ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 7 JUNE 2023
SHIMOGA : ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಜೂ.11ರಂದು ಈ ಗ್ಯಾರಂಟಿ ಯೋಜನೆ ಜಾರಿಯಾಗುತ್ತಿದೆ. ಇದರಿಂದ ಶಿವಮೊಗ್ಗ – ಭದ್ರಾವತಿ ನಡುವೆ ಸಂಚರಿಸುತ್ತಿರುವ ಟ್ರ್ಯಾಕ್ಸ್ಗಳಿಗೆ (Trax) ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ಈಗಾಗಲೆ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮ ಮತ್ತಷ್ಟು ‘ಶಕ್ತಿ’ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
ಶಿವಮೊಗ್ಗ – ಭದ್ರಾವತಿ ಮಾರ್ಗದಲ್ಲಿ ಸರ್ಕಾರಿ ಬಸ್ಸುಗಳು ಬಿಟ್ಟರೆ ಟ್ರ್ಯಾಕ್ಸ್ಗಳೆ (Trax) ಪ್ರಮುಖ ಸಾರ್ವಜನಿಕ ಸಾರಿಗೆ. ಈ ಮಾರ್ಗದಲ್ಲಿ ಸರ್ಕಾರಿ, ಖಾಸಗಿ ಕಚೇರಿಗಳು, ಕಂಪನಿಗಳು, ಗಾರ್ಮೆಂಟ್ಸ್, ಐಟಿ ಕಂಪನಿಗೆ ತೆರಳುವವರು ಟ್ರ್ಯಾಕ್ಸ್ ಬಳಸುತ್ತಾರೆ. ಹಾಗಾಗಿ ಹಚ್ಚಿನ ಸಂಖ್ಯೆಯ ಮಹಿಳೆಯರು ಟ್ರ್ಯಾಕ್ಸ್ನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದರೆ ಬಹುಪಾಲು ಮಹಿಳೆಯರು ಸರ್ಕಾರಿ ಬಸ್ಸುಗಳತ್ತ ಮುಖ ಮಾಡುತ್ತಾರೆ. ಇದರಿಂದ ಟ್ರ್ಯಾಕ್ಸ್ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ.
ಎಷ್ಟು ಟ್ರ್ಯಾಕ್ಸ್ಗಳಿವೆ? ಎಷ್ಟಿದೆ ಚಾರ್ಜ್?
ಶಿವಮೊಗ್ಗದಲ್ಲಿ ಈ ಮೊದಲು ನೂರಾರು ಟ್ರ್ಯಾಕ್ಸ್ಗಳಿದ್ದವು. ಪ್ರಸ್ತುತ 97 ಟ್ರ್ಯಾಕ್ಸ್ಗಳು ಪರ್ಮಿಟ್ ಪಡೆದುಕೊಂಡಿವೆ. ಆದರೆ ಅಂದಾಜು 60 ಟ್ರ್ಯಾಕ್ಸ್ಗಳು ಮಾತ್ರ ರಸ್ತೆಗಿಳಿಯುತ್ತಿವೆ. ಕೊರೋನ ಲಾಕ್ಡೌನ್, ಡಿಸೇಲ್ ಬೆಲೆ ದುಬಾರಿ ಸೇರಿದಂತೆ ನಾನಾ ಕಾರಣಗಳಿಂದ ಹಲವರು ಈ ಉದ್ಯಮ ತೊರೆದಿದ್ದಾರೆ. ಬೇರೆ ಕೆಲಸಗಳನ್ನು ಹುಡುಕಿಕೊಂಡು ಜೀವನ ನಡೆಸುತ್ತಿದ್ದಾರೆ.
ಶಿವಮೊಗ್ಗ – ಭದ್ರಾವತಿ ಮಧ್ಯೆ ಪ್ರತಿ ಟ್ರ್ಯಾಕ್ಸ್ನಲ್ಲಿ ಒಂದು ಟ್ರಿಪ್ಗೆ 10 ಮಂದಿಯನ್ನು ಕರೆದೊಯ್ಯಲಾಗುತ್ತದೆ. ಪ್ರತಿಯೊಬ್ಬರಿಗೆ 25 ರೂ. ಸೀಟ್ ಚಾರ್ಜ್ ಹಾಕಲಾಗುತ್ತದೆ. ಪ್ರಯಾಣಿಕ ಮಲವಗೊಪ್ಪ, ಮಾಚೇನಹಳ್ಳಿ, ನಿದಿಗೆ, ಡೈರಿ ಸೇರಿದಂತೆ ಮಧ್ಯದ ಯಾವುದೆ ನಿಲ್ದಾಣದಲ್ಲಿ ಇಳಿದರೆ ಸೀಟ್ ಚಾರ್ಜ್ ಕಡಿಮೆ ಇರಲಿದೆ.
ಹೊಸ ಸಾವಲು ಎದುರಿಸಬೇಕಿದೆ
ಟ್ರ್ಯಾಕ್ಸ್ ಉದ್ಯಮ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದೆ. ಈ ಮಧ್ಯೆ ಸರ್ಕಾರ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಘೋಷಣೆ ಮಾಡಿರುವುದು ಟ್ರ್ಯಾಕ್ಸ್ ಉದ್ಯಮಕ್ಕೆ ಹೊಸ ಸವಾಲು ತಂದೊಡ್ಡಿದೆ.
ಪ್ರತಿದಿನ ಒಂದು ಟ್ರ್ಯಾಕ್ಸ್ ಶಿವಮೊಗ್ಗ – ಭದ್ರಾವತಿ ನಡುವೆ 2 ಅಥವಾ 3 ಬಾರಿ ಮಾತ್ರ ಸಂಚರಿಸಲಿದೆ. ಇದರಿಂದ ಬರುವ ಆದಾಯ ಯಾವುದಕ್ಕು ಸಾಕಾಗುವುದಿಲ್ಲ ಎಂಬುದು ಟ್ರ್ಯಾಕ್ಸ್ ಮಾಲೀಕರ ಅಳಲು. ಈಗ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಾದರೆ ಗಾರ್ಮೆಂಟ್ಸ್, ವಿವಿಧ ಕಚೇರಿಗೆ ತೆರಳುವ ಮಹಿಳೆಯರು ಸರ್ಕಾರಿ ಬಸ್ಸುಗಳತ್ತ ಮುಖ ಮಾಡಬಹುದು. ಇದರಿಂದ ಟ್ರ್ಯಾಕ್ಸ್ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಈ ಹಿನ್ನೆಲೆ ಸರ್ಕಾರ ಟ್ರ್ಯಾಕ್ಸ್ ಉದ್ಯಮದಲ್ಲಿರುವವರಿಗೂ ಆಸರೆಯಾಗಬೇಕಿದೆ.
ಇದನ್ನೂ ಓದಿ – ಸಿಟಿ ಬಸ್ ಡಿಕ್ಕಿಯಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ವ್ಯಕ್ತಿ 18 ದಿನದ ಬಳಿಕ ಸಾವು, ಮೈ ಜುಮ್ ಅನಿಸುತ್ತೆ ಸಿಸಿಟಿವಿ ದೃಶ್ಯ
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422