ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಹಿಂದೂ ಸಂಘಟನೆಗಳ ಮಹಾಮಂಡಳದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣಪತಿಯ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ನಗರದಲ್ಲಿ ಅದ್ಧೂರಿ ಸಿದ್ಧತೆ ನಡೆದಿದೆ. ಮೆರವಣಿಗೆ ಸಾಗುವ ಹಾದಿ ಉದ್ದಕ್ಕೂ ಅಲಂಕಾರ ಮಾಡಲಾಗಿದೆ. ಇಡೀ ನಗರ ಕೇಸರಿಮಯವಾಗಿದೆ. ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ಲಕ್ಷ ಲಕ್ಷ ಜನರು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹಿಂದೂ ಮಹಾಸಭಾ (Hindu Mahasabha) ಗಣಪತಿಯ ಕುರಿತು ಹಲವು ಪ್ರಮುಖ ಸಂಗತಿಗಳಿವೆ. ಅದರ 10 ಪ್ರಮುಖ ಪಾಯಿಂಟ್ಗಳು ಇಲ್ಲಿವೆ.
ಪಾಯಿಂಟ್ 1 : ಮೊದಲು ಶುರುವಾಗಿದ್ದೇ ಶಿವಮೊಗ್ಗದಲ್ಲಿ
ಬ್ರಿಟೀಷ್ ವಿರೋಧಿ ಹೋರಾಟಕ್ಕೆ ಹಿಂದೂಗಳ ಸಂಘಟನೆಗಾಗಿ ಬಾಲಗಂಗಾಧರ ತಿಲಕ್ ಅವರು ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಕರೆ ನೀಡಿದ್ದರು. ಹಾಗಾಗಿ, ಹಿಂದೂ ಮಹಾಸಭಾದ ವತಿಯಿಂದ ದೇಶಾದ್ಯಂತ ಸಾರ್ವಜನಿಕ ಗಣೇಶೋತ್ಸವ ಮಾಡಲಾಯಿತು. ರಾಜ್ಯದಲ್ಲಿ ಹಿಂದೂ ಮಹಾಸಭಾದ ವತಿಯಿಂದ ಮೊದಲು ಗಣಪತಿ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು ಶಿವಮೊಗ್ಗದಲ್ಲಿ. ಆ ಬಳಿಕ ವಿವಿಧ ಜಿಲ್ಲೆಗಳಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಆರಂಭವಾಯಿತು.
ಪಾಯಿಂಟ್ 2 : ಸಾವರ್ಕರ್ ಸೂಚನೆ ಮೇರೆಗೆ ಪ್ರತಿಷ್ಠಾಪನೆ
ಶಿವಮೊಗ್ಗದಲ್ಲಿ 1938 -39ರ ಹೊತ್ತಿಗೆ ಹಿಂದೂ ಮಹಾಸಭಾ ಆರಂಭವಾಯಿತು. 1944ರಲ್ಲಿ ಶಿವಮೊಗ್ಗದಲ್ಲಿ ಮಹಾಸಭಾದ ರಾಷ್ಟ್ರೀಯ ಅಧಿವೇಶನ ನಡೆಯಿತು. ವಿನಾಯಕ ದಾಮೋದರ ಸಾವರ್ಕರ್ ಅವರು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಹಿಂದೂ ಮಹಾಸಭಾದ ವತಿಯಿಂದ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಸಾರ್ವಕರ್ ಸೂಚನೆ ನೀಡಿದ್ದರು.
ಪಾಯಿಂಟ್ 3 : ಮೊದಲ ಬಾರಿ ಗಣಪತಿ ಪ್ರತಿಷ್ಠಾಪನೆ
ವಿ.ಡಿ.ಸಾರ್ವಕರ್ ಅವರ ಸೂಚನೆ ಮೇರೆಗೆ 1945ರಲ್ಲಿ ಶಿವಮೊಗ್ಗದಲ್ಲಿ ಮೊದಲ ಬಾರಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಆ ಬಳಿಕ ಪ್ರತಿ ವರ್ಷ ಗಣೇಶೋತ್ಸವ ನಡೆಯುತ್ತಿದೆ. ಗಣೇಶ ಚತುರ್ಥಿಯಂದು ಗಣಪತಿಯ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅನಂತ ಚತುರ್ದಶಿಯಂದು ರಾಜಬೀದಿ ಉತ್ಸವ ನಡೆಯಲಿದೆ. ತುಂಗಾ ನದಿಯ ಭೀಮನ ಮಡುವಿನಲ್ಲಿ ವಿಸರ್ಜನೆ ಮಾಡಲಾಗುತ್ತಿದೆ.
ಪಾಯಿಂಟ್ 4 : ಮಂಗಳವಾದ್ಯ ನುಡಿಸದಂತೆ ಅಲಿಖಿತ ನಿಯಮ
ಗಣಪತಿ ಮೂರ್ತಿ ಮೆರವಣಿಗೆ ಸಂದರ್ಭ, ಮಸೀದಿ ಮುಂದೆ ಮಂಗಳವಾದ್ಯ ನುಡಿಸುವಂತಿಲ್ಲ ಎಂಬ ಅಲಿಖಿತ ನಿಯಮವಿತ್ತು. 1947ರಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ ದೊಡ್ಡಪೇಟೆ ಬಳಿ ಮಸೀದಿ ಮುಂದೆ ಪೊಲೀಸರು ಮಂಗಳವಾದ್ಯ ನುಡಿಸದಂತೆ ಸೂಚಿಸಿದರು. ಆದರೆ ಧರ್ಮಸಿಂಗ್ ಎಂಬುವವರು ತುತ್ತೂರಿ ಊದುತ್ತಾ ಮಸೀದಿ ಮುಂದೆ ಸಾಗಿದರು. ಈ ವೇಳೆ ಕಲ್ಲು ತೂರಾಟವಾಯಿತು. ಶಿವಮೂರ್ತಿ ಎಂಬ ಯುವಕನ ಹತ್ಯೆಯಾಗಿತ್ತು.
ಪಾಯಿಂಟ್ 5 : ‘ಮಸೀದಿ ಮುಂದೆ ವಾದ್ಯ ತಡೆಯುವ ಹಕ್ಕು ಮುಸ್ಲಿಮರಿಗಿಲ್ಲʼ
ಮಸೀದಿ ಮುಂದೆ ಮಂಗಳವಾದ್ಯ ನುಡಿಸಬಾರದೇಕೆ ಎಂದು ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮೆರವಣಿಗೆ ಸಂದರ್ಭ ಮಂಗಳವಾದ್ಯ ನುಡಿಸುವುದನ್ನು ತಡೆಯಬಾರದು ಎಂದು 1950ರಲ್ಲಿ ಆದೇಶಿಸಿತು. ಮೈಸೂರು ಶ್ರೇಷ್ಠ ನ್ಯಾಯಾಸ್ಥಾನದ ನ್ಯಾ. ಎನ್. ಬಾಲಕೃಷ್ಣಯ್ಯ ಮತ್ತು ನ್ಯಾ. ಮಲ್ಲಪ್ಪ ಅವರು ತೀರ್ಪು ನೀಡಿದ್ದರು.
ಪಾಯಿಂಟ್ 6 : ಏಳು ವರ್ಷ ಮೆರವಣಿಗೆ ನಡೆಯಲಿಲ್ಲ
1947ರ ಗಲಭೆ ಹೊರತು 50 ವರ್ಷ ಯಾವುದೆ ಅಹಿತಕರ ಘಟನೆ ಸಂಭವಿಸಿರಲಿಲ್ಲ. 51ನೇ ವರ್ಷದ ಗಣಪತಿ ಮೆರವಣಿಗೆ ಸಂದರ್ಭ ಕೆಲವು ಕಿಡಿಗೇಡಿಗಳಿಂದ ಗಲಭೆಯಾಯ್ತು (ಇದಕ್ಕೂ ಮೆರವಣಿಗೆಗು ಯಾವುದೆ ಸಂಬಂಧವಿರಲಿಲ್ಲ. ಮೆರವಣಿಗೆ ಹೊತ್ತಿಗೆ ಗಲಾಟೆಯಾಗಿತ್ತು). ಇದರಿಂದ ಬೇಸರಗೊಂಡ ಹಿಂದೂ ಮಹಾಸಭಾದ ಮುಖಂಡರು 7 ವರ್ಷ ಗಣಪತಿಯ ಸಾರ್ವಜನಿಕ ಮೆರವಣಿಗೆ ಮಾಡಲಿಲ್ಲ.
ಪಾಯಿಂಟ್ 7 : ಸಮಿತಿಯವರಿಗೆ ಸೀರೆ, ಬಳೆ ಕಳುಹಿಸಿದ್ದರು
ಏಳು ವರ್ಷ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಕೋಟೆ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿಯೇ ಮೆರವಣಿಗೆ ಮಾಡಿ ಪಕ್ಕದ ತುಂಗಾ ಹೊಳೆಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಗಣಪತಿ ಮೆರವಣಿಗೆ ನಿಲ್ಲಿಸಿದ್ದಕ್ಕೆ ಯುವಕರು ಆಕ್ರೋಶ ವ್ಯಕ್ತಪಡಿಸಿ, ಹಿಂದೂ ಮಹಾಸಭಾದ ಪ್ರಮುಖರಿಗೆ ಸೀರೆ, ಬಳೆಗಳನ್ನು ಕಳುಹಿಸಿದ್ದರು..! ಆದರೂ ಪರಿಸ್ಥಿತಿ ತಣ್ಣಗಾಗುವರೆಗೆ ಕಾದ ಸಮಿತಿ, 2003ರಲ್ಲಿ ಸಾರ್ವಜನಿಕ ಮೆರವಣಿಗೆ ಆರಂಭಿಸಿತು. ಇದೆ ವೇಳೆ ಶಿವಮೊಗ್ಗದಲ್ಲಿ ಓಂ ಗಣಪತಿ ಆರಂಭವಾಯಿತು.
ಪಾಯಿಂಟ್ 8 : ಮೆರವಣಿಗೆ ಹೊತ್ತಿಗೆ ನೊಟೀಸ್ ಜಾರಿ
2003ರಲ್ಲಿ ಸಾರ್ವಜನಿಕ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿತು. ಇದನ್ನು ವಿರೋಧಿಸಿ ಮಹಾಸಭಾದ ವತಿಯಿಂದ ಮೆರವಣಿಗೆಗೆ ಮುಂದಾದಾಗ, ನೊಟೀಸ್ ಜಾರಿ ಮಾಡಲಾಯಿತು. ಮೆರವಣಿಗೆಗೆ ಅನುಮತಿ ಕೊಡಲೇಬೇಕು ಎಂದು ಸಮಿತಿಯವರು ಪಟ್ಟು ಹಿಡಿದರು. ವಿಸರ್ಜನೆಯನ್ನು 13 ದಿನ ಮುಂದಕ್ಕೆ ಹಾಕಲಾಯಿತು. ಆಗ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಮಧ್ಯ ಪ್ರವೇಶಿಸಿ, ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದರು. ‘ಗಣಪತಿ ಕೂರಿಸಿದ ಮೇಲೆ ಮೆರವಣಿಗೆ ನಡೆಯಲೆಬೇಕು. ವಿಸರ್ಜನೆ ಆಗಲೇಬೇಕು. ಮೆರವಣಿಗೆಗೆ ಅನುಮತಿ ಕೊಡಿ’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಆ ಬಳಿಕ ಮೆರವಣಿಗೆ ನಡೆಯಿತು.
ಪಾಯಿಂಟ್ 9 : ಗಣಪತಿ ಅರೆಸ್ಟ್..! ಠಾಣೆಯಲ್ಲೇ ಪೂಜೆ..!
ಒಮ್ಮೆ ಗಣಪತಿ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೋಟೆ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಹಿಂದೂ ಮಹಾಸಭಾದ ಮುಖಂಡರು ಠಾಣೆಗೆ ಹೋಗಿ ಪೂಜೆ ಮಾಡಿದ್ದರು. ಪೊಲೀಸರು ಕೂಡ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು..!
ಪಾಯಿಂಟ್ 10 : ಮತ್ತೆ ನಿಷೇಧವಾಗಿತ್ತು ಮೆರವಣಿಗೆ
ಕೋವಿಡ್ ಸಂದರ್ಭ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಿಷೇಧಿಸಲಾಗಿತ್ತು. 2022ರಲ್ಲಿ ಮೆರವಣಿಗೆ ಪುನಾರಂಭವಾಯಿತು. ರಾಜಬೀದಿ ಉತ್ಸವಕ್ಕೆ ಅದ್ಧೂರಿ ಅಲಂಕಾರ ಮಾಡಲಾಗಿತ್ತು. ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಈ ಬಾರಿಯು ಲಕ್ಷ ಲಕ್ಷ ಜನರು ಮೆರವಣಿಗೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ – ಶಿವಮೊಗ್ಗ ನಗರ ಸಂಪೂರ್ಣ ಕೇಸರಿಮಯ, ಗಾಂಧಿ ಬಜಾರ್ ಮಹಾದ್ವಾರದ ಮೇಲೆ ಉಗ್ರ ನರಸಿಂಹ, ಹೇಗಿದೆ ಅಲಂಕಾರ?