ಶಿವಮೊಗ್ಗ ಲೈವ್.ಕಾಂ | SHIMOGA | 18 ಫೆಬ್ರವರಿ 2020
ಪುರಾಣ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಸಾರು (ಅಂಕೆ) ಹಾಕುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕೋಟೆ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಮಂಗಳವಾರ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಅಧಿಕೃತವಾಗಿ ಸಾರು ಹಾಕಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಾತ್ರೆಯ ಅಂಗವಾಗಿ ಧ್ವನಿಮುದ್ರಿತ ಪ್ರಚಾರಕ್ಕಾಗಿ ಐದು ಆಟೋಗಳು ನಗರ ಸಂಚಾರ ಮಾಡಲಿವೆ. ಇವುಗಳಿಗು ಇವತ್ತು ಚಾಲನೆ ನಿಡಲಾಯತು.
ಶಾಮಿಯಾನ, ಪಾನಕ, ಮಜ್ಜಿಗೆ ವ್ಯವಸ್ಥೆ
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಹಾಗೂ ಕಾರ್ಯದರ್ಶಿ ಎನ್. ಮಂಜುನಾಥ್ ಜಾತ್ರಾ ಸಿದ್ಧತೆಗಳ ಬಗ್ಗೆ ವಿವರ ನೀಡಿದರು.
ಇವತ್ತಿಂದ ಹಬ್ಬಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಜಾತ್ರೆಯ ಅಂಗವಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಡೀ ನಗರವನ್ನು ಅಲಂಕರಿಸಲಾಗುವುದು, ವೀರಭದ್ರೇಶ್ವರ ಟಾಕೀಸ್, ಕುವೆಂಪು ರಸ್ತೆ, ನೆಹರೂ ರಸ್ತೆ ಸೇರಿದಂತೆ ಅನೇಕ ಕಡೆ ಸುಮಾರು 250ಕ್ಕೂ ಹೆಚ್ಚು ಮರಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗುವುದು, ವಿಶೇಷವಾಗಿ ಅರಳೀಮರಗಳಿಗೆ ಅಲಂಕಾರ ಮಾಡಲಾಗುವುದು ಎಂದು ಮರಿಯಪ್ಪ ತಿಳಿಸಿದರು.
ಪಾರ್ಕಿಂಗ್ ವ್ಯವಸ್ಥೆ, ದೇವಸ್ಥಾನದಿಂದ ಗಾಂಧಿಬಜಾರ್ ರಸ್ತೆಯೂ ಸೇರಿದಂತೆ ಶಿವಪ್ಪನಾಯಕ ಪ್ರತಿಮೆಯವರೆಗೂ ಭಕ್ತರಿಗೆ ತೊಂದರೆಯಾಗದಂತೆ ಶಾಮಿಯಾನ ಹಾಕಿಸಿ, ನೆರಳು ನೀಡಲಾಗುವುದು. ಸಂಘ-ಸಂಸ್ಥೆಗಳ ನೆರವಿನಿಂದ ಅಲ್ಲಲ್ಲಿ ಕುಡಿಯುವ ನೀರು, ಪಾನಕ, ಮಜ್ಜಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಕುಸ್ತಿಗಾಗಿ ಕೆಮ್ಮಣ್ಣು ತರಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳಿಸಲಾಗುವುದು, ಶಕ್ತಿ ದೇವತೆಯ ಅಲಂಕಾರಕ್ಕಾಗಿ ವಿಶೇಷ ವ್ಯಕ್ತಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪ್ರತಿದಿನ ಸೀರೆ ತೊಡಿಸಲಾಗುವುದು, ದೊಡ್ಡ ವಿಗ್ರಹವಾದ್ದರಿಂದ ಎರಡು ಸೀರೆಗಳನ್ನು ಸೇರಿಸಿ ತೊಡಿಸಲಾಗುತ್ತದೆ. ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಭಕ್ತರು ದೇವಿಯನ್ನು ನೋಡಿ ಕಣ್ತುಂಬಿಕೊಳ್ಳುವಂತೆ ಅಲಂಕಾರ ಮಾಡಲಾಗುವುದು ಎಂದು ಮರಿಯಪ್ಪ ಸ್ಪಷ್ಟಪಡಿಸಿದರು.
ರಾತ್ರಿ 11 ಗಂಟೆವರೆಗೆ ಸಾರಿಗೆ ಬಸ್
ಕಾರ್ಯದರ್ಶಿ ಎನ್. ಮಂಜುನಾಥ್ ಮಾತನಾಡಿ, ಐದು ದಿನಗಳ ಕಾಲ ನಡೆಯುವ ಶಕ್ತಿ ದೇವತೆಯ ಉತ್ಸವ ಯಶಸ್ವಿಯಾಗಲು ಎಲ್ಲಾ ರೀತಿಯಿಂದಲೂ ಕಾರ್ಯಕ್ರಮ ಯೋಜನೆ ರೂಪಿಸಲಾಗಿದೆ. ಸಮಿತಿಗಳನ್ನು ರಚಿಸಲಾಗಿದೆ. ಬ್ರಾಹ್ಮಣ, ಉಪ್ಪಾರ, ಗಂಗಾಮತ, ಹರಿಜನ ಹೀಗೆ ಎಲ್ಲಾ ವರ್ಗದ ಮುಖ್ಯಸ್ಥರಿಗೆ ವಿಶೇಷ ಆಹ್ವಾನ ನೀಡಲಾಗುವುದು. ತವರು ಮನೆ ಗಾಂಧಿಬಜಾರಿನಲ್ಲಿ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆಸಲಾಗಿದೆ ಎಂದರು.
ಪೊಲೀಸ್ ಇಲಾಖೆ ಸಹಕಾರದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು. ದೇವಸ್ಥಾನದ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಬೇವಿನ ಉಡುಗೆ ಇರುತ್ತದೆ. ಬೇವಿನ ಉಡುಗೆ ತೊಟ್ಟವರಿಗೆ ಸ್ನಾನಮಾಡಲು ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು
ರಾತ್ರಿ ೧೧ರ ತನಕ ನಗರ ಸಾರಿಗೆ ಬಸ್ಸನ್ನು ಸಂಚರಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಮೊಬೈಲ್ ಚಿಕಿತ್ಸಾ ಕೇಂದ್ರವಿರುತ್ತದೆ. ಆಂಬುಲೆನ್ಸ್ ಕೂಡಾ ಇರುತ್ತದೆ. ಒಟ್ಟಾರೆ ಹಬ್ಬದ ಯಶಸ್ಸಿಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದ್ದು ಇಡೀ ಮಾರಿಹಬ್ಬ ಒಂದು ಐತಿಹಾಸಿಕ ನೆನಪನ್ನು ಮಾಡಿಕೊಡುವಂತೆ ಏರ್ಪಾಡು ನಡೆದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿ. ರಾಜು, ಡಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ತಿಮ್ಮಯ್ಯ, ಎನ್. ಉಮಾಪತಿ, ಸತ್ಯನಾರಾಯಣ್, ಪ್ರಭಾಕರ ಗೌಡ, ಶ್ರೀಧರ ಮೂರ್ತಿ ನವುಲೆ, ಸುನೀಲ್, ಎನ್. ರವಿಕುಮಾರ್ ಟೆಲೆಕ್ಸ್ ಸೇರಿದಂತೆ ಹಲವರಿದ್ದರು.
ಕೋಣ ಬಲಿ ಇಲ್ಲ
ಯಾವುದೇ ಕಾರಣಕ್ಕೂ ಬಲಿಯನ್ನು ನೀಡಲಾಗುವುದಿಲ್ಲ. ಕೋಣವನ್ನು ಕಡಿಯುತ್ತಾರೆ ಎಂಬ ಸುದ್ದಿ ಸುಳ್ಳು ಅಷ್ಟೇ. ಕಾನೂನಿಗೆ ವಿರುದ್ಧವಾಗಿ ದೇವಸ್ಥಾನ ಸಮಿತಿ ಏನನ್ನೂ ಮಾಡುವುದಿಲ್ಲ. ಇದೊಂದು ಸಾಂಸ್ಕೃತಿಕ ಹಬ್ಬ. ಇದರಲ್ಲಿ ದೇಸೀತನವಿರುತ್ತದೆ. ನಂಬಿಕೆ ಇರುತ್ತದೆ. ಮೂಢನಂಬಿಕೆ ಇರುವುದಿಲ್ಲ ಸಂಪೂರ್ಣ ಜನಪದೀಯವಾಗಿರುತ್ತದೆ ಎಂದು ದೇವಸ್ಥಾನ ಸಮಿತಿ ಸ್ಪಷ್ಟಪಡಿಸಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]