ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIKARIPURA NEWS, 4 NOVEMBER 2024 : ಬೆಳಕಿನ ಹಬ್ಬ ದೀಪಾವಳಿ ಆಚರಣೆ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹೋರಿ ಹಬ್ಬದ ಅಬ್ಬರ ಆರಂಭವಾಗಿದೆ. ಕೆಲವೆಡೆ ದೀಪಾವಳಿಯಂದೇ ಹೋರಿ ಹಬ್ಬ (Hori Habba) ನಡೆಸಲಾಗಿದೆ. ಇನ್ನು ವಿವಿಧೆಡೆ ದೊಡ್ಡ ಮಟ್ಟದ ಸ್ಪರ್ಧೆಗಳಿಗೆ ಸಿದ್ಧತೆ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ ಜಿಲ್ಲೆಯ ಹಲವು ಕಡೆ ಹೋರಿ ಹಬ್ಬ ಆಯೋಜಿಸಲಾಗುತ್ತದೆ. ಅಖಾಡಕ್ಕಿಳಿಯುವ ಪೈಲ್ವಾನರು ಹೋರಿಗಳನ್ನು ತಡೆದು ನಿಲ್ಲಿಸಬೇಕು. ಅವುಗಳಿಗೆ ಕಟ್ಟಿರುವ ಕೊಬ್ಬರಿ ಹರಿದುಕೊಳ್ಳಬೇಕು. ಇದು ಹೋರಿ ಹಬ್ಬದ ನಿಯಮ.
ಮನರಂಜನೆಯಿಂದ ಸ್ಪರ್ಧೆಯಾಗಿ ಬದಲು
ವರ್ಷಪೂರ್ತಿ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ರೈತರು ಹೋರಿ ಬೆದರಿಸುವುದನ್ನು ಮನೋರಂಜನೆಯಾಗಿ ಮಾಡಿಕೊಂಡಿದ್ದರು. ಕಾಲದ ಹಿಂದೆಯೇ ಹೋರಿ ಹಬ್ಬವು ಬದಲಾಗಿದೆ. ಈಗ ಹೋರಿ ಹಬ್ಬ ಸಂಪೂರ್ಣ ಸ್ಪರ್ಧೆಯಾಗಿ ಮಾರ್ಪಾಡಾಗಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಹೋರಿಗಳು ಮತ್ತು ಹೋರಿಗಳನ್ನು ಹಿಡಿಯುವವರಿಗೆ ದುಬಾರಿ ಮೊತ್ತದ ಬಹುಮಾನ ನೀಡಲಾಗುತ್ತಿದೆ. ದ್ಚಿಚಕ್ರ ವಾಹನಗಳು, ಚಿನ್ನ, ಬೆಳ್ಳಿ ಆಭರಣ, ಫ್ರಿಡ್ಜು, ವಾಷಿಂಗ್ ಮೆಷಿನ್, ಗೃಹೋಪಯೋಗಿ ವಸ್ತುಗಳು ಸೇರಿ ಆಕರ್ಷಕ ಬಹುಮಾನಗಳನ್ನು ಇಡಲಾಗುತ್ತಿದೆ. ಇದರಿಂದ ಹೋರಿ ಹಬ್ಬದ ಕ್ರೇಜ್ ಮತ್ತಷ್ಟು ಹೆಚ್ಚಿದೆ.
ಹೊರ ರಾಜ್ಯದಿಂದ ಹೋರಿಗಳು
ಹೋರಿ ಹಬ್ಬದಲ್ಲಿ ಬಹುಮಾನಕ್ಕಿಂತಲು ಪ್ರತಿಷ್ಠೆ ಹೆಚ್ಚು ಮೇಳೈಸುತ್ತದೆ. ಮಾಲೀಕರು ತಮ್ಮ ಹೋರಿಯನ್ನು ಯಾರೂ ಹಿಡಿಯಬಾರದು ಎಂದು ಸಿದ್ಧತೆ ಮಾಡಿಕೊಳ್ಳುತ್ತಾರೆ. ಇತ್ತ ಅಖಾಡಕ್ಕಿಳಿಯುವ ಪೈಲ್ವಾನರು ಎಂತಹ ಹೋರಿಯನ್ನಾದರು ಹಿಡಿದು ತೀರಬೇಕು ಎಂದು ಹೊಂಚು ಹಾಕುತ್ತಾರೆ. ಈ ಪ್ರತಿಷ್ಠೆಯೇ ಹಬ್ಬದ ರಂಗು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ, ಹೋರಿ ಮಾಲೀಕರು ಲಕ್ಷಾಂತರ ರೂ. ಖರ್ಚು ಮಾಡಿ ತಮಿಳುನಾಡು, ಆಂಧ್ರಪ್ರದೇಶದಿಂದೆಲ್ಲ ಕಟ್ಟುಮಸ್ತು ಹೋರಿಗಳನ್ನು ಖರೀದಿಸಿ ತರುತ್ತಾರೆ.
ಹಬ್ಬಕ್ಕು ಮೊದಲು ಹೋರಿಗಳಿಗೆ ತರಬೇತಿ
ದೀಪಾವಳಿಯಿಂದ ಹೋರಿ ಹಬ್ಬದ ಕ್ರೇಜ್ ಶುರುವಾಗಲಿದೆ. ಹಾಗಾಗಿ ಹೋರಿಗಳಿಗೆ ನಿತ್ಯ ಪೌಷ್ಠಿಕ ಆಹಾರ, ನಿರಂತರ ತರಬೇತಿ ನೀಡಲಾಗುತ್ತದೆ. ಅಖಾಡಕ್ಕಿಳಿಯುವ ಹೋರಿಗಳನ್ನು ಕುಸ್ತಿ ಪೈಲ್ವಾನರ ಹಾಗೆ ಸಿದ್ಧಪಡಿಸಲಾಗುತ್ತದೆ. ತರತಬೇತಿ ಸಂದರ್ಭ ಹೋರಿಗಳ ಚಿನ್ನಾಟ, ಆಕ್ರೋಶವೆಲ್ಲವನ ಕಣ್ತುಂಬಿಕೊಳ್ಳುವುದಕ್ಕಾಗಿಯೇ ಅಕ್ಕಪಕ್ಕದ ಊರಿನ ಜನ ಸೇರುವುದು ಇದೆ.
ಸೋಷಿಯಲ್ ಮೀಡಿಯಾ, ಫೋಟೊ ಶೂಟ್ ಕ್ರೇಜ್
ದಿನೇ ದಿನೆ ಹೋರಿ ಹಬ್ಬದ ಕ್ರೇಜ್ ಮತ್ತು ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಹಾಗಾಗಿಯೇ ಆಯಾ ಹೋರಿಗಳ ಹೆಸರಿನಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಪೇಜ್‌ಗಳು, ವಾಟ್ಸಪ್ ಗ್ರೂಪುಗಳು ಇದ್ದಾವೆ. ಇನ್ನು, ಈ ಬಾರಿ ಕೆಲವು ಹೋರಿಗಳ ಫೋಟೊ ಶೂಟ್ ಮಾಡಿಸಲಾಗಿದೆ. ಹೋರಿಗಳ ಕ್ಯಾಂಡಿಡ್ ಫೋಟೊ, ವಿಡಿಯೋಗಳಿಗೆ ರಿಮಿಕ್ಸ್ ಸಾಂಗುಗಳನ್ನು ಹಾಕಿ ಸಾಮಾಜಿಕ ಜಾಲತಾಣಗದಲ್ಲಿ ವೈರಲ್ ಮಾಡಲಾಗಿದೆ.
ದೀಪಾವಳಿಯಂದೆ ಹೋರಿ ಹಬ್ಬ
ಶಿಕಾರಿಪುರ, ಸೊರಬ ತಾಲೂಕಿನ ವಿವಿಧೆಡೆ ದೀಪಾವಳಿಯಂದೇ ಹೋರಿ ಹಬ್ಬ ನಡೆಯಿತು. ಹಲವು ಹೋರಿಗಳು ಅಖಾಡಕ್ಕಿಳಿದು ಪೈಲ್ವಾನರಿಗೆ ಸವಾಲೊಡ್ಡಿದ್ದವು. ಸುತ್ತಮುತ್ತಲ ವಿವಿಧೆಡೆ ಜನರು, ಹೋರಿ ಹಬ್ಬದ ಅಭಿಮಾನಿಗಳು ಹಬ್ಬದಲ್ಲಿ ಭಾಗವಹಿಸಿ ಖುಷಿ ಪಟ್ಟಿದ್ದಾರೆ. ಇನ್ನು, ಹೋರಿ ಹಬ್ಬದಲ್ಲಿ ಹೋರಿ ಹಿಡಿಯಲು ಹೋಗಿ ಗಾಯಗೊಳ್ಳುವವರು ಕಡಿಮೆ ಇಲ್ಲ.
ದೀಪಾವಳಿ ಸಂದರ್ಭ ಶಿಕಾರಿಪುರ ಮತ್ತು ಸೊರಬ ತಾಲೂಕಿನ ವಿವಿಧೆಡೆ ಹೋರಿ ಹಬ್ಬಗಳು ನಡೆದವು. ಈ ವೇಳೆ ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೆಲವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗಾಗಿ ಆಯೋಜಕರು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ಆಗ್ರಹಗಳು ಇವೆ. ಇವುಗಳ ನಡುವೆ ಹೋರಿ ಹಬ್ಬಕ್ಕೆ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಿಂತಲು ಹೆಚ್ಚಿನ ಕ್ರೇಜ್ ಇದೆ. ನೋವುಗಳನ್ನು ಮರೆತು ರೈತಾಪಿ ವರ್ಗ ಹಬ್ಬದಲ್ಲಿ ಭಾಗಿಯಲ್ಲಿ ಸಂಭ್ರಮಿಸುತ್ತದೆ.
ಇದನ್ನೂ ಓದಿ » ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ, ಟೈಮಿಂಗ್ ಏನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422