ಶಿವಮೊಗ್ಗ ಲೈವೆ.ಕಾಂ | ಹೊಸನಗರ
ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಗಾಯಾಳುವಿನ ಮೈಮೇಲೆ ವ್ಯಕ್ತಿಯೊಬ್ಬ ಹತ್ತಿ ನಿಂತು ವಿಕೃತಿ ಮೆರೆದಿದ್ದಾನೆ. ನಡು ರಸ್ತೆಯಲ್ಲಿ ನಡೆದ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಗರ್ತಿಕೆರೆ ಗ್ರಾಮದ ರಾಘವೇಂದ್ರ ಎಂಬಾತ ಕುಡಿದ ಮತ್ತಿನಲ್ಲಿ ಮಂಜುನಾಥ್ ಎಂಬುವವರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಕೃತ್ಯದ ವೇಳೆ ಆರೋಪಿಯು ಹಲ್ಲೆ ನಡೆಸಿ ರಾಘವೇಂದ್ರ ಅವರ ಮೈಮೇಲೆ ಹತ್ತಿ ನಿಂತು ಅಟ್ಟಹಾಸ ಮೆರೆದಿದ್ದಾನೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಸುಮಾರು 1:26 ನಿಮಿಷದ ವಿಡಿಯೋ ವೈರಲ್ ಆಗಿದೆ. ಘಟನೆ ನಡೆದ ಸಂದರ್ಭ ದಾರಿಯಲ್ಲಿ ಹೋಗುವವರು ವಿಡಿಯೋ ಚಿತ್ರೀಕರಿಸಿದ್ದು, ಜಗಳ ಬಿಡಿಸಲು ಯತ್ನಿಸಿದ್ದಾರೆ. ಆರಂಭದಲ್ಲಿ ನಡು ರಸ್ತೆಯಲ್ಲಿ ಟೀ ಶರ್ಟ್ ಮತ್ತು ಶಾರ್ಟ್ಸ್ ಧರಿಸಿರುವ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ಹಿಡಿದು ವ್ಯಕ್ತಿಯೊಬ್ಬನ ಮೈಮೇಲೆ ನಿಂತಿರುವ ದೃಶ್ಯವಿದೆ. ಕೆಳಗೆ ಬಿದ್ದಿರುವ ವ್ಯಕ್ತಿಯ ಮೊಣಕಾಲು ಭಾಗದಲ್ಲಿ ಜೀನ್ಸ್ ಪ್ಯಾಂಟ್ ರಕ್ತಸಿಕ್ತವಾಗಿದೆ. ರಾಡ್‌ನಿಂದ ಪುನಃ ಹಲ್ಲೆ ನಡೆಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ರಾಡ್ ಹಿಡಿದುಕೊಂಡಿರುವ ವ್ಯಕ್ತಿಯು ‘ಕೇಸ್ ಆದರೆ ಜೈಲಿಗೆ ಹೋಗುತ್ತೇನೆ’ ಎಂದು ಹೇಳುವುದು ಕೂಡ ವಿಡಿಯೋದಲ್ಲಿದೆ.
ಕೆಲವೇ ಸೆಕೆಂಡ್‌ಗೆ ರಸ್ತೆಯಲ್ಲಿ ವೇಗವಾಗಿ ಕಾರು ಹಾದು ಹೋಗುತ್ತದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಕೆಳಗೆ ಬಿದ್ದಿದ್ದ ವ್ಯಕ್ತಿ ಕಾರಿನಡಿ ಸಿಲುಕುವುದು ತಪ್ಪಿದೆ. ಇದಾದ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯು ಗಾಯಾಳುವಿನ ಕಾಲನ್ನು ಹಿಡಿದುಕೊಂಡು ರಸ್ತೆ ಬದಿಗೆ ಎಳೆದೊಯ್ದು ವಿಕೃತಿ ಮೆರೆದಿರುವುದು ವಿಡಿಯೋದಲ್ಲಿದೆ.
ಗಾಯಾಳು ಆಸ್ಪತ್ರೆಗೆ ದಾಖಲು
ಗಂಭೀರ ಗಾಯಗೊಂಡಿರುವ ಮಂಜುನಾಥ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ರಾಘವೇಂದ್ರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.