ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆ ಯುದ್ಧ ಶುರುವಾಗಿದೆ. ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿದ್ದು, ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಪೋಷಕರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ತಮ್ಮ ಮಕ್ಕಳ ಸುರಕ್ಷತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಮನವಿ ಮಾಡಿದ್ದಾರೆ.
ಶಿವಮೊಗ್ಗದ ಸಂತೆ ಕಡೂರು ಗ್ರಾಮದ ತೇಜಸ್, ಉಕ್ರೇನ್ ದೇಶದಲ್ಲಿ ಎಂಬಿಬಿಎಸ್ ಪದವಿ ಓದುತ್ತಿದ್ದಾರೆ. ಯುದ್ದ ಆರಂಭದ ಬೆನ್ನಿಗೆ ತೇಜಸ್, ಶಿವಮೊಗ್ಗದಲ್ಲಿರುವ ತಂದೆ ಜಗದೀಶ್, ತಾಯಿ ದೇವಕಿ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ತಾವು ಸುರಕ್ಷಿತವಾಗಿ ಇರುವುದಾಗಿ ತಿಳಿಸಿದ್ದಾರೆ.
‘ಬೆಳಗ್ಗೆ ವಿಡಿಯೋ ಕಾಲ್ ಮಾಡಿದ್ದಾನೆ. ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾನೆ. ಮನೆಯಲ್ಲಿ ಇರುವುದಾಗಿ ಹೇಳಿದ್ದಾನೆ’ ಎಂದು ತೇಜಸ್ ತಾಯಿ ದೇವಕಿ ತಿಳಿಸಿದರು.
‘ನಮ್ಮೊಂದಿಗೆ ಮಗ ಸಂಪರ್ಕದಲ್ಲಿದ್ದಾನೆ. ಈಗ ಗೃಹ ಸಚಿವರನ್ನು ಭೇಟಿಯಾಗಿ ವಿಚಾರ ತಿಳಿಸಿದ್ದೇವೆ. ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ’ ಎಂದು ತೇಜಸ್ ತಂದೆ ಜಗದೀಶ್ ತಿಳಿಸಿದ್ದಾರೆ.
ಉಕ್ರೇನ್’ನಲ್ಲಿ ಮಲ್ಲಿಗೇನಹಳ್ಳಿ ಯುವತಿ
ಮಲ್ಲಿಗೇನಹಳ್ಳಿಯ ಗಾನಶ್ರೀ ಎಂಬುವವರು ಉಕ್ರೇನ್ ದೇಶದಲ್ಲಿ ಎಂ.ಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆರು ತಿಂಗಳ ಹಿಂದೆ ಇವರು ಅಲ್ಲಿಗೆ ತೆರಳಿದ್ದರು. ಸುಮ್ಯಾ ಎಂಬ ನಗರದಲ್ಲಿ ಗಾನಶ್ರೀ ಉಳಿದಿದ್ದಾರೆ.
ಯುದ್ದದ ಭೀತಿ ಹಿನ್ನೆಲೆ ಗಾನಶ್ರೀ ಅವರು ತಂದೆ ಗವಿಸಿದ್ದಪ್ಪ, ತಾಯಿ ಕರಿಬಸಮ್ಮ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ತಾವು ಸುರಕ್ಷಿತವಾಗಿ ಇರುವುದಾಗಿ ತಿಳಿಸಿದ್ದಾರೆ.
ಗೃಹ ಸಚಿವರ ಭೇಟಿ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇವತ್ತು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಸಂತೆ ಕಡೂರಿನ ತೇಜಸ್ ಅವರ ಪೋಷಕರು ಗೃಹ ಸಚಿವರನ್ನು ಭೇಟಿಯಾಗಿದ್ದರು. ತಮ್ಮ ಮಗನನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
‘ಉಕ್ರೇನ್ ದೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಮೂವರು ಇದ್ದಾರೆ ಅನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ರಾಯಭಾರ ಕಚೇರಿ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ವಿಮಾನಯಾನ ಸೇವೆ ಪುನಾರಂಭ ಆಗುತ್ತಿದ್ದಂತೆ ಎಲ್ಲರನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುತ್ತೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಮತ್ತಷ್ಟು ಮಂದಿ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ದೇಶಕ್ಕೆ ತೆರಳಿರುವ ಸಾಧ್ಯತೆ ಇದೆ. ಯಾರೆಲ್ಲೆ ಅಲ್ಲಿಗೆ ತೆರಳಿದ್ದಾರೆ ಅನ್ನುವ ಕುರಿತು ರಾಜ್ಯ ಸರ್ಕಾರ ಮಾಹಿತಿ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ | ಗಾಂಧಿ ಬಜಾರ್ ವಹಿವಾಟು ಸ್ಥಗಿತ, ಇದರ ಪರಿಣಾಮವೇನು? ಇಲ್ಲಿದೆ ಟಾಪ್ 5 ಪಾಯಿಂಟ್