ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 9 ಮಾರ್ಚ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯೋಧರ ಕುರಿತು ದೇಶಾದ್ಯಂತ ಗೌರವದ ಭಾವವಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ವಂಚಕರು ಜನರಿಗೆ ಲಕ್ಷ ಲಕ್ಷ ರೂಪಾಯಿಗೆ ಟೋಪಿ ಹಾಕುತ್ತಿದ್ದಾರೆ. ಇಂತಹ ವಂಚನೆಗಳ ಕುರಿತು ಎಚ್ಚರದಿಂದ ಇರುವಂತೆ ಶಿವಮೊಗ್ಗ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ವರ್ಷದ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಶಿವಮೊಗ್ಗದಲ್ಲಿ ಯೋಧರ ಹೆಸರಿನಲ್ಲಿ ವಂಚಿಸಿರುವ ಮೂರು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2.20 ಲಕ್ಷ ರೂ. ವಂಚನೆ ಮಾಡಲಾಗಿದೆ. ಇದು ಆತಂಕಕಾರಿ ಬೆಳವಣಿಗೆ ಆಗಿರುವುದರಿಂದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರೇ, ಜನರು ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.
ಹೇಗೆ ನಡೆಯುತ್ತೆ ಈ ವಂಚನೆ?
ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟ ಮಾಡುವ ವೇದಿಕೆ OLX ಅನ್ನು ಈ ವಂಚಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಸ್ತುಗಳನ್ನು ಖರೀದಿಸುವುದಾಗಿ ನಂಬಿಸಿ ಅಥವಾ ವಸ್ತುಗಳ ಮಾರಾಟ ಮಾಡುವುದಾಗಿ ಜಾಹೀರಾತು ಪ್ರಕಟಿಸಿ, ಜನರ ಬ್ಯಾಂಕ್ ಖಾತೆಯ ವಿವರ ಪಡೆದುಕೊಂಡು ಹಣವನ್ನು ಲಪಟಾಯಿಸುತ್ತಿದ್ದಾರೆ. ಈ ಜಾಲ ಶಿವಮೊಗ್ಗದಲ್ಲು ಜನರಿಗೆ ಟೋಪಿ ಹಾಕುತ್ತಿದ್ದು, ಪ್ರಕರಣಗಳು ದಾಖಲಾಗಿವೆ.
ಮಾರ್ಚ್’ನಲ್ಲಿ ಮೂರು ಕೇಸ್
ಕೇಸ್ 1
ಶಿವಮೊಗ್ಗ ರವೀಂದ್ರನಗರ ನಿವಾಸಿಯೊಬ್ಬರಿಗೆ OLX ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಸೇನಾಧಿಕಾರಿ ಸೋಗಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ವಸ್ತುಗಳನ್ನು ಖರೀದಿಸುವುದಾಗಿ ನಂಬಿಸಿದ. ಜಾಹೀರಾತು ಪ್ರಕಟಿಸಿದ್ದ ವ್ಯಕ್ತಿಯ ಪತ್ನಿ ಮತ್ತು ಮಗಳ ಖಾತೆ ವಿವರ ಪಡೆದು, 88 ಸಾವಿರ ರೂ. ಲಪಟಾಯಿಸಿದ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಸ್ 2
ಬೊಮ್ಮನಕಟ್ಟೆ ನಿವಾಸಿಯೊಬ್ಬರು ಸೆಕೆಂಡ್ಹ್ಯಾಂಡ್ ಕಾರು ಖರೀದಿಸುವುದಕ್ಕಾಗಿ ಒಎಲ್ಎಕ್ಸ್ನಲ್ಲಿಹಾಕಲಾಗಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಮೈಸೂರಿನಲ್ಲಿದ್ದು ಮಿಲಿಟರಿ ಅಧಿಕಾರಿಯಾಗಿದ್ದೇನೆಂದು ಹೇಳಿಕೊಂಡಿದ್ದಾನೆ. ಮುಂಗಡವಾಗಿ ಗೂಗಲ್ ಪೇ ಮುಖಾಂತರ 92 ಸಾವಿರ ರೂ. ನೀಡಿದ್ದಲ್ಲಿಮಿಲಿಟರಿ ವಾಹನದಲ್ಲಿಯೇ ವಿಳಾಸಕ್ಕೆ ಕಾರು ನೀಡುವುದಾಗಿ ಹೇಳಿದ್ದಾನೆ. ಅದನ್ನು ನಂಬಿ ಹಣ ಕಳೆದುಕೊಂಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೇಸ್ 3
ಬೈಕ್ ಮಾರಾಟ ಮಾಡುವ ಜಾಹೀರಾತು ಹಾಕಿ ಹೊಸಮನೆ ಬಡಾವಣೆ ಮೂಲದ ವ್ಯಕ್ತಿಯಿಂದ 40,500 ರೂ. ಟೋಪಿ ಹಾಕಿದ್ದಾನೆ. ಇಲ್ಲಿಯೂ ಮಿಲಿಟರಿ ಅಧಿಕಾರಿ ಎಂದೇ ಹೇಳಿಕೊಳ್ಳಲಾಗಿದೆ. ಜತೆಗೆ, ವಾಟ್ಸ್ಆ್ಯಪ್ ನಂಬರ್ ನೀಡಿದ್ದು, ಮಿಲಿಟರಿ ಸಮವಸ್ತ್ರದಲ್ಲಿರುವ ಭಾವಚಿತ್ರ, ಆರ್ಮಿ ಟ್ರಾನ್ಸ್ ಪೋರ್ಟ್ ಪಾರ್ಸಲ್ ಡಿಪಾರ್ಟಮೆಂಟ್ನ ಭಾವಚಿತ್ರ, ಆಧಾರ್ ಮತ್ತು ಪಾನ್ ಕಾರ್ಡ್ ಕಳುಹಿಸಿದ್ದಾನೆ. ಇದನ್ನು ನಂಬಿ ಹಣ ಕಳುಹಿಸಿದ ವ್ಯಕ್ತಿಯೊಬ್ಬರು ಮೋಸ ಹೋಗಿದ್ದಾರೆ.
ಇದೇ ಮೊದಲಲ್ಲ ಇಂತಹ ವಂಚನೆ
ಯೋಧರ ಹೆಸರಿನಲ್ಲಿ ವಂಚನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವು ಇದೇ ರೀತಿಯ ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ ಯೋಧರ ಹೆಸರಿನಲ್ಲಿ ವಂಚನೆ ಮಾಡಿರುವ ಮೂರು ಪ್ರಕರಣ ದಾಖಲಾಗಿವೆ. ಈ ಕೇಸ್’ಗಳಲ್ಲಿ 1.90 ಲಕ್ಷ ರೂ. ವಂಚನೆಯಾಗಿದೆ.
ಪೂಜ್ಯ ಭಾವನೆಯೆ ವಂಚಕರ ಬಂಡವಾಳ
ಸೈನಿಕರ ಮೇಲಿರುವ ಪೂಜ್ಯ ಭಾವನೆಯನ್ನು ಬಳಸಿಕೊಂಡು ಜನರಿಗೆ ಮೋಸ ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ಮಿಲಿಟರಿ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದರೂ ಸಂಬಂಧಪಟ್ಟ ವಾಹನಗಳ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ಆದರೆ, ಆನ್ಲೈನ್ನಲ್ಲೇ ವೀಕ್ಷಿಸಿ ಹಣ ವರ್ಗಾವಣೆ ಮಾಡಬೇಡಿ. ಈಗಾಗಲೇ ವಂಚನೆ ಮಾಡಿರುವವರ ಶೋಧ ಕಾರ್ಯ ಮಾಡಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]