SHIVAMOGGA LIVE NEWS, 31 JANUARY 2024
ಶಿವಮೊಗ್ಗ : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನವನ್ನು (exhibition) ಶಿವಮೊಗ್ಗ ನಗರದಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರು, ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಲು ಈ ಪ್ರಯತ್ನ ಮಾಡಲಾಗಿದೆ.
ಶಿವಮೊಗ್ಗ ಲೈವ್
ಕೋಟೆ ಪೊಲೀಸ್ ಠಾಣೆ ಸಮೀಪದಲ್ಲಿರುವ ಪೊಲೀಸ್ ಗೆಸ್ಟ್ ಹೌಸ್ ಆವರಣದಲ್ಲಿ ಜಿಲ್ಲಾ ಪೊಲೀಸ್, ಶಿವಮೊಗ್ಗ ನಗರ ಸಂಚಾರ ಪೊಲೀಸ್ ವತಿಯಿಂದ ರಸ್ತೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನ ಆಯೋಜಿಸಲಾಗಿದೆ. ಜ.31 ಮತ್ತು ಫೆ.1ರಂದು ಪ್ರದರ್ಶನ ಇರಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಪ್ರದರ್ಶನಕ್ಕೆ ಎಸ್‌ಪಿ ಚಾಲನೆ
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಇವತ್ತು ರಸ್ತೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನಕ್ಕೆ ಚಾಲನೆ ನೀಡಿದರು.
ನಮ್ಮ ಸುರಕ್ಷತೆಗಾಗಿ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಈಚೆಗೆ ಭದ್ರಾವತಿ ರಸ್ತೆಯಲ್ಲಿ ಅಪಘಾತ ಸಂಭವಿಸಿ ಮೆಡಿಕಲ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ಬದುಕುಳಿದರು. ಸೀಟ್ ಬೆಲ್ಟ್ ಹಾಕದೆ ಇದ್ದಿದ್ದರಿಂದ ಆಕೆ ಪ್ರಾಣ ಕಳೆದುಕೊಂಡಿದ್ದಾರೆ. ಬೈಕ್ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದೆ ಇದ್ದರೆ ಸಾವನ್ನಪ್ಪುತ್ತಾರೆ. ಬೈಕ್‌ನಿಂದ ಬಿದ್ದಾಗ ತಲೆಗೆ ಹೆಚ್ಚು ಗಾಯ ಆಗಲಿದೆ.
ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ
ಪ್ರದರ್ಶನದಲ್ಲಿ ಏನೇನೆಲ್ಲ ಇದೆ?
ಜಾಗೃತಿ ಪ್ರದರ್ಶನದ ಪ್ರವೇಶ ದ್ವಾರದಲ್ಲಿ ಜೀಬ್ರಾ ಕ್ರಾಸಿಂಗ್, ಯಾವ ಸಂದರ್ಭದಲ್ಲಿ ವಾಹನಗಳ ಓವರ್ ಟೇಕ್ ಮಾಡಬೇಕು, ಯಾವಾಗ ಓವರ್ ಟೇಕ್ ಮಾಡಬಾರದು ಎಂದು ರಸ್ತೆ ಮೇಲೆ ವಿವರಣೆ ಹಾಕಲಾಗಿದೆ. ಅಕ್ಕಪಕ್ಕದ ಮರಗಳ ಮೇಲೆ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ.
ಅಪಘಾತದ ಸನ್ನಿವೇಶ ಸೃಷ್ಟಿ
ಅತಿ ವೇಗವೆ ಅಪಘಾತಕ್ಕೆ ಕಾರಣ ಎಂದು ಜನರಿಗೆ ಮನದಟ್ಟು ಮಾಡಲು ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದಂತಹ ಸನ್ನಿವೇಶ ಸ್ಥಾಪಿಸಲಾಗಿದೆ.
ಬೈಕುಗಳ ಮನದಾಳದ ಮಾತು
ಸಂಚಾರ ನಿಯಮ ಪಾಲಿಸುವಂತೆ ಬೈಕುಗಳೇ ತಮ್ಮ ಮನದಾಳದ ಮಾತನ್ನಾಡುವ ಸನ್ನಿವೇಶ ನಿರ್ಮಿಸಲಾಗಿದೆ. ಬೈಕ್ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು, ಮದ್ಯ ಸೇವಿಸಿ ವಾಹನ ಚಲಾಯಿಸಬಾರದು ಎಂಬುದನ್ನು ಬೈಕುಗಳೇ ಸವಾರರಿಗೆ ತಿಳಿಸುವಂತೆ ಫ್ಲೇಕರ್ ಅಳವಡಿಸಲಾಗಿದೆ.
ಉಪಕರಣಗಳ ಪ್ರದರ್ಶನ
ಟ್ರಾಫಿಕ್ ಪೊಲೀಸರು ಸಂಚಾರ ನಿಯಂತ್ರಣದ ಸಂದರ್ಭ ಉಪಯೋಗಿಸುವ ಉಪಕರಣಗಳನ್ನು ಪ್ರದರ್ಶಿಸಲಾಗಿದೆ. ಬ್ಯಾರಿಕೇಡ್, ರಾಡಾರ್ ಸ್ಪೀಡ್ ಗನ್, ಬಾಡಿ ಕ್ಯಾಮರಾ, ಎಲ್‌ಇಡಿ ಸೋಲಾರ್ ಬ್ಲಿಂಕರ್ ಲೈಟ್ಸ್, ಟ್ರಾಫಿಕ್ ಬೋಲಾರ್ಡ್, ಮೀಡಿಯನ್ ಮೇಕರ್ ಸೇರಿದಂತೆ ಹಲವು ಉಪಕರಣಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ.
ಸ್ಮಾರ್ಟ್ ಕ್ಯಾಮರಾ ವಿಡಿಯೋಗಳು
ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ನಗರದ ವಿವಿದೆಡೆ ಸ್ಮಾರ್ಟ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಸೆರೆಯಾದ ವಿವಿಧ ಸಂಚಾರ ನಿಯಮ ಉಲ್ಲಂಘನೆಯ ವಿಡಿಯೋ, ಫೋಟೊಗಳನ್ನು ಪ್ರದರ್ಶಿಸಲಾಗಿದೆ.
ಅಪಘಾತದ ತೀವ್ರತೆ ಮನದಟ್ಟು
ಅಪಘಾತದ ತೀವ್ರತೆಯನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಲು ಅಪಘಾತಕ್ಕೀಡಾದ ವಾಹನಗಳನ್ನು ಪ್ರದರ್ಶಿಸಲಾಗಿದೆ.
ಇನ್ನು, ಆರ್‌ಟಿಒದಿಂದ ಸುರಕ್ಷತಾ ಸಾಧನಗಳ ಪರಿಚಯ, ಇನ್ಷುರೆನ್ಸ್ ಕಂಪನಿಯ ಸ್ಟಾಲ್‌ಗಳು ಇಲ್ಲಿವೆ. ಸಂಚಾರ ನಿಯಮಗಳು ಮತ್ತು ಅವುಗಳನ್ನು ಪಾಲಿಸುವ ಅಗತ್ಯತೆ ಕುರಿತು ಜಾಗೃತಿ ಮೂಡಿಸುವ ಸೆಲ್ಫಿ ಪಾಯಿಂಟ್‌ಗಳು ಇಲ್ಲಿವೆ.
ಮೊದಲ ದಿನವೇ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಜೀವ ರಕ್ಷಕ ಪ್ರಶಸ್ತಿ
ಅಪಘಾತಗಳ ಸಂದರ್ಭ ತುರ್ತಾಗಿ ನೆರವು ನೀಡಿದ ಐವರನ್ನು ಗುರುತಿಸಿ ಜೀವ ರಕ್ಷಕ ಪ್ರಶಸ್ತಿ ನೀಡಲಾಯಿತು. ಶ್ರೀಕಾಂತ್, ಚಂದನ್, ಆಶೀಶ್, ಸಂತೋಷ್, ಪ್ರವೀಣ್ ಕುಮಾರ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಇನ್ನು, ರಸ್ತೆ ಸುರಕ್ಷತಾ ಸಪ್ತಾಹದ ಸಂದರ್ಭ ವಿವಿಧ ಶಾಲೆಗಳಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರ್ಯಪ್ಪ, ಡಿವೈಎಸ್‌ಪಿಗಳಾದ ಬಾಬು ಆಂಜನಪ್ಪ, ಸಂಜೀವ್ ಕುಮಾರ್, ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್, ಪಿಎಸ್‌ಐಗಳಾದ ಭಾರತಿ, ತಿರುಮಲೇಶ್, ನವೀನ್ ಕುಮಾರ್ ಮಠಪತಿ, ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ » ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ ನೀಡಿದ ಶಿಮುಲ್
Exhibition
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200