ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 15 NOVEMBER 2020
ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕಿನ ಅಬ್ಬರ ತಗ್ಗಿದೆ. ಪಾಸಿಟಿವ್ಗಳ ಸಂಖ್ಯೆ ಇಳಿಮುಖವಾಗಿದೆ. ಸಾವಿನ ಸಂಖ್ಯೆಯು ಕಡಿಮೆಯಾಗಿದೆ. ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹಾಗೆಂದು ನಿರ್ಲಕ್ಷ್ಯ ವಹಿಸುವಂತಿಲ್ಲ. ಸ್ವಲ್ಪ ಯಾಮಾರಿದರೂ ಕರೋನ ಮತ್ತೆ ಅರ್ಭಟಿಸುವ ಸಾದ್ಯತೆ ಇದೆ. ಶಿವಮೊಗ್ಗ ಜಿಲ್ಲೆ ಕೋವಿಡ್ನ ಎರಡನೆ ಅಲೆಗೆ ಸಿಲುಕುವ ಭೀತಿ ಇದೆ. .
ಶೇ.2ಕ್ಕೆ ಇಳಿದ ಕರೋನ ಅಬ್ಬರ
ಶಿವಮೊಗ್ಗದಲ್ಲಿ ಕರೋನ ಸೋಂಕಿನ ಪ್ರಮಾಣ ತಗ್ಗಿದೆ. ಜಿಲ್ಲೆಯಲ್ಲಿ ಸದ್ಯ ಕರೋನ ಸೋಂಕಿತರ ಪ್ರಮಾಣ ಶೇ.2ಕ್ಕೆ ಇಳಿಕೆಯಾಗಿದೆ. ನೂರು ಮಂದಿ ಪರೀಕ್ಷೆಗೆ ಒಳಗಾದರೆ ಸರಾಸರಿ ಇಬ್ಬರಲ್ಲಷ್ಟೆ ಕರೋನ ಕಾಣಿಸಿಕೊಳ್ಳುತ್ತಿದೆ.
ಆಗಸ್ಟ್ನಲ್ಲೇ ಹೆಚ್ಚಿತ್ತು ಕರೋನ
ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಮೇ 10ರಂದು. ಗುಜರಾತ್ ರಾಜ್ಯದ ಅಹಮದಾಬಾದ್ನಿಂದ ಹಿಂತಿರುಗಿದ್ದ 8 ಮಂದಿಯಲ್ಲಿ ಮೊದಲು ಸೋಂಕು ಪತ್ತೆಯಾಗಿತ್ತು. ಆ ಬಳಿಕ ಪಾಸಿಟಿವ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಆ ಬಳಿಕ ಸೋಂಕಿನ ಪ್ರಮಾಣ ಕುಸಿತ ಕಂಡಿದೆ. ಇದರ ಗ್ರಾಫಿಕ್ಸ್ ವಿವರ ಇಲ್ಲಿದೆ.
ಶಿವಮೊಗ್ಗ ತಾಲೂಕಲ್ಲೇ ಹೆಚ್ಚು ಪಾಸಿಟಿವ್
ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಳ ಆಗುತ್ತಿದ್ದಂತೆ ಜನರು ಆತಂಕಕ್ಕೀಡಾಗಿದ್ದರು. ನೆರಹೊರೆಯವರನ್ನು, ನೆಂಟರು, ಇಷ್ಟರನ್ನು ಅನುಮಾನದಿಂದ ಕಾಣುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಿವಮೊಗ್ಗ ತಾಲೂಕಿನಲ್ಲೇ ಕರೋನ ಆತಂಕ ಹೆಚ್ಚಾಗಿತ್ತು. ಆರಂಭದಿಂದಲೂ ಉಳಿದ ತಾಲೂಕಿಗಿಂತಲೂ ಹೆಚ್ಚು ಪ್ರಕರಣಗಳು ಇಲ್ಲಿ ಕಾಣಿಸಿಕೊಂಡಿದ್ದವು. ಇತ್ತ ಹೊಸನಗರ ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ನವೆಂಬರ್ 2ರವರೆಗಿನ ವರದಿಯಂತೆ ತಾಲೂಕುಗಳಲ್ಲಿನ ಕರೋನ ಸೋಂಕಿನ ವಿವರ ಹೀಗಿದೆ.
ಸಾವುಗಳು ಹೆಚ್ಚಿಸಿದ ಆತಂಕ
ಸಾವುಗಳು ಸಂಖ್ಯೆ ಏರಿಕೆಯಾದಂತೆ ಕರೋನದ ಭೀತಿ ಮತ್ತಷ್ಟು ಹೆಚ್ಚಿತ್ತು. ಅಕ್ಟೋಬರ್ ತಿಂಗಳ ಕೊನೆವರೆಗೆ ಜಿಲ್ಲೆಯ ತಾಲೂಕುಗಳಲ್ಲಿ ಈವರೆಗೂ ಸಂಭವಿಸಿದ ಸಾವಿನ ಸಂಖ್ಯೆ ಈ ಗ್ರಾಫಿಕ್ಸ್ನಲ್ಲಿದೆ.
ನವೆಂಬರ್ನಲ್ಲಿ ಕರೋನ ಕಡಿಮೆ
ಶಿವಮೊಗ್ಗ ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ಕರೋನ ಸೋಂಕಿತರ ಸಂಖ್ಯೆ ಸರಾಸರಿ ಶೇ.2ಕ್ಕೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. ನವೆಂಬರ್ 14ರ ವರದಿಯ ಪ್ರಕಾರ, ಜಿಲ್ಲೆಯಲ್ಲಿ ಸದ್ಯ 203 ಸೋಂಕಿತರಿದ್ದಾರೆ. ಈ ಪೈಕಿ 66 ಮಂದಿ ಮೆಗ್ಗಾನ್ ಆಸ್ಪತ್ರೆಯಲ್ಲಿ, 24 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ, ಟ್ರಿಯೇಜ್ನಲ್ಲಿ 8, 105 ಮಂದಿ ಮನೆ ಐಸೊಲೇಷನ್ನಲ್ಲಿದ್ದಾರೆ.
ಕರೋನ ಕಂಟ್ರೋಲ್ ಆಗಿದ್ದು ಹೇಗೆ?
- ಕೋವಿಡ್ ಮತ್ತು ಅದು ಹರಡುವ ಕುರಿತು ಜನರಲ್ಲಿ ಜಾಗೃತಿ ಮೂಡಿದ್ದು.
- ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಕಡ್ಡಾಯಗೊಳಿಸಿದ್ದು.
- ಐಸೊಲೇಷನ್ ವಿಚಾರದಲ್ಲಿ ಜನರು ಹೆಚ್ಚು ಜಾಗೃತರಾಗಿದ್ದು.
- ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಕಟ್ಟುನಿಟ್ಟು ಕ್ರಮ.
- ಮೆಗ್ಗಾನ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ಗಳು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದು.
VIDEO REPORT
ಎರಡನೆ ಅಲೆಯ ಭೀತಿ
ಶಿವಮೊಗ್ಗದಲ್ಲಿ ಕರೋನ ಹರಡುತ್ತಿರುವ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬೆಡ್ಗಳು ಖಾಲಿಯಾಗಿವೆ. ಹಾಗೆಂದು ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾಕೆಂದರೆ ಜಿಲ್ಲೆಯಲ್ಲಿ ಕೋವಿಡ್ನ ಎರಡನೆ ಅಲೆಯ ಭೀತಿ ಇದೆ. ಹಾಗಾಗಿ ಜಿಲ್ಲಾಡಳಿತ ಹೆಚ್ಚು ನಿಗಾ ವಹಿಸಿದೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟಸರ್ ಬಳಸುವಂತೆ ಜಾಗೃತಿ ಅಭಿಯಾನವನ್ನು ಮುಂದುವರೆಸಿದೆ. ಆರೋಗ್ಯ ಇಲಾಖೆ ಮತ್ತು ಇತರೆ ವಿಭಾಗದ ಅಧಿಕಾರಿಗಳನ್ನು ಸಿನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
ಎರಡನೆ ಅಲೆ ಭೀತಿಗೆ ಕಾರಣಗಳಿವು
- ಮಾಸ್ಕ್ ಬಳಕೆ ಕಡ್ಡಾಯವಿದ್ದರೂ ಜಿಲ್ಲೆಯ ಹಲವು ಕಡೆ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
- ದಸರಾ, ದೀಪಾವಳಿ ಸೇರಿದಂತೆ ಹಬ್ಬಗಳಂದು ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಸಾಮಾಜಿಕ ಅಂತರ ಮರೆತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು.
- ಜಿಲ್ಲಾಡಳಿತ, ನಗರ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ನಿಯಮ ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟು ಕ್ರಮ ಕೈಗೊಳ್ಳದಿರುವುದು.
ಶಿವಮೊಗ್ಗ ಜಿಲ್ಲೆಯಲ್ಲಿ ಸದ್ಯ ಕರೋನ ಪ್ರಮಾಣ ತಗ್ಗಿದೆ. ಜಿಲ್ಲಾಡಳಿತ ಜಾಗೃತಿಯ ಜೊತೆಗೆ ಜನರು ಎಚ್ಚೆತ್ತುಕೊಳ್ಳಬೇಕಿದೆ. ಆಗ ಸೋಂಕಿನ ಪ್ರಮಾಣ ಸಂಪೂರ್ಣ ತಗ್ಗಲಿದೆ. ಇಲ್ಲವಾದರೆ ಕೋವಿಡ್ ಎರಡನೆ ಅಲೆಯಿಂದ ಜಿಲ್ಲೆಯಲ್ಲಿ ಮತ್ತೆ ಸಾವು, ನೋವು, ಸಂಕಷ್ಟ ಹೆಚ್ಚುವ ಭೀತಿ ಇದೆ. ಈ ಬಗ್ಗೆ ಜನರು ಜಾಗೃತರಾಗಬೇಕಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422