ಶಿವಮೊಗ್ಗ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 14ರಂದು ನಗರದಲ್ಲಿ ಆಯೋಜಿಸಲಾಗಿರುವ ಸ್ವದೇಶಿ ಮಂತ್ರ – 2026 ದೇಶಭಕ್ತಿ ಕಾರ್ಯಕ್ರಮದ ಆಯೋಜನೆ ಕುರಿತು ಪ್ರಮುಖರ ಪೂರ್ವಭಾವಿ ಸಭೆ ನಡೆಸಲಾಯಿತು.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ಸಿದ್ಧತೆ, ವಿವಿಧ ಸಂಘಟನೆಗಳ ನಡುವಿನ ಸಮನ್ವಯ ಹಾಗೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಚರ್ಚೆ ನಡೆಸಲಾಯಿತು. ಯುವಶಕ್ತಿಯಲ್ಲಿ ದೇಶಪ್ರೇಮ ಹಾಗೂ ದೇಶಭಾವನೆ ಮೂಡಿಸುವುದು, ಸ್ವದೇಶಿ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡುವುದು ಹಾಗೂ ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾತ್ರ ಮತ್ತು ಜವಾಬ್ದಾರಿಯ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಹೇಗಿರುತ್ತೆ ಕಾರ್ಯಕ್ರಮ?
ಸ್ವದೇಶಿ ಮಂತ್ರ ಕಾರ್ಯಕ್ರಮವು ಆಗಸ್ಟ್ 14ರಂದು ನಗರದ ಗೋಪಿ ಸರ್ಕಲ್‌ನಲ್ಲಿ ರಾತ್ರಿ 9 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಡಗೀತೆ, ವಿಶೇಷ ದೇಶಭಕ್ತಿ ಗೀತೆಗಳು, ಯೋಧರಿಗೊಂದು ಸನ್ಮಾನ, ದೇಶಭಕ್ತಿ ಗೀತೆಗಳ ವಿಶೇಷ ನೃತ್ಯ, ಸ್ವಾತಂತ್ರ್ಯ ಸಂಭ್ರಮಾಚರಣೆ ಹಾಗೂ ಸಿಹಿ ವಿತರಣೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಮಳೆ ಬಂದರೂ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಸತೀಶ್ ಶೆಟ್ಟಿ, ನಮ್ಮನಾಡು ಪತ್ರಿಕೆ ಸಂಪಾದಕ ಶಿವಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ವೈದ್ಯನಾಥ್, ವಕೀಲ ಶ್ರೀಪಾಲ್, ಮಂಜುನಾಥ್, ಆರ್. ಮೋಹನ್ ಕುಮಾರ್, ಬಳ್ಳೇಕೆರೆ ಸಂತೋಷ್, ವಸಂತ್, ವನ್ನಪ, ಸಮನ್ವಯ ಕಾಶಿ ಸೇರಿ ಹಲವರು ಇದ್ದರು.