ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 SEPTEMBER 2023
SHIMOGA : ಬಸ್ಸುಗಳಿಗೆ ಮಾತ್ರ ಮೀಸಲಾಗಿದ್ದ ಕೆಎಸ್ಆರ್ಟಿಸಿ ನಿಲ್ದಾಣ ಈಗ ಟ್ರಾಫಿಕ್ ಪೊಲೀಸರಿಂದ (TRAFFIC POLICE) ತಪ್ಪಿಸಿಕೊಳ್ಳುವ ವಾಹನ ಸವಾರರಿಗೆ (RIDERS) ಕಳ್ಳದಾರಿಯಾಗಿದೆ. ಹೆಲ್ಮೆಟ್ ಧರಿಸದವರು, ವಾಹನದ ದಾಖಲೆಗಳು ಇಲ್ಲದವರು ಬಸ್ ನಿಲ್ದಾಣದ ಮೂಲಕ ಹಾದು ಹೋಗಿ ಪೊಲೀಸರಿಂದ ಬಚಾವ್ ಆಗುತ್ತಿದ್ದಾರೆ. ಈ ಧಾವಂತದಲ್ಲಿ ವಾಹನ ಸವಾರರು ಬಸ್ ನಿಲ್ದಾಣದಲ್ಲಿ ದೊಡ್ಡ ಅಪಘಾತಕ್ಕು ಕಾರಣವಾಗುವ ಆತಂಕ ಸೃಷ್ಟಿಸಿದ್ದಾರೆ.
ಮೂರನೇ ಗೇಟ್ ತಂದ ಫಜೀತಿ
ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಈ ಮೊದಲು ಎರಡು ಮುಖ್ಯ ದ್ವಾರಗಳಿದ್ದವು. ನಗರದ ಒಳಗೆ ಭಾರೀ ವಾಹನ ಸಂಚಾರ ನಿಷೇಧಿಸಲಾಯಿತು. ಆ ಬಳಿಕ ಕೆಎಸ್ಆರ್ಟಿಸಿ ಬಸ್ಸುಗಳು ಬುದ್ದನಗರ, ಎನ್.ಟಿ.ರಸ್ತೆ, ಬೈಪಾಸ್ ರಸ್ತೆ ಮೂಲಕ ಸಂಚರಿಸಬೇಕಾಯಿತು. ಈ ಕಾರಣಕ್ಕೆ ಬಸ್ ನಿಲ್ದಾಣದ ಹಿಂಬದಿಯಲ್ಲಿ ಮತ್ತೊಂದು ಗೇಟ್ ನಿರ್ಮಿಸಲಾಯಿತು. ನಿಲ್ದಾಣದೊಳಗೆ ಬರುವ ಬಸ್ಸುಗಳು ಹಿಂಬದಿ ಗೇಟ್ ಮೂಲಕ ಹೊರಗೆ ತೆರಳುತ್ತವೆ.
ಇದನ್ನೂ ಓದಿ – GOOD NEWS – ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿ ಇ-ಬಸ್, ಎಲ್ಲ ಬಡಾವಣೆಗು ಕನೆಕ್ಷನ್, ಏನಿದು ಯೋಜನೆ?
ಪೊಲೀಸರ ಕಣ್ತಪ್ಪಿಸಲು ಶಾರ್ಟ್ ಕಟ್
ಅಶೋಕ ಸರ್ಕಲ್ ಸಮೀಪ ರಸ್ತೆಯ ಎರಡು ಬದಿಯಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ಮಾಡುತ್ತಾರೆ. ಹಾಗಾಗಿ ಹೆಲ್ಮೆಟ್, ವಾಹನಗಳ ದಾಖಲೆ ಇಲ್ಲದೆ ಮಿಳಘಟ್ಟ, ಬುದ್ಧಾನಗರ ಕಡೆಯಿಂದ ಬರುವವರು (RIDERS) ಖಾಸಗಿ ಬಸ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದರು. ಪೊಲೀಸರು ಖಾಸಗಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ತಪಾಸಣೆ ಆರಂಭಿಸಿದ್ದರು. ಆದ್ದರಿಂದ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಬದಿ ಗೇಟ್ ಅನ್ನು ಶಾರ್ಟ್ ಕಟ್ ರೀತಿ ಬಳಸಲು ಆರಂಭಿಸಿದ್ದಾರೆ.
ಬಸ್ ಚಾಲಕರ ನಿದ್ದೆಗೆಡಿಸಿದೆ
ಹಿಂಬದಿ ಗೇಟ್ನಿಂದ ನಿಲ್ದಾಣದ ಒಳ ನುಗ್ಗುವ ವಾಹನ ಸವಾರರು ಅಶೋಕ ಹೊಟೇಲ್ ಮುಂಭಾಗ ಎನ್.ಟಿ.ರಸ್ತೆಗೆ ತಲುಪುತ್ತಿದ್ದಾರೆ. ನಿಲ್ದಾಣದೊಳಗೆ ನುಗ್ಗುವ ವಾಹನ ಸವಾರರು ಬಸ್ಸುಗಳಿಗೆ ಎದುರಿಗೆ ದಿಢೀರ್ ಸಾಗುತ್ತಾರೆ. ಕೆಎಸ್ಆರ್ಟಿಸಿ ಬಸ್ಗಳು ಮಾತ್ರವೆ ಸಂಚರಿಸುವ ಕಲ್ಪನೆಯೊಂದಿಗೆ ಬಸ್ ಚಾಲಕರು ವೇಗವಾಗಿ ಚಲಿಸಿದರೆ ಅಪಘಾತ ನಿಶ್ಚಿತ. ಹಾಗಾಗಿ ಕೆಎಸ್ಆರ್ಟಿಸಿ ಭದ್ರತಾ ಸಿಬ್ಬಂದಿ ವಾಹನಗಳನ್ನು ತಡೆದು ತಿಳಿವಳಿಕೆ ಮೂಡಿಸುತ್ತಿದ್ದಾರೆ. ಆದರೂ ದ್ವಿಚಕ್ರ ವಾಹನ ಸವಾರರು ಕಳ್ಳದಾರಿ ತೊರೆಯುತ್ತಿಲ್ಲ.
ಬೈಕುಗಳ ಕಿರಿಕಿರಿ ಒಂದೆಡೆಯಾದರೆ ಕೆಲವರು ಕಾರು, ಆಟೋಗಳನ್ನು ನಿಲ್ದಾಣದೊಳಗೆ ತರುತ್ತಿದ್ದಾರೆ. ಬಸ್ಸುಗಳ ಪ್ಲಾಟ್ಫಾರಂನಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಬಸ್ಸುಗಳು ಪ್ಲಾಟ್ಫಾರಂನಲ್ಲಿ ನಿಲ್ಲಲಾಗದೆ ನಿಲ್ದಾಣದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಮಾದರಿ ನಿಲ್ದಾಣ ಎಂದು ಹೆಸರಾಗಿರುವ ಶಿವಮೊಗ್ಗದ ನಿಲ್ದಾಣದಲ್ಲಿ ವಾಹನ ಸವಾರರಿಂದ ಕಿರಿಕಿರಿ ಉಂಟಾಗುತ್ತಿದೆ. ತಕ್ಷಣ ಇದಕ್ಕೆ ಬ್ರೇಕ್ ಬೀಳದೆ ಇದ್ದರೆ ಅಪಘಾತ ನಿಶ್ಚಿತ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿದ್ದ 10 ಸರ್ಕಾರಿ ಹೈಟೆಕ್ ಬಸ್ಗಳ ಪೈಕಿ 8 ಬಸ್ ವಾಪಸ್, ಈ ನಿರ್ಧಾರವೇಕೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422