ಶಿವಮೊಗ್ಗ ಲೈವ್.ಕಾಂ | SHIMOGA | 02 ಡಿಸೆಂಬರ್ 2019
ಎಲ್ಲವು ಅಂದುಕೊಂಡತೆ ಆಗಿದ್ದರೆ ಇಷ್ಟು ಹೊತ್ತಿಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹಲವು ವಿಮಾನಗಳು ಬಂದಿಳಿಯಬೇಕಿತ್ತು. ಆದರೆ ಆರಂಭದಿಂದಲ್ಲೆ ಏರ್’ಪೋರ್ಟ್’ಗೆ ವಿಘ್ನ ಎದುರಾಯಿತು. ರನ್ ವೇ ನಿರ್ಮಾಣಕ್ಕು ಮೊದಲೇ ಕಾಮಗಾರಿ ನಿಂತು ಹೋಯಿತು.
ಈಗ ಶಿವಮೊಗ್ಗ ವಿಮಾನ ನಿಲ್ದಾಣದ ಕಟ್ಟಡ, ಅಕ್ರಮ ಚಟುವಟಿಕೆಯ ತಾಣವಾಗಿದೆ. ಕುಡುಕರು, ಪಾರ್ಟಿ ಮಾಡುವವರಿಗೆ ಫ್ರೀ ಜಾಗವಾಗಿದೆ. ಶಿವಮೊಗ್ಗ ಲೈವ್.ಕಾಂ ವಿಮಾನ ನಿಲ್ದಾಣದ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿದಾಗ ಅಚ್ಚರಿ ಅನಿಸುವ ಸಂಗತಿಗಳು ಕಣ್ಮುಂದೆ ಕಾಣಿಸಿದವು.
ಗಾಳಿಪಟದಂತೆ ಹಾರಾಡುತ್ತಿವೆ ದಾಖಲೆಗಳು
ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನಾಯಕ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇಲ್ಲಿಯೇ ರನ್’ವೇ ಕಾಮಗಾರಿ ನಡೆದು ಅರ್ಧಕ್ಕೆ ನಿಂತಿದೆ. ವಿಮಾನ ನಿಲ್ದಾಣದ ಉದ್ದೇಶಿತ ಜಾಗಕ್ಕೆ ಭೇಟಿ ನೀಡುವವರಿಗೆ ಗಾಳಿಪಟದಂತೆ ಹಾರಾಡುತ್ತಿರುವ ದಾಖಲೆಗಳು ಸ್ವಾಗತ ಕೋರುತ್ತವೆ. ರೊಮನ್ ಟಾರ್ಮ್ಯಾಟ್ ಲಿಮಿಟೆಡ್ ಕಂಪನಿಯು ಪ್ರತಿದಿನ ರನ್ ವೇ ಮಣ್ಣಿನ ಪರೀಕ್ಷೆ ನಡೆಸಿ ವರದಿ ನೀಡುತಿತ್ತು. ಈ ವರದಿಯ ಕಾಪಿಗಳು ವಿಮಾನ ನಿಲ್ದಾಣದಾದ್ಯಂತ ಹಾರಾಡುತ್ತಿವೆ.

ಕಲ್ಲಿನ ಒಲೆ, ಎಲ್ಲೆಂದರಲ್ಲಿ ಕಸ ಕಸ
ವಿಮಾನ ನಿಲ್ದಾಣ ಕಾಮಗಾರಿ ವೇಳೆ ತಾತ್ಕಾಲಿಕ ಕಚೇರಿಗಾಗಿ ಕಟ್ಟಡ ನಿರ್ಮಿಸಲಾಗಿತ್ತು. ಕೆಲವು ತಿಂಗಳ ಹಿಂದಿನವರೆಗು ಈ ಕಟ್ಟಡ ಸುಸ್ಥಿತಿಯಲ್ಲಿತ್ತು. ಆದರೆ ಈಗ ಕಟ್ಟಡದ ಮುಂದೆ ಮೂರು ಕಲ್ಲುಗಳನ್ನು ಇಟ್ಟು ಒಲೆ ಹಚ್ಚಲಾಗಿದೆ. ಇದರಿಂದ ಗೋಡೆ ಬಣ್ಣಗೆ ಕಪ್ಪಾಗಿದೆ. ಇನ್ನು, ಕಟ್ಟಡದಾದ್ಯಂತ ಮಣ್ಣು ಪರೀಕ್ಷೆ ದಾಖಲೆಗಳು ಮತ್ತು ಕಸದ ರಾಶಿಯೇ ಹರಡಿದೆ.

ಎಣ್ಣೆ ಹಾಕೋರಿಗೆ ಒಳ್ಳೆ ಲೊಕೇಷನ್
ವಿಮಾನ ನಿಲ್ದಾಣದ ಕಟ್ಟಡ ಎಣ್ಣೆ ಪಾರ್ಟಿ ಮಾಡುವವರಿಗೆ ಒಳ್ಳೆ ಲೊಕೇಷನ್ ಆಗಿದೆ. ಕಟ್ಟಡದಲ್ಲಿ ಬಿಯರ್ ಬಾಟಲಿಗಳು, ಮದ್ಯದ ಪೌಚುಗಳು ಎಲ್ಲೆಂದರಲ್ಲಿ ಬಿದ್ದಿವೆ. ಇನ್ನು, ಗುಟ್ಕಾ, ಸಿಗರೇಟು ಪ್ಯಾಕ್’ಗಳು ಕಾಣಸಿಗುತ್ತವೆ. ಅನೈತಿಕ ಚಟುವಟಿಕೆಗೆ ಕಟ್ಟಡ ಬಳಕೆ ಆಗುತ್ತಿರುವ ಕುರುಹುಗಳು ಕಾಣಿಸುತ್ತವೆ.

ಅಲ್ಮೇರಾ, ಸ್ವಿಚ್, ಕಮೋಡ್ ಪೀಸ್ ಪೀಸ್
ಕಟ್ಟಡದಲ್ಲಿರುವ ಅಲ್ಮೇರಾವನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಅದರೊಳಗಿದ್ದ ದಾಖಲೆಗಳು, ಕೆಲವು ಬಟ್ಟೆಗಳು, ವಸ್ತುಗಳನ್ನು ಚೆಲ್ಲಾಡಲಾಗಿದೆ. ಇನ್ನು ಕಟ್ಟಡದೊಳಗಿದ್ದ ಕಿಟಕಿಗಳ ಗಾಜು, ಕಮೋಡ್, ಸಿಂಕ್, ಸ್ವಿಚ್’ಗಳನ್ನು ಪೀಸ್ ಪೀಸ್ ಮಾಡಲಾಗಿದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ದೊಡ್ಡ ಪೈಪ್’ಗಳು ರಕ್ಷಣೆ ಇಲ್ಲದೆ ಬಿದ್ದಿವೆ.

ಏರ್’ಪೋರ್ಟ್’ಗೆ ಆರಂಭದಿಂದಲೇ ವಿಘ್ನ
ವಿಮಾನ ನಿಲ್ದಾಣ ನಿರ್ಮಾಣಕ್ಕೆ, 2008ರಲ್ಲಿ ಸರ್ಕಾರ ಮೆಥಾಸ್ ಇನ್ಫ್ರಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಸಂಸ್ಥೆಯ ಮಾತೃ ಸಂಸ್ಥೆ ಸತ್ಯಂ ಕಂಪ್ಯೂಟರ್ ದಿವಾಳಿಯಾಯಿತು. ಹಾಗಾಗಿ ಮೆಥಾಸ್ ಸಂಸ್ಥೆ ಕಾಮಗಾರಿ ಆರಂಭಿಸಲಿಲ್ಲ. ಬಳಿಕ ರಿಜನಲ್ ಏರ್’ಪೋರ್ಟ್ ಹೋಲ್ಡಿಂಗ್ಸ್ ಇಂಟರ್’ನ್ಯಾಶನಲ್ ಲಿಮಿಟೆಡ್ (ರಾಹಿ) ಜೊತೆಗೆ ಕಾಮಗಾರಿಯ ಒಪ್ಪಂದವಾಯಿತು. ಆದರೆ ತಾಂತ್ರಿಕ ಕಾರಣದಿಂದಾಗಿ ಯೋಜನೆ ಪೂರ್ಣಗೊಳ್ಳಲಿಲ್ಲ. ಈ ವೇಳೆ ವಿಮಾನ ನಿಲ್ದಾಣ ಕಾಮಗಾರಿಗೆ ಅನುಕೂಲವಾಗಿಲಿ ಎಂದು ಕಟ್ಟಡ ನಿರ್ಮಿಸಲಾಗಿತ್ತು.

ಸೆಕ್ಯೂರಿಟಿ ಇರೋವರೆಗೂ ಚೆನ್ನಾಗಿತ್ತು
ವಿಮಾನ ನಿಲ್ದಾಣದ ಕಟ್ಟಡ ಮತ್ತು ವಸ್ತುಗಳ ರಕ್ಷಣೆಗಾಗಿ ಸೆಕ್ಯೂರಿಟಿ ಒಬ್ಬನನ್ನು ನಿಯೋಜಿಸಲಾಗಿತ್ತು. ಕೆಲ ತಿಂಗಳ ಹಿಂದೆ ಆತ ತೀರಿಕೊಂಡಿದ್ದಾನೆ. ‘ಸೆಕ್ಯೂರಿಟಿ ಇರುವವರೆಗೆ ಕಟ್ಟಡ ಚೆನ್ನಾಗಿತ್ತು. ಆ ಬಳಿಕ ಸ್ಥಿತಿ ಹೀಗಾಗಿದೆ’ ಅಂತಾರೆ ಗ್ರಾಮಸ್ಥ ನಂಜೇಗೌಡ. ಆದರೆ ಸೆಕ್ಯೂರಿಟಿಯೇ ಹಲವು ವಸ್ತುಗಳನ್ನ ಮಾರಿಕೊಂಡಿದ್ದಾನೆ ಎಂಬ ಆಪಾದನೆಯು ಇದೆ.

ಮತ್ತೊಂದೆಡೆ ಖಾಸಗಿ ಸಂಸ್ಥೆಯೊಂದು ಕಟ್ಟಡ ನಿರ್ಮಿಸಿ ಬಳಕೆ ಮಾಡಿಕೊಳ್ಳುತ್ತಿದ್ದರಿಂದ ಇದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಮಹತ್ವಾಕಾಂಕ್ಷಿ ಯೋಜನೆ ಒಂದರ ಜಾಗ, ಅನೈತಿಕ ಚಟುವಟಿಕೆಗೆ ದುರ್ಬಳಕೆ ಆಗುತ್ತಿರುವುದು ವಿಪರ್ಯಾಸ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
Illegal Activities are being done in a building constructed in Shimoga Airport. Ambitious project of Chief Minister B S Yedyurappa. Though the construction of Airport started in 2008, it has not been fully constructed.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200