ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 MARCH 2023
ನಾಲ್ಕು ದಶಕ ಶಿವಮೊಗ್ಗದ ಜನರಿಗೆ ಮನರಂಜನೆ ನೀಡಿದ್ದ ಲಕ್ಷ್ಮೀ ಟಾಕೀಸ್ (Talkies Closed) ಇತಿಹಾಸದ ಪುಟ ಸೇರುತ್ತಿದೆ. ಚಿತ್ರಮಂದಿರವನ್ನು ತೆರವು ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ಈ ಮೂಲಕ ನಗರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಮತ್ತೊಂದು ಥಿಯೇಟರ್ ಇನ್ನು ನೆನಪಾಗಿ ಉಳಿಯಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಕ್ಷ್ಮೀ ಟಾಕೀಸ್ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳು
1984ರಲ್ಲಿ ಶಿವಮೊಗ್ಗದ ಹೊಸಮನೆ ಬಡಾವಣೆ ಸಮೀಪ ಶ್ರೀ ಲಕ್ಷ್ಮೀ ಟಾಕೀಸ್ ಆರಂಭವಾಯಿತು. ಡಿ.ಲಕ್ಕಪ್ಪ ಅವರು ಇದರ ಮಾಲೀಕರಾಗಿದ್ದರು. ಡಾ. ರಾಜಕುಮಾರ್ ಅವರ ಅಭಿನಯದ ‘ಶ್ರೀನಿವಾಸ ಕಲ್ಯಾಣ’ ಸಿನಿಮಾ ಇಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ.
ಲಕ್ಷ್ಮೀ ಟಾಕೀಸಿಗೆ ಈ ಹೆಸರು ಬರಲು ಎರಡು ಕಾರಣವಿದೆ. ಈ ಕುರಿತ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಲಕ್ಷ್ಮೀ ಟಾಕೀಸ್ ಮಾಲೀಕ, ಡಿ.ಲಕ್ಕಪ್ಪ ಅವರ ಮೊಮ್ಮಗ ಅಶೋಕ್ ಅವರು, ‘ನಮ್ಮ ಮನೆ ದೇವರು ಶ್ರೀ ಹಟ್ಟಿ ಲಕ್ಕಮ್ಮ. ನಮ್ಮ ಅಜ್ಜಿ ಹೆಸರು ಲಕ್ಷ್ಮಮ್ಮ. ಇದೆ ಕಾರಣಕ್ಕೆ ಲಕ್ಷ್ಮೀ ಟಾಕೀಸ್ ಅನ್ನುವ ಹೆಸರು ಬಂತು. ನಮ್ಮ ಮನೆಯಿಂದ ಹಿಡಿದು ಎಲ್ಲದಕ್ಕೂ ನಾವು ಲಕ್ಷ್ಮೀ ಹೆಸರನ್ನೆ ಇಟ್ಟಿದ್ದೇವೆ’ ಎಂದು ತಿಳಿಸಿದರು.
ಶಿವಮೊಗ್ಗದ ಮೊದಲ ಮತ್ತು ಏಕೈಕ ಏರ್ ಕೂಲ್ಡ್ ಆಡಿಟೋರಿಯಂ ಇದಾಗಿತ್ತು. ಗಾಂಧಿ ಕ್ಲಾಸ್, ಬಾಲ್ಕನಿಯಲ್ಲ ಸೇರಿ ಒಟ್ಟು 928 ಸೀಟ್ ಲಕ್ಷ್ಮೀ ಟಾಕೀಸಿನಲ್ಲಿತ್ತು.
ಇಲ್ಲಿ ಸಿನಿಮಾ ನೋಡಲು ಅಕ್ಕಪಕ್ಕದ ಊರುಗಳಿಂದಲು ಜನರು ಬರುತ್ತಿದ್ದರು. ಎತ್ತಿನಗಾಡಿ ಕಟ್ಟಿಕೊಂಡು, ಟ್ರಾಕ್ಟರ್ ಗಳಲ್ಲಿ ಕುಟುಂಬ ಸಹಿತ ಪ್ರೇಕ್ಷಕರು ಆಗಮಿಸುತ್ತಿದ್ದರು. ಹಲವು ಭಾರಿ ಇಡೀ ರಾತ್ರಿ ಕಾದಿದ್ದು, ಬೆಳಗ್ಗೆ ಮೊದಲ ಪ್ರದರ್ಶನದಲ್ಲಿ ತಮ್ಮ ನೆಚ್ಚಿನ ನಟ, ನಟಿಯರ ಸಿನಿಮಾಗಳನ್ನು ಜನರು ವೀಕ್ಷಿಸುತ್ತಿದ್ದರು.
ಈ ಚಿತ್ರಮಂದಿರದ ಪಕ್ಕದಲ್ಲಿರುವ ಸರ್ಕಲ್ ಲಕ್ಷ್ಮೀ ಟಾಕಿಸ್ ಸರ್ಕಲ್ ಎಂದೇ ಜನಪ್ರಿಯ. ವಾಸ್ತವದಲ್ಲಿ ಇದು ಶಾಂತವೇರಿ ಗೋಪಾಲಗೌಡ ಸರ್ಕಲ್. ಆದರೆ ಜನರು ಚಿತ್ರಮಂದಿರದ ಹೆಸರಿನೊಂದಿಗೆ ಸರ್ಕಲ್ ಮತ್ತು ಸುತ್ತಮುತ್ತಲ ರಸ್ತೆಯನ್ನು ಗುರುತಿಸುತ್ತಾರೆ. ಹಾಗಾಗಿ ಲಕ್ಷ್ಮೀ ಟಾಕೀಸ್ ಶಿವಮೊಗ್ಗದ ಪ್ರಮುಖ ಲ್ಯಾಂಡ್ ಮಾರ್ಕ್ ಆಗಿದೆ.
ಡಾ. ವಿಷ್ಣುವರ್ಧನ್ ಮತ್ತು ಸೌಂದರ್ಯ ಅಭಿನಯದ ಆಪ್ತಮಿತ್ರ ಸಿನಿಮಾ ಇಲ್ಲಿ ದಾಖಲೆ ಪ್ರದರ್ಶನ ಕಂಡಿತ್ತು. 300 ದಿನ ಸಿನಿಮಾ ಪ್ರದರ್ಶನವಾಗಿತ್ತು. ರಾಜ್ಯದ ಐದಾರು ಚಿತ್ರಮಂದಿರಗಳಲ್ಲಿ ಮಾತ್ರ ಈ ಸಿನಿಮಾ 300 ದಿನ ಪ್ರದರ್ಶನವಾಗಿತ್ತು. ಅದರಲ್ಲಿ ಲಕ್ಷ್ಮೀ ಟಾಕೀಸ್ ಕೂಡ ಒಂದು.
ಲಕ್ಷ್ಮೀ ಟಾಕೀಸ್ ಗೆ ವಿವಿಧ ಸಂದರ್ಭದಲ್ಲಿ ಹಲವು ನಟ, ನಟಿಯರು ಭೇಟಿ ಕೊಟ್ಟಿದ್ದಿದೆ. ಚಿತ್ರಮಂದಿರದ ಉದ್ಘಾಟನಾ ಸಮಾರಂಭಕ್ಕೆ ನಟರಾದ ಡಾ. ಅಂಬರೀಷ್, ಡಾ. ವಿಷ್ಣುವರ್ಧನ್, ಪ್ರಭಾಕರ್ ಅವರು ಆಗಮಿಸಿದ್ದರು. ಆಪ್ತಮಿತ್ರ ಸಕ್ಸಸ್ ಹಿನ್ನೆಲೆ ನಟ, ನಿರ್ಮಾಪಕ ದ್ವಾರಕೇಶ್, ಡಾ.ವಿಷ್ಣುವರ್ಧನ್, ನಟಿ ಪ್ರೇಮಾ ಬಂದಿದ್ದರು. ನಿನಗಾಗಿ ಸಿನಿಮಾ ನಿರಂತರ 200 ದಿನ ಪ್ರದರ್ಶನ ಕಂಡ ಹಿನ್ನೆಲೆ ನಿರ್ದೇಶಕ ಪ್ರೇಮ್ ಭೇಟಿ ನೀಡಿದ್ದರು. ನಟರಾದ ಸುದೀಪ್, ದರ್ಶನ್ ತೂಗುದೀಪ, ಆದಿತ್ಯ, ಡಾಲಿ ಧನಂಜಯ ಸೇರಿದಂತೆ ಹಲವು ನಟರು ಇಲ್ಲಿಗೆ ಬಂದಿದ್ದರು.
ನಟ ಸುದೀಪ್, ಅನೂಪ್ ಭಂಡಾರಿ, ನಟಿಯರಾದ ನೀತಾ ಅಶೋಕ್, ಜಾಕ್ವೆಲೀನ್ ಫರ್ನಾಂಡೀಸ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಲಕ್ಷ್ಮೀ ಟಾಕೀಸಿನಲ್ಲಿ ಪ್ರದರ್ಶನಗೊಂಡ ಕೊನೆಯ ಸಿನಿಮಾ.
ಇತಿಹಾಸದ ಪುಟ ಸೇರುತ್ತಿದೆ
40 ವರ್ಷ ಶಿವಮೊಗ್ಗದ ಜನರಿಗೆ ನಿರಂತರ ಮನರಂಜನೆ ನೀಡಿದ್ದ ಲಕ್ಮೀ ಟಾಕೀಸ್ (Talkies Closed) ಇನ್ನು ಇತಿಹಾಸದ ಪುಟ ಸೇರುತ್ತಿದೆ. ಚಿತ್ರಮಂದರವನ್ನು ಕೆಡವಲು ಮಾಲೀಕರು ನಿರ್ಧರಿಸಿದ್ದಾರೆ. ಈಗಾಗಲೇ ಅದರ ಕೆಲಸ ಆರಂಭವಾಗಿದೆ. ಪರದೆ, ಸೀಟುಗಳು, ಸ್ಪೀಕರ್, ಪ್ರೊಜೆಕ್ಟರ್ ಎಲ್ಲವನ್ನು ತೆಗೆಯಲಾಗಿದೆ.
ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಲಕ್ಷ್ಮೀ ಟಾಕೀಸ್ ಮಾಲೀಕ ಅಶೋಕ್ ಅವರು, ‘ಹೊಸ ಪೀಳಿಗೆಯ ಪ್ರೇಕ್ಷಕರು ಅಪ್ ಡೇಟ್ ಕೇಳುತ್ತಾರೆ. ಇದೆ ಕಾರಣಕ್ಕೆ ಮಾಲ್ ಗಳಲ್ಲಿರುವ ಮಲ್ಟಿಪ್ಲೆಕ್ಸ್ ಗಳಿಗೆ ಹೋಗಿ ಬರುತ್ತಾರೆ. ನಮ್ಮಲ್ಲಿ ಒಂದೇ ಸಿನಿಮಾ ಪ್ರದರ್ಶನ ಮಾಡಬೇಕು. ಮಾಲ್ ನಲ್ಲಿ ನಾಲ್ಕು ವಿಭಿನ್ನ ಸಿನಿಮಾಗಳನ್ನು ಒಮ್ಮೆಲೆ ಪ್ರದರ್ಶಿಸಬಹುದು. ಜನರಿಗೆ ಯಾವ ಸಿನಿಮಾ, ಯಾವ ಸಮಯ ಹೊಂದಿಕೆಯಾಗುತ್ತದೋ ಅದರಂತೆ ಚಿತ್ರ ನೋಡಲು ಹೋಗುತ್ತಾರೆ. ನಾವು ಕೂಡ ಅಪ್ ಡೇಟ್ ಆಗುತ್ತಿದ್ದೇವೆ’ ಎಂದು ತಿಳಿಸಿದರು.
ಕೋವಿಡ್ ತಂದೊಡ್ಡಿದ ಸಂಕಷ್ಟ
‘ಕೋವಿಡ್ ಬಳಿಕ ಚಿತ್ರಮಂದಿರದವರಿಗೆ ತುಂಬಾ ಸಮಸ್ಯೆಯಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಸಂಬಳ, ನಿರ್ವಹಣೆ ವೆಚ್ಚ ನಿಭಾಯಿಸಲು ಕಷ್ಟವಾಯಿತು. ಲಕ್ಷ್ಮೀ ಟಾಕೀಸ್ (Talkies Closed) ರೀತಿಯ ಹಲವು ಸಿಂಗಲ್ ಸ್ಕ್ರೀನ್ ಅಥವಾ ಸೋಲೋ ಟಾಕೀಸ್ ಗಳು ದೇಶಾದ್ಯಂತ ಬಂದ್ ಆಗಿವೆ. ಸರ್ಕಾರದಿಂದ ಒಂದು ವರ್ಷ ಕಂದಾಯದಲ್ಲಿ ಸ್ವಲ್ಪ ಪ್ರಮಾಣದ ವಿನಾಯಿತಿ ನೀಡಿಲಾಗಿತ್ತು. ಆದರೂ ನಿರ್ವಹಣೆ ಕಷ್ಟವಾಯಿತು. ಪ್ರತಿ ತಿಂಗಳು ನಿರ್ಹವಣೆಗೆ ಒಂದೂವರೆ ಲಕ್ಷ ರೂ. ಬೇಕಿತ್ತು. ಸಿಬ್ಬಂದಿ ಸಂಬಳ, ಕಂದಾಯ, ವಿದ್ಯುತ್ ಬಿಲ್ ಸೇರಿ ಹಲವು ಬಗೆಯ ಖರ್ಚುಗಳಿರುತ್ತವೆ. ಇದನ್ನು ನಿಭಾಯಿಸಲು ಕಷ್ಟವಾದ ಹಿನ್ನೆಲೆ ಅನ್ಯ ಯೋಚನೆ ಮಾಡಬೇಕಾಗಿದೆ. ಒಟಿಟಿ ಪ್ಲಾಟ್ ಫಾರಂಗಳು ಕೂಡ ಚಿತ್ರಮಂದಿರಗಳಿಗೆ ಸವಾಲಾಗಿವೆ’ ಅನ್ನುತ್ತಾರೆ ಮಾಲೀಕ ಅಶೋಕ್.
ಮುಂದೇನು..?
ಈಗಿರುವ ಲಕ್ಷ್ಮೀ ಟಾಕೀಸ್ ಕಟ್ಟಡವನ್ನು ಕೆಡವಲಾಗುತ್ತಿದೆ. ಇದೆ ಜಾಗದಲ್ಲಿ ಮಿನಿ ಮಾಲ್ ನಿರ್ಮಿಸಲು ಉದ್ದೇಶಿಸಲಾಗಿದೆ. ಸಿಟಿ ಸೆಂಟರ್ ಮಾದರಿಯಲ್ಲೇ ಇಲ್ಲಿಯೂ ವಿವಿಧ ಮಳಿಗೆಗಳು ಬರಲಿವೆ. ಕೊನೆಯ ಫ್ಲೋರ್ ನಲ್ಲಿ ಸಿನಿಮಾ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ – ಗೋಪಿ ಸರ್ಕಲ್ ನಲ್ಲಿ ಡಿಜೆ, ರೈನ್ ಡಾನ್ಸ್, ಕುಣಿದು ಕುಪ್ಪಳಿಸಿದ ಶಿವಮೊಗ್ಗದ ಜನ, ಹೇಗಿತ್ತು ಸಡಗರ? ಫೋಟೊ ಸಹಿತ ರಿಪೋರ್ಟ್