ಶಿವಮೊಗ್ಗ : ಮಲೆನಾಡಿನಲ್ಲಿ ನಿಗದಿಯಾಗಿದ್ದ ಮೊದಲ ಕಂಬಳ ರದ್ದಾಗಿದೆ. ಪ್ರಾಣಿ ದಯ ಸಂಘಟನೆ ಕೋರ್ಟ್ ಮೊರೆ ಹೋಗಿರುವ ಹಿನ್ನೆಲೆ ಶಿವಮೊಗ್ಗ ಕಂಬಳ (Kambala) ರದ್ದುಗೊಳಿಸಲಾಗಿದೆ. ಕೋರ್ಟ್ ತೀರ್ಪಿನ ನಂತರ ತೀರ್ಮಾನ ಕೈಗೊಳ್ಳಲು ಕಂಬಳ ಸಮಿತಿ ನಿರ್ಧರಿಸಿದೆ.
ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಏಪ್ರಿಲ್ 19 ಮತ್ತು 20ರಂದು ಕಂಬಳ ನಡೆಸಲು ನಿರ್ಧರಿಸಲಾಗಿತ್ತು.
![]() |
ಮೂಡುಬಿದಿರೆ ಮೀಟಿಂಗ್‌ನಲ್ಲಿ ನಿರ್ಧಾರ
ಕಳೆದ ಬುಧವಾರ ಮೂಡುಬಿದಿರೆಯ ಸೃಷ್ಟಿ ಗಾರ್ಡನ್‌ನಲ್ಲಿ ಕಂಬಳ (Kambala) ಸಮಿತಿ ಸಭೆ ನಡೆಯಿತು. ಇಲ್ಲಿ ಶಿವಮೊಗ್ಗ ಕಂಬಳ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಏ.19ರಂದು ಶಿವಮೊಗ್ಗ ಬದಲು ಬೈಂದೂರಿನಲ್ಲಿ ಕಂಬಳ ನಡೆಸುವ ತೀರ್ಮಾನ ಪ್ರಕಟಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಕಂಬಳ ರದ್ದಾಗಿದ್ದೇಕೆ?
ಇದೇ ಮೊದಲ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಕಂಬಳ ನಡೆಸಲು ನಿರ್ಧರಿಸಲಾಗಿತ್ತು. ಮಾಚೇನಹಳ್ಳಿಯ 16 ಎಕರೆ ವಿಸ್ತೀರ್ಣದಲ್ಲಿ ಕಂಬಳದ ಟ್ರ್ಯಾಕ್ ನಿರ್ಮಿಸಲು ಯೋಜಿಸಲಾಗಿತ್ತು. ಇದಕ್ಕಾಗಿ ಗುದ್ದಲಿ ಪೂಜೆ ನಡೆಸಲಾಗಿತ್ತು. ಸುಮಾರು 100 ಜೋಡಿ ಚಾಂಪಿಯನ್ ಕೋಣಗಳು ಭಾಗವಹಿಸಲಿದ್ದವು. 10 ಲಕ್ಷ ಜನ ಸೇರುವ ನಿರೀಕ್ಷೆ ಇತ್ತು.
ಇದನ್ನೂ ಓದಿ » ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ಯಾವ್ಯಾವ ಹಾಲಿನ ದರ ಎಷ್ಟು ಹೆಚ್ಚಾಗುತ್ತೆ? ಇಲ್ಲಿದೆ ಶಿಮುಲ್ ಪ್ರಕಟಿಸಿದ ಪಟ್ಟಿ
ಶಿವಮೊಗ್ಗ ಕಂಬಳದ (Kambala) ಟ್ರ್ಯಾಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಜಿಲ್ಲಾ ಕಂಬಳ ಸಮಿತಿಗೆ ನ್ಯಾಯಾಲಯದಿಂದ ನೊಟೀಸ್ ಜಾರಿಯಾಗಿತ್ತು. ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಪ್ರಕಟವಾಗುವ ಸದ್ಯತೆ ಇದೆ. ಹಾಗಾಗಿ ಶಿವಮೊಗ್ಗ ಕಂಬಳವನ್ನು ರದ್ದುಗೊಳಿಸಲಾಗಿದೆ.
ಸಮಿತಿ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಹೇಳಿದ್ದೇನು?
ಇನ್ನು, ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಕಂಬಳ ಸಮಿತಿ ಕಾರ್ಯದರ್ಶಿ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ, ಪ್ರಮುಖ ಸಂಗತಿಗಳನ್ನು ತಿಳಿಸಿದರು. ಲೋಕೇಶ್ ಶೆಟ್ಟಿ ತಿಳಿಸಿದ ಪ್ರಮುಖ ಪಾಯಿಂಟ್ ಇಲ್ಲಿವೆ.
ಪೇಟಾ ಕೋರ್ಟ್ ಮೊರೆ ಹೋಗಿದ್ದೇಕೆ? : ಕಂಬಳ, ಕರಾವಳಿಯ ಜಾನಪದ ಕ್ರೀಡೆ. ಬೆಂಗಳೂರಿನಲ್ಲಿ ಕಂಬಳ ನಡೆಸುವುದನ್ನು ವಿರೋಧಿಸಿ ಪ್ರಾಣಿ ದಯಾ ಸಂಘ ಪೇಟಾ ಹೈಕೋರ್ಟ್ ಮೊರೆ ಹೋಗಿದೆ. ನೂರಾರು ಕಿ.ಮೀ ದೂರಕ್ಕೆ ಕೋಣಗಳನ್ನು ಕರೆದೊಯ್ಯುವುದು ಸರಿಯಲ್ಲ ಎಂಬುದು ಪೇಟಾದ ಆಕ್ಷೇಪ. ಆದರೆ ಅಷ್ಟು ದೂರಕ್ಕೆ ಕೋಣಗಳನ್ನು ಕರೆದೊಯ್ಯುವಾಗ ಯಜಮಾನರು, ಕಂಬಳ ಸಮಿತಿ ಮುತುವರ್ಜಿ ವಹಿಸುತ್ತದೆ. ಎ.ಸಿ.ಯಲ್ಲಿಯೇ ಕೋಣಗಳನ್ನು ಇರಿಸಿ ಅವುಗಳನ್ನು ಕಾಪಾಡಲಾಗುತ್ತದೆ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದೇವೆ. ಸದ್ಯ ವಿಚಾರಣೆ ನಡೆಯುತ್ತಿದ್ದು ತೀರ್ಪು ಬಾಕಿ ಇದೆ ಎಂದು ಲೋಕೇಶ್ ಶೆಟ್ಟಿ ತಿಳಿಸಿದರು.
ಶಿವಮೊಗ್ಗ ಕಂಬಳ ರದ್ದು ಮಾಡಿದ್ದೇಕೆ? : ಕಂಬಳ ಹೆಚ್ಚು ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಬೆಂಗಳೂರು, ಶಿವಮೊಗ್ಗದಲ್ಲಿ ಕಂಬಳ ನಡೆಸಲು ಯೋಜಿಸಲಾಗಿತ್ತು. ಆದರೆ ಶಿವಮೊಗ್ಗ ಕಂಬಳಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ನ್ಯಾಯಾಲಯದಿಂದ ಸಮಿತಿಗೆ ನೊಟೀಸ್ ಜಾರಿಯಾಗಿದೆ. ವಿಚಾರಣೆ ನಡೆದು ಏ.15ರಂದು ತೀರ್ಪು ಪ್ರಕಟವಾಗುವ ಸಾದ್ಯತೆ ಇದೆ. ತೀರ್ಪು ಪ್ರಕಟವಾಗುವ ಮೊದಲೆ ಶಿವಮೊಗ್ಗದಲ್ಲಿ ಸಿದ್ಧತೆ ಮಾಡಿಕೊಳ್ಳುವುದು ಸರಿಯಲ್ಲ. ಆದ್ದರಿಂದ ಶಿವಮೊಗ್ಗ ಕಂಬಳ ರದ್ದುಗೊಳಿಸಲಾಗಿದೆ ಎಂದರು.
ಮುಂದೆ ಶಿವಮೊಗ್ಗ ಕಂಬಳ ನಡೆಯುತ್ತಾ? : ಶಿವಮೊಗ್ಗದಲ್ಲಿ ಕಂಬಳ ನಡೆಸುವ ನಿರ್ಧಾರ ಪ್ರಕಟಿಸಿದಾಗ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೈಕೋರ್ಟ್ ತೀರ್ಪಿನ ಆಧಾರದಲ್ಲಿ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ. ಒಂದು ವೇಳೆ ತೀರ್ಪು ನಮ್ಮ ಪರವಾಗಿದ್ದರೆ, ಮುಂದಿನ ಸಾಲಿನಲ್ಲಿ ಮೊದಲ ಕಂಬಳವನ್ನು ಶಿವಮೊಗ್ಗದಲ್ಲಿಯೇ ನಡೆಸುವ ಕುರಿತು ಯೋಜಿಸುತ್ತೇವೆ ಎಂದು ಲೋಕೇಶ್ ಶೆಟ್ಟಿ ತಿಳಿಸಿದರು.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200