ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಸಂಕಷ್ಟಕ್ಕೆ ಈಡಾಗಿರುವ ರೈತರಿಗೆ ಬೆಳೆ ವಿಮಾ ಕಂಪನಿಗಳು ಘೋಷಿಸಿದ ಪರಿಹಾರ ಮೊತ್ತವನ್ನು ತಕ್ಷಣ ವಿತರಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸೂಚಿಸಿದರು. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬೆಳೆ ವಿಮೆ ಪಾವತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ನೀಡುತ್ತಿರುವ ಪರಿಹಾರ ಮೊತ್ತ ಅತ್ಯಂತ ಕನಿಷ್ಠವಾಗಿದೆ. ಅಂದಾಜು ಮಾಡಿರುವುದೂ ಅವೈಜ್ಞಾನಿಕವಾಗಿದೆ. ಇದನ್ನು ತಕ್ಷಣ ಸರಿಪಡಿಸಬೇಕು ಎಂದರು.

ಜಿಲ್ಲೆಯ 125ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳು ದುರಸ್ತಿಯಲ್ಲಿವೆ. ಇದರಿಂದ ಮಳೆ ಪ್ರಮಾಣ ಸರಿಯಾಗಿ ದಾಖಲಾಗಿಲ್ಲ. ರೈತರಿಗೆ ಅನ್ಯಾಯವಾಗಿದೆ. ಪರ್ಯಾಯವಾಗಿ ಖಾಸಗಿ ಸಂಸ್ಥೆಗಳು ದಾಖಲಿಸಿರುವ ಮಳೆ ಪ್ರಮಾಣದ ಮಾಹಿತಿ ಪರಿಶೀಲಿಸಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಜಿಲ್ಲೆಯ ಮಳೆ ಮಾಪನ ಕೇಂದ್ರಗಳ ಸಮಗ್ರ ವರದಿ ಪಡೆದು ವಾಸ್ತವಿಕ ಮಳೆ ಪ್ರಮಾಣ ನಿಗದಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಮಾಜಿ ಸಚಿವ ಹರತಾಳು ಹಾಲಪ್ಪ, ರೈತ ಮುಖಂಡರಾದ ಮಲ್ಲಿಕಾರ್ಜುನ ಹಕ್ರೆ, ಕೆ.ವಿ. ಕೃಷ್ಣಮೂರ್ತಿ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.