ಶಿವಮೊಗ್ಗದಲ್ಲಿ 34 ಕಿ.ಮೀ ರಿಂಗ್‌ ರೋಡ್‌ಗೆ ಮಾಸ್ಟರ್‌ ಪ್ಲಾನ್‌, ಅಪಾರ್ಟ್‌ಮೆಂಟ್‌ಗೆ ಸದ್ಯದಲ್ಲೇ ಆಡಳಿತಾತ್ಮಕ ಮಂಜೂರಾತಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಸೂಡಾ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಿಂದ ಗೆಜ್ಜೇನಹಳ್ಳಿ – ಸೋಮಿನಕೊಪ್ಪ ರಸ್ತೆಗೆ ಲಿಂಕ್ ಮಾಡುವ 1200 ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು.

➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ವಾಜಪೇಯಿ ಬಡಾವಣೆಯಲ್ಲಿ ಇಂದು 60 ಮೀಟರ್ ಅಗಲದ ಹೊರ ವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು. ‘ಈ ಕಾಮಗಾರಿಗೆ ₹5 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದ್ದು, ₹3.70 ಕೋಟಿ ಕರಾರು ಮೊತ್ತದಲ್ಲಿ ಕೆಲಸ ಆರಂಭವಾಗಲಿದೆ. ಒಟ್ಟು 34 ಕಿ.ಮೀ. ರಿಂಗ್ ರಸ್ತೆ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು’ ಎಂದರು.

Foundation-Stone-for-Ring-Road-in-Shimoga-city-by-SUDA-president-H-S-Sundaresh.

ಸೂಡಾದಿಂದ ಅಪಾರ್ಟ್‌ಮೆಂಟ್‌, ಮಾಲ್‌

ಜಾಗದ ಬೆಲೆ ದುಬಾರಿಯಾಗಿರುವುದರಿಂದ ಸಾಮಾನ್ಯ ಜನರಿಗಾಗಿ ಊರಗಡೂರಿನ 4 ಎಕರೆ ಜಾಗದಲ್ಲಿ 1, 2 ಮತ್ತು 3 ಬಿಹೆಚ್‌ಕೆಯ 1000 ಫ್ಲಾಟ್‌ಗಳನ್ನು ನಿರ್ಮಿಸಲಾಗುವುದು. ಇದಕ್ಕೆ 15-20 ದಿನಗಳಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಗಲಿದೆ. ಜೆ.ಹೆಚ್. ಪಟೇಲ್ ಬಡಾವಣೆಯ ಒಂದೂಕಾಲು ಎಕರೆಯಲ್ಲಿ ಸ್ವಿಮ್ಮಿಂಗ್ ಪೂಲ್, ಕ್ಲಬ್ ಹೌಸ್ ಒಳಗೊಂಡ ಆಧುನಿಕ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆಯೂ ಇದೆ ಎಂದು ಸುಂದರೇಶ್‌ ತಿಳಿಸಿದರು.

ಮಾಲ್‌ಗಳು ಮತ್ತು ಕಚೇರಿ

ಗೋಪಾಲಗೌಡ ಬಡಾವಣೆಯ ವಿವೇಕಾನಂದ ಬಡಾವಣೆ ಹಾಗೂ ಸೋಮಿನಕೊಪ್ಪ ರಸ್ತೆಯಲ್ಲಿ ತಲಾ ಒಂದರಂತೆ ಒಟ್ಟು 2 ಮಾಲ್‌ಗಳನ್ನು ನಿರ್ಮಿಸಲಾಗುವುದು. ವಾಜಪೇಯಿ ಲೇಔಟ್‌ನಲ್ಲಿ ಸೂಡಾ ಪ್ರಾಧಿಕಾರದ ನೂತನ ಕಚೇರಿ ನಿರ್ಮಾಣವಾಗಲಿದೆ ಎಂದರು.

ನಗರದಲ್ಲಿ 100 ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಸಾರ್ವಜನಿಕರ ಬೇಡಿಕೆಯಂತೆ ವಾಕಿಂಗ್ ಪಾಥ್, ಲೈಟಿಂಗ್ ಸೌಲಭ್ಯದೊಂದಿಗೆ 50 ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸುಂದರೇಶ್‌ ತಿಳಿಸಿದರು.  

‘ಸೂಡಾ ವತಿಯಿಂದ ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡಲಾಗುತ್ತಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 12 ಎಕರೆ ಜಾಗ ಮಂಜೂರಾಗಿದ್ದು, ಫುಟ್‌ಬಾಲ್ ಮೈದಾನ ಮಂಜೂರಾತಿ ಕುರಿತು ಕ್ರೀಡಾ ಸಚಿವರೊಂದಿಗೆ ಚರ್ಚಿಸಲಾಗುವುದು’

– ಎಸ್‌.ಎನ್‌.ಚನ್ನಬಸಪ್ಪ, ಶಾಸಕ

ಕಾರ್ಯಕ್ರಮದಲ್ಲಿ ಸೂಡಾ ಸದಸ್ಯ ಪ್ರವೀಣ್, ಆಯುಕ್ತ ಬಿ.ಆರ್. ಮಂಜುನಾಥ್, ಎಂಜಿನಿಯರ್‌ಗಳಾದ ಗಂಗಾಧರ್, ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.