ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರ್ತಿದೆ ಟ್ರಯಲ್ ವಿಮಾನ, ಏನಿದು? ಯಾವಾಗ?

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಸೌಲಭ್ಯದ ಪರೀಕ್ಷೆಗಾಗಿ ಇನ್ನೊಂದು ವಾರದಲ್ಲಿ ಪ್ರಾಯೋಗಿಕ ವಿಮಾನ (ಟ್ರಯಲ್ ಫ್ಲೈಟ್) ಹಾರಾಟ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. (ಈ ಸುದ್ದಿಯನ್ನು ಇನ್ನು 53 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೈಟ್ ಲ್ಯಾಂಡಿಂಗ್‌ಗೆ ಅಗತ್ಯವಿದ್ದ ಕಾಮಗಾರಿ ಮುಗಿದಿದೆ. ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆಂಟೆನಾ ಅಳವಡಿಸಿದ್ದಾರೆ. ಇನ್ನೊಂದು ವಾರದಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯ ಹಾರಾಟದ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದರು.

MP-BY-Raghavendra-Speaks-about-trail-flight-to-Shivamogga-Airport

ವಿಜಿಎಫ್ ಅನುದಾನಕ್ಕೆ ಮನವಿ

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮೂರು ವರ್ಷಗಳ ಅವಧಿ ಮುಗಿದಿದೆ. ಈ ಅವಧಿಯಲ್ಲಿ ಕಲಬುರಗಿ ಹಾಗೂ ಬೀದರ್ ವಿಮಾನ ನಿಲ್ದಾಣಗಳಿಗೆ ನೀಡಿದ ಮಾದರಿಯಲ್ಲೇ ಶಿವಮೊಗ್ಗಕ್ಕೂ ರಾಜ್ಯ ಸರ್ಕಾರವೇ ವಿಜಿಎಫ್ (VGF) ಅನುದಾನ ನೀಡಬೇಕು. ಶಿವಮೊಗ್ಗ–ಬೆಂಗಳೂರು ಹಾಗೂ ಶಿವಮೊಗ್ಗ–ಹೈದರಾಬಾದ್ ಮಾರ್ಗಗಳಿಗೆ ಒಂದು ವರ್ಷದ ಮಟ್ಟಿಗೆ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯು ವಿಜಿಎಫ್ ಅನುದಾನ ದೊರೆತರೆ ಶಿವಮೊಗ್ಗದಿಂದ 4 ಮಾರ್ಗಗಳಲ್ಲಿ ವಿಮಾನ ಸೇವೆ ಮುಂದುವರಿಸಲು ಸಿದ್ಧವಿರುವುದಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.