ಶಿವಮೊಗ್ಗ: ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಕುವೆಂಪು ರಂಗಮಂದಿರದಲ್ಲಿ ಶನಿವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ದಿವಂಗತ ಹಿರಿಯೂರು ಕೃಷ್ಣಮೂರ್ತಿ ಅವರ ಸಂಸ್ಮರಣಾ ಗ್ರಂಥ ‘ಕೃಷ್ಣ ಸ್ಮೃತಿ’ ಪುಸ್ತಕ ಬಿಡುಗಡೆ (Book Release) ಸಮಾರಂಭದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಒಟ್ಟಿಗೆ ಭಾಗವಹಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ‘ಕೃಷ್ಣ ಸ್ಮೃತಿ’ ಪುಸ್ತಕ ಬಿಡುಗಡೆ ಮಾಡಿದರು.
ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು?
- ಹಿರಿಯೂರು ಕೃಷ್ಣಮೂರ್ತಿ ಅವರದ್ದು ಮೇರು ವ್ಯಕ್ತಿತ್ವ, ಅನುಕರಣಿಯ. ಅವರು ಗತಿಸಿದ 21 ವರ್ಷದ ಬಳಿಕ ಪುಸ್ತಕ ಪ್ರಟಕಗೊಂಡಿದ್ದರೂ ಸಾಂದರ್ಭೋಚಿತವಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್ ಟು ಸ್ಕೂಲ್ ಆಫರ್, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?
- ಮರಣ ಯಾವಾಗ ಬೇಕಿದ್ದರು ಬರಬಹುದು. ಆದರೆ ನ್ಯಾಯ, ಧರ್ಮ, ಶ್ರೇಷ್ಠ ಜೀವನ ಮೌಲ್ಯಗಳನ್ನು ಬಿಡದೇ ಮುನ್ನಡೆಯುವವನು ಧೀರ ಎಂಬ ಭರ್ತೃಹರಿಯ ಮಾತಿನಂತಹ ವ್ಯಕ್ತಿತ್ವ ಹಿರಿಯೂರು ಕೃಷ್ಣಮೂರ್ತಿ ಅವರದ್ದು.
- ಬರೀ ರಾಮನ ಸ್ಮರಣೆಯಿಂದ ಆತನ ದರ್ಶನ ಆಗೊಲ್ಲ. ಬದಲಿಗೆ ರಾಮನ ಕೆಲಸ ಮಾಡಿದರೆ ರಾಮನ ದರ್ಶನ ಸಾಧ್ಯ ಎಂಬ ಹನುಮಂತನ ಉಪದೇಶ ನಮಗೆಲ್ಲರಿಗೂ ಮಾರ್ಗದರ್ಶಿಯಾಗಲಿ.
- ಬೇರೆಯವರಿಗೂ ಎಂದಿಗೂ ಸಂಕಟ ಕೊಡದಿರುವುದು. ಸಮಾಜದ ಕಂಟಕರಿಗೆ ತಲೆ ಬಾಗದಿರುವುದು ಹಿರಿಯೂರು ಕೃಷ್ಣಮೂರ್ತಿ ಅವರ ವ್ಯಕ್ತಿತ್ವ. ತ್ಯಾಗ ಮಾಡುವವರು ಅಮರತ್ವ ಪಡೆಯುತ್ತಾರೆ.
ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ
ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಮತ್ತು ಈಶ್ವರಪ್ಪ ಇದೇ ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಆದರೆ ಪರಸ್ಪರ ಮಾತನಾಡಲಿಲ್ಲ. ಕಾರ್ಯಕ್ರಮ ಆರಂಭಕ್ಕು ಮೊದಲು ವೇದಿಕೆ ಮುಂಭಾಗ ದತ್ತಾತ್ರೇಯ ಹೊಸಬಾಳೆ ಅವರ ಅಕ್ಕಪಕ್ಕದಲ್ಲಿ ಕುಳಿತಿದ್ದರು.
ಕಾರ್ಯಕ್ರಮದ ಉದ್ಘಾಟನೆ ಸಂದರ್ಭ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಯಡಿಯೂರಪ್ಪ, ಈಶ್ವರಪ್ಪ ಅಕ್ಕಪಕ್ಕದಲ್ಲಿಯೇ ನಿಂತಿದ್ದರು. ಆದರೆ ಮಾತನಾಡದೆ ಮೌನವಾಗಿದ್ದರು. ಭಾಷಣದ ವೇಳೆ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿನ ಹಿಂದಿನ ಹೋರಾಟಗಳನ್ನು ಸ್ಮರಿಸಿಕೊಂಡರು. ಈ ಸಂದರ್ಭ ಐದಾರು ಬಾರಿ ಯಡಿಯೂರಪ್ಪ ಅವರ ಹೆಸರನ್ನು ಹೇಳಿದರು.
ಇವತ್ತು ರಾಜಕೀಯ ಕ್ಷೇತ್ರದಲ್ಲಿ ನಾನೇನಾದರೂ ಸಾಧಿಸಿದ್ದರೆ, ಸ್ಥಾನಮಾನಗಳನ್ನು ಪಡೆದಿದ್ದರೆ ಅದಕ್ಕೆ ಕಾರಣರಾದವರಲ್ಲಿ ಹಿರಿಯೂರು ಕೃಷ್ಣಮೂರ್ತಿ ಕೂಡ ಒಬ್ಬರು. ವಿಸ್ತಾರವಾಗುತ್ತಾ ಹೋಗುವುದೇ ಜೀವನ, ಸಂಕುಚಿತವಾಗುತ್ತಾ ಹೋಗುವುದೇ ಮರಣ ಎಂಬ ಸ್ವಾಮಿ ವಿವೇಕಾನಂದರ ಆಶಯದಂತೆ ಸದಾ ವಿಸ್ತಾರವಾಗುತ್ತಾ ಬೆಳೆದವರು ನನ್ನ ಹಿರಿಯಣ್ಣ ಹಿರಿಯೂರು ಕೃಷ್ಣಮೂರ್ತಿ.
– ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ

ತಾವೂ ಹಾಗೂ ಯಡಿಯೂರಪ್ಪ ಸ್ಕೂಟರ್‌ನಲ್ಲಿ ಓಡಾಡಿ ಚಂದಾ ಹಣ ಸಂಗ್ರಹಿಸಿ 25 ಸಾವಿರ ಜನ ಸೇರಿಸಿ ಶಿವಮೊಗ್ಗದಲ್ಲಿ ರೈತರ ಸಮಾವೇಶ ಮಾಡಲು ಕೃಷ್ಣಮೂರ್ತಿ ಮಾರ್ಗದರ್ಶನ ನೀಡಿದ್ದರು. ಕೆ.ಹೆಚ್.ಶ್ರೀನಿವಾಸ್ ವಿರುದ್ಧ ನಾನು ಚುನಾವಣೆಗೆ ನಿಂತು ಎಂಎಲ್‌ಎ ಆಗಲು ಅವರೇ ಪ್ರೇರಣೆ.
– ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ರಾಷ್ಟ್ರೀಯ ಸ್ವಯಂ ಸೇವಾ ಸಂಘ ವ್ಯಕ್ತಿಗಳ ತಯಾರು ಮಾಡುತ್ತದೆ. ವ್ಯಕ್ತಿಗಳು ಸಮಾಜವನ್ನು ತಯಾರು ಮಾಡುತ್ತಾರೆ. ಅಂತಹ ವ್ಯಕ್ತಿಗಳಲ್ಲೊಬ್ಬರಾದ ಕೃಷ್ಣಮೂರ್ತಿ ಸಮಾಜವನ್ನು ತಯಾರು ಮಾಡಿದವರು.
– ಡಿ.ಹೆಚ್.ಶಂಕರಮೂರ್ತಿ, ಮಾಜಿ ಸಭಾಪತಿ
ಒಡಿಸ್ಸಾ ಕೇಂದ್ರೀಯ ವಿವಿ ಕುಲಾಧಿಪತಿ ಪ್ರೊ. ಪಿ.ವಿ.ಕೃಷ್ಣಭಟ್, ಹಿರಿಯ ಪ್ರಚಾರಕ ಭ.ಮ.ಶ್ರೀಕಂಠ, ಟಿ.ಪಟ್ಟಾಭಿರಾಮ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಎಂಎಲ್‌ಸಿ ಸಿ.ಟಿ.ರವಿ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ » ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ ರೈಲು ಕುರಿತು ರೈಲ್ವೆ ಇಲಾಖೆಯಿಂದ ಮಹತ್ವದ ಪ್ರಕಟಣೆ
Yedyurappa-and-Eshwarappa-at-a-book-release-event.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200