ಶಿವಮೊಗ್ಗ ಲೈವ್.ಕಾಂ | BHADRAVATHI NEWS | 28 JUNE 2021
ಲಕ್ಷಾಂತರ ರೈತರು, ಕೋಟ್ಯಂತರ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯದ ಬುಡದಲ್ಲಿ ಬುಡದಲ್ಲಿ ಕಾಮಗಾರಿಯೊಂದರ ಹೆಸರಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಅಕ್ರಮ ಕಾಮಗಾರಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇಂತಹ ಕಾಮಗಾರಿಗಳಿಂದಾಗಿ ಜಲಾಶಯಕ್ಕೆ ಅಪಾಯ ಎದುರಾಗುವ ಭೀತಿ ಸ್ಥಳೀಯರು ಮತ್ತು ರೈತರನ್ನು ಕಾಡುತ್ತಿದೆ.
ಡ್ಯಾಂ ಮುಂದೆ ಆಗಿರುವ ಅಕ್ರಮವೇನು?
ಭದ್ರಾ ಜಲಾಶಯ ಭರ್ತಿಯಾಗಿ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಧುಮುಕುವ ಸ್ಪಿಲಿಂಗ್ ಬೇಸಿನ್ನಲ್ಲಿ ಇತ್ತೀಚೆಗೆ ಕಬ್ಬಿಣವನ್ನು ಬಳಸಿ ಒಂದೂವರೆ ಅಡಿ ಕಾಂಕ್ರಿಟ್ ಹಾಕಲಾಗಿತ್ತು. ಎರಡೆ ವರ್ಷದಲ್ಲಿ ಕಾಂಕ್ರಿಟ್ ಕಿತ್ತು ಹೋಗಿದೆ. ಈಗ ಪುನಃ ಕಾಮಗಾರಿ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಕೆಲಸ ಶುರು ಮಾಡಿದ್ದಾರೆ. ಒಂದು ವೇಳೆ ಭಾರಿ ಮಳೆಯಾದರೆ ಅಥವಾ ಜಲಾಶಯ ಭರ್ತಿಯಾಗಿ ನೀರು ಹೊರಗೆ ಬಿಟ್ಟರೆ ಮಾಡಿದ ಕೆಲಸವೆಲ್ಲ ಮತ್ತೆ ನೀರುಪಾಲಾಗಲಿದೆ. ಇದು ದುಡ್ಡು ಹೊಡೆಯುವ ಹುನ್ನಾರ ಎಂದು ರೈತರು ಆರೋಪಿಸಿದ್ದಾರೆ.
ಕಾಂಕ್ರಿಟ್ ಹಾಕುವ ಅವಶ್ಯಕತೆ ಏನು?
ಜಲಾಶಯದ 186 ಅಡಿಯಿಂದ ಧುಮುಕುವ ನೀರಿನ ರಭಸ ಟನ್ಗಟ್ಟಲೆ ಭಾರವಿರಲಿದೆ. ಈ ನೀರು ಮಣ್ಣಿನ ನೆಲದ ಮೇಲೆ ಬಿದ್ದರೆ ಭಾರಿ ಗಾತ್ರದ ಗುಂಡಿಯಾಗಲಿದೆ. ಇದು ಜಲಾಶಯಕ್ಕೆ ಅಪಾಯ ಉಂಟು ಮಾಡಲಾಗಿದೆ. ಹಾಗಾಗಿ ನೀರು ರಭಸವಾಗಿ ಬೀಳುವ ಜಾಗವಾದ ಸ್ಪಿಲಿಂಗ್ ಬೇಸಿನ್ನಲ್ಲಿ ಕಾಂಕ್ರಿಟ್ ಹಾಕಲಾಗುತ್ತದೆ. ಜಲಾಶಯ ನಿರ್ಮಾಣದ ಸಂದರ್ಭ ಬಳಸಿದ್ದ ಕಾಂಕ್ರಿಟ್ ಗಟ್ಟಿಮುಟ್ಟಾಗಿದೆ. ಇತ್ತೀಚೆಗೆ ಹೊಸದಾಗಿ ಕಾಂಕ್ರಿಟ್ ಹಾಕುವಾಗ, ಹಳೆಯ ಕಾಂಕ್ರಿಟ್ ಒಡೆದು ತೆಗಯಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ಇದು ಜಲಾಶಯ ನಿರ್ಮಾಣದ ವೇಳೆ ಬಳಕೆ ಮಾಡಿದ್ದ ಕಾಂಕ್ರಿಟ್ ಮತ್ತು ಕೆಲಸದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಹೊಸದಾಗಿ ಕಾಂಕ್ರಿಟ್ ಹಾಕಿದ್ದೇಕೆ?
2015ರಲ್ಲಿ ಡ್ರಿಪ್ಸ್ ಯೋಜನೆ (ಡ್ಯಾಮ್ ರೀ ಹ್ಯಾಬಿಟೇಷನ್ ಇರಿಗೇಷನ್ ಪ್ರೋಗ್ರಾಂ) ಅಡಿ ಜಲಾಶಯದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ 7 ಕೋಟಿ ರೂ. ಬಿಡುಗಡೆ ಮಾಡಲಾಯಿತು. ಇದರಲ್ಲಿ ಬೆಳಗಾವಿಯ ಕಂಪನಿಯೊಂದಕ್ಕೆ ಕಾಂಕ್ರಿಟ್ ಹಾಕಲು ಟೆಂಡರ್ ನೀಡಲಾಗಿತ್ತು. ಸೆಂಟ್ರಲ್ ವಾಟರ್ ಕಮಷಿನ್ (ಸಿಡಬ್ಲುಸಿ) ಅನುಮತಿ ಪಡೆಯದೆ ತಂತ್ರಜ್ಞರು ನೀಡಿದ ಸಲಹೆಯನ್ನು ಪರಿಗಣಿಸದೆ ಕಾಮಗಾರಿ ನಡೆಸಲಾಯಿತು. 2017 – 18ರಲ್ಲಿ ಕಾಂಕ್ರಿಟ್ ಹಾಕಲಾಯಿತು. 2019ರಲ್ಲಿ ಜಲಾಶಯ ಭರ್ತಿಯಾಗಿ ನೀರು ಹೊರಗೆ ಬಿಡಲಾಯಿತು. ನೀರಿನ ರಭಸಕ್ಕೆ ಹೊಸತಾಗಿ ಹಾಕಿದ್ದ ಕಾಂಕ್ರಿಟ್ ಕಿತ್ತು ಹೋಯಿತು. ಬಳಕೆ ಮಾಡಿದ್ದ ಕಬ್ಬಿಣದ ರಾಡ್ಗಳು ಮುದ್ದೆಯಾಗಿ ಜಲಾಶಯದಿಂದ ಸುಮಾರು ನೂರು ಮೀಟರ್ ಮುಂದೆ ಬಂದು ಬಿದ್ದಿದ್ದವು.
ಅಕ್ರಮ ಬಯಲಿಗೆ ಬಂದಿದ್ದು ಹೇಗೆ?
ಜಲಾಶಯಕ್ಕೆ ಬಂದವರು ನೀರಿನ ಸಂಗ್ರಹದತ್ತ ಗಮನ ಹರಿಸುತ್ತಾರೆ. ಆದರೆ ಸ್ಥಳೀಯರು ಮತ್ತು ರೈತ ಮುಖಂಡರು ಜಲಾಶಯದ ಮುಂಭಾಗದಲ್ಲಿ ಗಮನಿಸಿದಾಗ ಕಬ್ಬಿಣದ ರಾಡ್ಗಳು ಮುದ್ದೆಯಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡಿದ್ದಾರೆ. ಕೆಲವೇ ದಿನದಲ್ಲಿ ಜಲಾಶಯದ ಮುಂದೆ ರಿಪೇರಿ ಕಾಮಗಾರಿ ಶುರು ಮಾಡಿದ್ದಾರೆ. ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪರಿಶೀಲನೆ ನಡೆಸಿದಾಗ ಕಾಮಗಾರಿ ಅಸಲಿಯತ್ತು ಬಯಲಿಗೆ ಬಂದಿದೆ ಅನ್ನುತ್ತಾರೆ ರೈತ ಮುಖಂಡ ಕೆ.ಟಿ.ಗಂಗಾಧರ್.
ರೈತರ ಧರಣಿ, ಜನಪ್ರತಿನಿಧಿಗಳ ಭೇಟಿ
ಮಳೆಗಾಲದಲ್ಲಿ ಮತ್ತೆ ಕಾಮಗಾರಿ ನಡೆಸುತ್ತಿರುವುದು, ಬೆಳಗಾವಿ ಮೂಲದ ಕಾಂಟ್ರಾಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತರು ಜಲಾಶಯದ ಮುಂದೆ, ಹೊಳೆಯ ನಡುವೆ ನಿರಂತರ ಧರಣಿ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮದ ವಿರುದ್ಧ ಸ್ಥಳೀಯರು ಮತ್ತು ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಆಕ್ರೋಶಗೊಂಡಿದ್ದಾರೆ.
ಕ್ರಿಮಿನಲ್ ಮೊಕದಮೆ ದಾಖಲಿಸಿ
ಈಗ ನಡೆಯುತ್ತಿರುವ ದುರಸ್ಥಿ ಕಾರ್ಯ ಶೀಘ್ರ ಮುಗಿಸಬೇಕು. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದಮೆ ದಾಖಲು ಮಾಡಬೇಕು. ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. ಆದ್ದರಿಂದ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ರೈತ ಮುಖಂಡ ಕೆ.ಟಿ.ಗಾಂಗಾಧರ್ ಆಗ್ರಹಿಸಿದ್ದಾರೆ.
‘ಜಲಾಶಯಕ್ಕೇನು ತೊಂದರೆ ಇಲ್ಲ’
ಕೋರ್ ಹಾಕಬೇಕು. ಆ ಕೋರ್ಗೆ ಬಳಕೆ ಮಾಡಿದ್ದ ಕಬ್ಬಿಣ ಗಟ್ಟಿ ಇರಲಿಲ್ಲ ಎಂದು ಕಾಣುತ್ತದೆ. ಹಳೆಯ ಕಾಂಕ್ರಿಟ್ ಮತ್ತು ಹೊಸ ಕಾಂಕ್ರಿಟ್ ಅಂಟಿಕೊಳ್ಳಲು ಒಂದು ಬಗೆಯ ಗಮ್ ಇರಲಿದೆ. ಅದನ್ನು ಬಳಕೆ ಮಾಡಿಲ್ಲ ಅನ್ನುವುದು ಮೇಲ್ನೋಟಕ್ಕೆ ಕಂಡು ಬರಲಿದೆ. ಸಿಡಬ್ಲುಸಿ ತಜ್ಞರು ಬಂದು ಪರಿಶೀಲನೆ ನಡೆಸಲಿದ್ದಾರೆ. ಜಲಾಶಯದ ಸುರಕ್ಷತೆಗೆ ಯಾವುದೆ ತೊಂದರೆ ಇಲ್ಲ ಅನ್ನುತ್ತಾರೆ ಜಲಾಶಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ಚಂದ್ರಹಾಸ್.
ಎಫ್ಐಆರ್ ಹಾಕಿ ಜೈಲಿಗೆ ಕಳುಹಿಸಬೇಕು
ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲು ಮಾಡಿ ಜೈಲಿಗೆ ಕಳುಹಿಸಬೇಕು. 147 ಟನ್ ಕಬ್ಬಿಣ ಬಳಕೆ ಮಾಡುವ ಜಾಗದಲ್ಲಿ 40 ಟನ್ ಬಳಕೆ ಮಾಡಿದ್ದಾರೆ. ಸಿಮೆಂಟ್ ಕೂಡ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿರುವ ಶಂಕೆ ಇದೆ. ಕೋಟ್ಯಂತರ ರೂ. ಅವ್ಯವಹಾರವಾಗಿದೆ. ತಕ್ಷಣವೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಭದ್ರಾವತಿ ಶಾಸಕ ಸಂಗಮೇಶ್ವರ್ ಆಗ್ರಹಿಸಿದ್ದಾರೆ.
ಕೋಟ್ಯಂತರ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯದ ಸುರಕ್ಷತೆ ಬಗ್ಗೆ ಸರ್ಕಾರ ಜನರಲ್ಲ ಭರವಸೆ ಮೂಡಿಸಬೇಕಿದೆ. ಅಲ್ಲದೆ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕಿದೆ.
PHOTO ALBUM
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200