ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JUNE 2021
ಸಂಪೂರ್ಣ ಅನ್ ಲಾಕ್‍ನ ಮೊದಲ ದಿನ ಶಿವಮೊಗ್ಗದಲ್ಲಿ ವ್ಯಾಪಾರ, ವಹಿವಾಟು ಬಿರುಸಾಗಿತ್ತು. ಜನ ಮತ್ತು ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿತ್ತು. ಸಂಜೆಯಾಗುತ್ತಿದ್ದಂತೆ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಕರೋನ ಪ್ರಕರಣ ಕಡಿಮೆ ಇರುವ ಜಿಲ್ಲೆಗಳ ಪಟ್ಟಿಗೆ ಶಿವಮೊಗ್ಗ ಜಿಲ್ಲೆಯನ್ನು ಸೇರಿಸಲಾಗಿದೆ. ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ವ್ಯಾಪಾರ, ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲೆಲ್ಲಿ ಹೇಗಿತ್ತು ಅನ್ ಲಾಕ್ ಸ್ಥಿತಿ?
ಶಿವಮೊಗ್ಗ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಗಾಂಧಿ ಬಜಾರ್, ನೆಹರೂ ರೋಡ್, ಬಿ.ಹೆಚ್.ರಸ್ತೆ, ದುರ್ಗಿಗುಡಿ, ಎಲ್‍ಎಲ್‍ಆರ್ ರಸ್ತೆ, ವಿನೋಬನಗರದಲ್ಲಿ ಎಲ್ಲಾ ಅಂಗಡಿಗಳು, ಕಚೇರಿಗಳು ಕಾರ್ಯನಿರ್ವಹಿಸಿದವು. ಲಾಕ್ ಡೌನ್ ಮೊದಲ ಸ್ಥಿತಿಯೇ ಕಂಡು ಬಂತು.
ಮಾಸ್ಕ್ ಇತ್ತು, ಅಂತರ ಮರೆತರು
ವ್ಯಾಪಾರ, ವಹಿವಾಟು ಮತ್ತು ಕೆಲಸ ಕಾರ್ಯಗಳಿಗೆ ಬಂದಿದ್ದ ಬಹುತೇಕರು ಮಾಸ್ಕ್ ಧರಿಸಿದರು. ಎಲ್ಲೋ ಕೆಲವರು ಮಾಸ್ಕ್ ಮರೆತು ರಸ್ತೆಗಿಳಿದವರಿಗೆ ಪೊಲೀಸರು ಚುರುಕು ಮುಟ್ಟಿಸಿದರು. ಇನ್ನು ಬಹುತೇಕರು ಸಾಮಾಜಿಕ ಅಂತರದ ಕುರಿತು ಗಮನ ಹರಿಸಲಿಲ್ಲ. ಗಾಂಧಿ ಬಜಾರ್‍ನಲ್ಲಿ ಈ ಹಿಂದೆ ಇದ್ದಂತೆಯೇ ಜನ ಜಂಗುಳಿ ಇತ್ತು. ಬಿ.ಹೆಚ್.ರಸ್ತೆ, ದುರ್ಗಿಗುಡಿ ಸೇರಿದಂತೆ ವಿವಿಧೆಡೆ ವ್ಯಾಪಾರಕ್ಕಾಗಿ ಬಂದವರು ಸಾಮಾಜಿಕ ಅಂತರವನ್ನು ಮರೆತಿದ್ದರು.
ಐದು ಗಂಟೆಗೆ ಎಲ್ಲವು ಬಂದ್
ಲಾಕ್ ಡೌನ್‍ನಿಂದ ರಿಲೀಫ್ ಸಿಕ್ಕರೂ ಸಂಜೆ 5 ಗಂಟೆವರೆಗೆ ವ್ಯಾಪಾರ, ವಹಿವಾಟಿಗೆ ಅವಕಾಶವಿತ್ತು. ಹಾಗಾಗಿ ಸಂಜೆ 5 ಗಂಟೆಯಾಗುತ್ತಿದ್ದಂತೆ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ವಾಹಿವಾಟು ನಿಲ್ಲಿಸಿದರು. ಕೆಲವು ಕಡೆ ಪೊಲೀಸರು ಎಚ್ಚರಿಕೆ ನೀಡಿ ಅಂಗಡಿಗಳನ್ನು ಮುಚ್ಚಿಸಿದರು.
ಅನಗತ್ಯ ರಸ್ತೆಗಿಳಿದವರ ವಾಹನ ಸೀಜ್
ಲಾಕ್ ಡೌನ್ ರಿಲೀಫ್ ಅವಧಿ ಮುಗಿದ ಬಳಿಕ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದ ಪೊಲೀಸರು, ಕೆಲವು ವಾಹನಗಳನ್ನು ಸೀಜ್ ಮಾಡಿದರು. ಜೈಲ್ ಸರ್ಕಲ್‍ನಲ್ಲಿ ವಾಹನಗಳ ತಪಾಸಣೆ ನಡೆಸಲಾಯಿತು. ಕೆಲವು ವಾಹನಗಳನ್ನು ವಶಕ್ಕೆ ಪಡೆದರು.
ಲಾಕ್ ಡೌನ್ ರಿಲೀಫ್‍ನ ಮೊದಲ ದಿನ ಶಿವಮೊಗ್ಗ ಸಿಟಿ ಬಹುತೇಕ ಸಹಜ ಸ್ಥಿತಿಗೆ ಮರಳಿದೆ. ಮೂರನೆ ಅಲೆ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಲಾಕ್ ಡೌನ್ ರಿಲೀಫ್ ಅವಧಿಯಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದೆ.


ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200