವು ವಸ್ತುಗಳನ್ನು ಮಾಲ್‍ಗಳಲ್ಲಿ ಖರೀದಿಸುತ್ತಿದ್ದೇವೆ. ಮುಂದೆ ಜನರ ರೊಟ್ಟಿಯು ಕೂಡ ತಿಜೋರಿ ಸೇರಿ, ಜನರು ಸಂಕಷ್ಟಕ್ಕೀಡಾಗುವಂತಾಗುತ್ತದೆ. ದೇಶಾದ್ಯಂತ ಇದರ ವಿರುದ್ಧ ಹೋರಾಟ ನಡೆಯುತ್ತಿದೆ.
ಇನ್ನಷ್ಟು ಕಾನೂನುಗಳು ಬರಲಿವೆ
ಕೃಷಿ ಸಂಬಂಧ ಈಗಾಗಲೇ ಮೂರು ಕಾನೂನು ಬಂದಿವೆ. ಇನ್ನಷ್ಟು ಕಾನೂನು ತರಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಹಾಗಾಗಿ ದೇಶವ್ಯಾಪಿ ಹೋರಾಟ ನಡೆಸಲಾಗುತ್ತಿದೆ. ಕೃಷಿಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಕಾನೂನುಗಳನ್ನು ರೂಪಿಸಲಾಗುತ್ತಿದೆ. 0ಈ ಕಾನೂನುಗಳ ವಿರುದ್ಧ ಮಾತನಾಡಿದರೆ ಪ್ರಕರಣಗಳು ದಾಖಲಾಗುತ್ತಿದೆ. ಜೂನ್ ತಿಂಗಳೊಳಗೆ ನಮ್ಮ ಹೋರಾಟ ನಿಲ್ಲಲಿದೆ ಎಂದು ಕೇಂದ್ರ ಸರ್ಕಾರ ಯೋಚಿಸಿದೆ. ಆದರೆ ನಮ್ಮ ಹೋರಾಟ ಮುಂದುವರೆಸಲಿದ್ದೇವೆ ಎಂದು ರಾಕೇಶ್ ಟಿಕಾಯತ್ ತಿಳಿಸಿದರು.
ವಾರಾಂತ್ಯದ ಸಂತೆಗಳ ಮೇಲೆ ನಿಯಂತ್ರಣ
ಕೃಷಿ ಕಾಯ್ದೆ ಬಗ್ಗೆ ವ್ಯಾಪಾರಿಗಳಿಗೆ ಮೊದಲೆ ತಿಳಿದಿತ್ತು. ಹಾಗಾಗಿ ಅವರು ದೊಡ್ಡ ದೊಡ್ಡ ಗೋದಾಮುಗಳನ್ನು ಸ್ಥಾಪಿಸಿದ್ದಾರೆ. ವಾರಾಂತ್ಯದ ಸಂತೆಗಳ ಮೇಲೆ ನಿಯಂತ್ರಣ ಸಾಧಿಸಿ, ಆಹಾರ ಮಾರುಕಟ್ಟೆಯನ್ನು ಸ್ಥಾಪಿಸಿ ಹುನ್ನಾರ ಕೇಂದ್ರ ಸರ್ಕಾರದ್ದಾಗಿದೆ. ಈ ಮೂಲಕ ರೈತರು, ಕೂಲಿ ಕಾರ್ಮಿಕರನ್ನು ಬೀದಿಗೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಬೆಂಬಲ ಬೆಲೆ ಕಾನೂನು ಮಾಡಲಿ
ಸಂಯುಕ್ತ ಕಿಸಾನ್ ಮೋರ್ಚಾದ ಮತ್ತೊಬ್ಬ ಮುಖಂಡ ಯುದ್ದವೀರ ಸಂಗ್ ಮಾತನಾಡಿ, ಬೆಂಬಲ ಬೆಲೆ ಈ ಹಿಂದೆ ಇತ್ತು, ಈಗಲೂ ಇದೆ, ಮುಂದೆಯು ಇರುತ್ತೆ ಎಂದು ಪ್ರಧಾನಿಯವರು ತಿಳಿಸುತ್ತಿದ್ದಾರೆ. ಆದರೆ ಬೆಂಬಲ ಬೆಲೆ ಕಾನೂನು ರೂಪಿಸಿ ಎಂದು ರೈತರು ಆಗ್ರಹಿಸುತ್ತಿದ್ದಾರೆ. ಬೆಳೆಯನ್ನು ಸರ್ಕಾರವೇ ಖರೀದಿಸಲಿ, ಮಾರುಕಟ್ಟೆಯಲ್ಲೆ ಖರೀದಿಸಲಿ, ಬೆಂಬಲ ಬೆಲೆಯಲ್ಲಿ ಖರೀದಿಯಾಗಬೇಕು ಎಂದರು.
ದೇಶದ ರೈತರಿಗೇನು ಮಿದುಳಿಲ್ಲವಾ?
ಕೃಷಿ ಕಾಯ್ದೆಗಳ ವಿಚಾರದಲ್ಲಿ ರೈತರನ್ನು ಹಾದಿ ತಪ್ಪಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ ಈ ದೇಶದ ರೈತರಿಗೇನು ಮಿದುಳಿಲ್ಲವಾ, ಅಧಿಕಾರಿಗಳು, ಅಧಿಕಾರದಲ್ಲಿ ಇರುವವರಿಗೆ ಮಾತ್ರ ಯೋಚನಾ ಶಕ್ತಿ ಇರುವುದಾ ಎಂದು ಯುದ್ದವೀರ ಸಂಗ್ ಪ್ರಶ್ನಿಸಿದರು. ಅಲ್ಲದೆ, ಬಿಜೆಪಿಯನ್ನು ಕೇಡರ್ ಪಕ್ಷದ ಎಂದುಕೊಂಡಿದ್ದೆವು. ಆದರೆ ಅದು ಇಬ್ಬರಿಂದ ಮಾತ್ರ ನಡೆಯುತ್ತಿರುವ ಪಕ್ಷ. ಕೆಲವು ಉದ್ಯಮಿಗಳಿಗಾಗಿ ನಡೆಯುತ್ತಿರುವ ಪಕ್ಷ ಎಂದು ಆರೋಪಿಸಿದರು.
ಕೃಷಿಕರಿಗಷ್ಟೆ ಸೀಮಿತವಾಗದ ಆಂದೋಲನ
ಉತ್ತರ ಭಾರತದಲ್ಲಿ ಆರಂಭವಾದ ಆಂದೋಲನ ಮೊದಲಿಗೆ ಕೃಷಿಕರಿಗೆ ಸೀಮಿತವಾಗಿತ್ತು. ಆದರೆ ಕಾರ್ಮಿಕರು ಸಮಸ್ಯೆಯಲ್ಲಿದ್ದಾರೆ. ಶ್ರಮಿಕರು ಸಮಸ್ಯೆಯಲ್ಲಿದ್ದಾರೆ. ಹಲವು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಯೋಜಿಸಲಾಗಿದೆ. ಈಗ ಹೋರಾಟದ ವ್ಯಾಪ್ತಿ ದೊಡ್ಡದಾಗಿದೆ ಎಂದು ಯುದ್ದವೀರ ಸಿಂಗ್ ತಿಳಿಸಿದರು.
ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ರೈತ ಸಂಘದ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ.ಗಂಗಾಧರ್, ಹೆಚ್.ಆರ್.ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]