ಶರಾವತಿ ಸಂತ್ರಸ್ತರ ಮಾಹಿತಿ ಸಂಗ್ರಹಕ್ಕೆ ಜಂಟಿ ಸರ್ವೇ, ಶಿವಮೊಗ್ಗದಲ್ಲಿ ಉಸ್ತುವಾರಿ ಮಿನಿಸ್ಟರ್ ಸೂಚನೆ, ಏನಿದು ಸರ್ವೇ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 18 ಡಿಸೆಂಬರ್ 2019

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಇಲಾಖೆಯಿಂದ ಡಿ ನೋಟಿಫೈ ಆದ ಪ್ರದೇಶಗಳ ವಿವರ ಹಾಗೂ ಸಂತ್ರಸ್ತರ ಸಮಗ್ರ ಮಾಹಿತಿ ಸಂಗ್ರಹಣೆಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು.

ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕಾರ್ಯದಲ್ಲಿ ಪ್ರಗತಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅವರು ಪ್ರಗತಿ ಪರಿಶೀಲನೆ ನಡೆಸಿದರು. ಹಲವು ದಶಕಗಳಿಂದ ಬಾಕಿ ಉಳಿದಿರುವ ಈ ಸಮಸ್ಯೆಯನ್ನು ಬಗೆಹರಿಸಲು ಜಂಟಿ ಸರ್ವೆ ನಡೆಸಿ 20 ದಿನಗಳ ಒಳಗಾಗಿ ಒಂದು ಹಂತಕ್ಕೆ ತರುವಂತೆ ಅವರು ತಿಳಿಸಿದರು.

2737 ಎಕರೆ ಇನ್ನೂ ತಾಳೆಯಾಗಿಲ್ಲ

ಮುಳುಗಡೆ ಸಂತ್ರಸ್ತರಿಗೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಂತೆ ಅರಣ್ಯ ಪ್ರದೇಶದಲ್ಲಿ 8285 ಎಕರೆ, ಕಂದಾಯ ಭೂಮಿಯಲ್ಲಿ 1100 ಎಕರೆ, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯೇತರ ಜಿಲ್ಲೆಗಳಲ್ಲಿ 387 ಎಕರೆ  ಸೇರಿದಂತೆ ಒಟ್ಟು 9773 ಎಕರೆ ಜಮೀನು ಮೀಸಲಿರಿಸಲಾಗಿದೆ. ಇದರಲ್ಲಿ 6303 ಎಕರೆ ಡಿನೋಟಿಫೈ ಮಾಡಲಾಗಿದೆ. ಸಂತ್ರಸ್ತರಿಗಾಗಿ ಮೀಸಲಾಗಿರಿಸಿರುವ ಪ್ರದೇಶದಲ್ಲಿ ಇನ್ನೂ 1982 ಎಕರೆ ಡಿ ನೋಟಿಫೈ ಮಾಡಲು ಬಾಕಿ ಇದೆ. ಜಂಟಿ ಸಮೀಕ್ಷೆ ನಂತರ ಫಲಾನುಭವಿವಾರು ಡಿನೋಟಿಫಿಕೇಶನ್ ವಿಸ್ತೀರ್ಣಕ್ಕೆ ಆರ್.ಟಿ.ಸಿಯಲ್ಲಿ 3565 ಎಕರೆ ತಾಳೆಯಾಗಿದೆ. 2737 ಎಕರೆ ಇನ್ನೂ ತಾಳೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿದರು.

ಇದು ಕ್ಲಿಷ್ಟಕರ ಪ್ರಕ್ರಿಯೆಯಾಗಿದ್ದು, ಜಂಟಿ ಸರ್ವೆ ಮಾಡಿ ಪ್ರಕರಣವಾರು ಸಮಸ್ಯೆ ಬಗೆಹರಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದರೆ ಪ್ರಕ್ರಿಯೆ ತ್ವರಿತಗೊಳಿಸಬಹುದಾಗಿದೆ ಎಂದು ಅವರು ಹೇಳಿದರು.

ಸಿಎಂ ಜೊತೆಗೆ ಸಭೆ

ಚಕ್ರಾ, ಸಾವೆಹಕ್ಲು ಯೋಜನೆಯಡಿ ಭೂಮಿ ಕಳೆದುಕೊಂಡಿರುವವರಿಗೆ ಸಮಗ್ರ ಪರಿಹಾರ ಒದಗಿಸಲು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ತೀರ್ಥಹಳ್ಳಿ ತಾಲೂಕಿನಲ್ಲಿ ಹಲವು ಕಂದಾಯ ಜಮೀನನ್ನು ಪ್ರಸ್ತಾವಿತ ಅರಣ್ಯ ಎಂದು ಆರ್.ಟಿ.ಸಿಯಲ್ಲಿ ನಮೂದು ಮಾಡಿರುವ ಹಿನ್ನೆಲೆ, ಅಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ತಕ್ಷಣ ಅದನ್ನು ಸರಿಪಡಿಸಬೇಕು ಎಂದು ಶಾಸಕ ಅರಗ ಜ್ಞಾನೇಂದ್ರ ಅವರು ಒತ್ತಾಯಿಸಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್ ಚನ್ನಬಸಪ್ಪ, ಸಿಸಿಎಫ್ ಶ್ರೀನಿವಾಸುಲು, ಅಪರ ಜಿಲ್ಲಾಧಿಕಾರಿ ಅನುರಾಧ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

District In charge Minister KS Eshwarappa holds meeting in Shimoga over Joint Survey of Sharavathi.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment