ಶಿವಮೊಗ್ಗ: ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಡುರಾತ್ರಿ ರಸ್ತೆ ಬದಿಯ ಎರಡು ಮರಗಳಿಗೆ (Tree) ಗರಗಸ ಹಾಕಿದ್ದಾರೆ. ವಿಚಾರ ತಿಳಿದು ಪರಿಸರವಾದಿಗಳು ಸ್ಥಳದಲ್ಲಿ ಧರಣಿ ನಡೆಸಿದರು. ಇನ್ನೊಂದೆಡೆ ಅರಣ್ಯ ಸಚಿವ ಈಶ್ವರ ಖಂಡ್ರೆ ಕೂಡ ಘಟನೆಗೆ ಬೇಸರ ವ್ಯಕ್ತಪಡಿಸಿದ್ದು, ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದರು. ಇದರ ಬೆನ್ನಿಗೆ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಶಿವಮೊಗ್ಗ ಬಿ.ಹೆಚ್.ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್ ಎದುರುಗಿರುವ ಹೊಟೇಲ್ ಮುಂಭಾಗ ಫುಟ್‌ಪಾತ್ ಮೇಲಿದ್ದ ಮರಗಳಿಗೆ ಕೊಡಲಿ ಹಾಕಲಾಗಿದೆ. ಒಂದು ಮರ ಧರೆಗುರುಳಿತ್ತು. ಮತ್ತೊಂದು ಮರ ಯಾವುದೇ ಸಂದರ್ಭ ತುಂಡಾಗಿ ಬೀಳುವುದರಲ್ಲಿತ್ತು.
ಪರಿಸರವಾದಿಗಳು ಫುಲ್ ಗರಂ
ಮರ ಕಡಿದ ವಿಚಾರ ತಿಳಿದು ಶಿವಮೊಗ್ಗದ ಪರಿಸರವಾದಿಗಳು ಆಕ್ರೋಶಗೊಂಡರು. ಸ್ಥಳದಲ್ಲೇ ಧರಣಿ ನಡೆಸಿದರು. ಶೇಖರ್ ಗೌಳೇರ್, ಬಾಲಕೃಷ್ಣ ನಾಯ್ಡು, ತ್ಯಾಗರಾಜ ಮಿತ್ಯಂತ, ಬಾಲಕೃಷ್ಣ ಹೆಗಡೆ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದರು. ಮರ ಕಡಿದವರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಕಮಿಷನರ್ ಮಾಯಣ್ಣಗೌಡ, ಪರಿಸರವಾದಿಗಳ ಜೊತೆಗೆ ಚರ್ಚೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಇನ್ನು, ಮರಕ್ಕೆ ಕೊಡಲಿ ಹಾಕಿದ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ತಡರಾತ್ರಿ 3 ಗಂಟೆ ಹೊತ್ತಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಎರಡು ಮರಗಳಿಗೆ ಗರಗಸದಿಂದ ಕೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ಮರ ಉರುಳಿ ಬಿದ್ದಿದೆ. ಮತ್ತೊಂದು ಮರ ಮುಕ್ಕಾಲು ಪಾಲು ಕತ್ತರಿಸಿದ್ದ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಅರಣ್ಯ ಸಚಿವರಿಗೆ ಮಾಹಿತಿ ರವಾನೆ
ಮರ ಕಡಿದ ವಿಚಾರವನ್ನು ಪರಿಸರವಾದಿಗಳು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ತಿಳಿಸಿದ್ದರು. ಕೂಡಲೆ ಸ್ಪಂದಿಸಿದ ಸಚಿವರು, ಸರ್ಕಾರಿ ಜಾಗದಲ್ಲಿ ಮತ್ತು ರಸ್ತೆ ಬದಿಯಲ್ಲಿ ಬೆಳೆದ ಹಲವು ಮರಗಳನ್ನು ಅನುಮತಿ ಇಲ್ಲದೆ ಕಡಿದವರ ವಿರುದ್ಧ ನಿಯಮಾನುಸಾರ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದರು.
ಸಂಜೆ ವೇಳೆಗೆ ಮತ್ತೊಂದು ಮರ ಧರೆಗೆ
ಗರಗಸದಿಂದ ಮುಕ್ಕಾಲು ಭಾಗ ಕಡಿದಿದ್ದರಿಂದ ಹಾನಿಯಾಗಿದ್ದ ಮತ್ತೊಂದು ಮರವು ಈಗ ಧರೆಗುರುಳಿದೆ. ಸಂಜೆ ವೇಳೆಗೆ ಈ ಮರ ಧರೆಗುರುಳಿದೆ.
ಇದನ್ನೂ ಓದಿ » ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಗೆ ಉರುಳಿದ ಬೃಹತ್ ಆಲದ ಮರ, ವಾಹನ ಸಂಚಾರಕ್ಕೆ ಅಡಚಣೆ
ಎಫ್‌ಐಆರ್ ದಾಖಲು, ಒಬ್ಬ ಅರೆಸ್ಟ್
ಶಂಕರ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕಾಡು ಬಾದಾಮಿ ಜಾತಿಯ ಮರಗಳನ್ನು ಕಡಿಯಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ದೀಪಕ್ ಎಂಬಾತನನ್ನು ಬಂಧಿಸಲಾಗಿದೆ. ಬೆಂಗಳೂರಿನ ಶ್ರೀಧರ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200