ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 27 ಫೆಬ್ರವರಿ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರ್ನಾಟಕದ ಮೊದಲ ಸೈನಿಕ ಪಾರ್ಕ್’ಗೆ ಇದೆಂಥಾ ದುಸ್ಥಿತಿ? ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರ ಮನೆ ಮುಂದೆಯೇ ಇರುವ ಹೆಮ್ಮೆಯ ಉದ್ಯಾನವನಕ್ಕಿಲ್ಲ ರಕ್ಷಣೆ.
ನಿರ್ಮಾಣವಾಗಿ ಎಳು ತಿಂಗಳಲ್ಲಿ ಸೈನಿಕ ಪಾರ್ಕ್, ಕಳೆ ಕಳೆದುಕೊಂಡು ತನ್ನ ಹಳೆ ಸ್ವರೂಪಕ್ಕೆ ಬಂದಿದೆ. ಅನೈತಿಕ ಚಟುವಟಿಕೆಯ ಬೀಡಾಗಿದೆ. ಬೀಯರ್ ಬಾಟಲಿಗಳು, ಮದ್ಯದ ಪೌಚ್’ಗಳು, ಗುಟ್ಕಾ, ಸಿಗರೇಟ್ ಪ್ಯಾಕೆಟ್’ಗಳೇ ರಾರಾಜಿಸುತ್ತಿವೆ.
ಕಾರ್ಗಿಲ್ ವಿಜಯ ದಿವಸ್’ಗೆ ಉದ್ಘಾಟನೆ
2019ರ ಜುಲೈ ತಿಂಗಳಲ್ಲಿ ಕಾರ್ಗಿಲ್ ವಿಜಯ ದಿವಸ್’ನಂದು ಸೈನಿಕ ಪಾರ್ಕ್ ಉದ್ಘಾಟನೆ ಮಾಡಲಾಯಿತು. ಜಿಲ್ಲಾಧಿಕಾರಿಯಾಗಿದ್ದ ಕೆ.ಎ.ದಯಾನಂದ್ ಅವರ ಉಸ್ತುವಾರಿಯಲ್ಲಿ ಈ ಉದ್ಯಾನವನ ಸೈನಿಕ ಪಾರ್ಕ್ ಆಗಿ ಬದಲಾಗಿತ್ತು. ಪಾರ್ಕ್’ನಲ್ಲಿ ಏನೇನಿದೆ ಯಾವೆಲ್ಲ ಕಲಾಕೃತಿಗಳಿವೆ ಅನ್ನುವುದನ್ನು ಆ ಸಂದರ್ಭದಲ್ಲಿ ಕಲಾವಿದರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದರು. ಅದರ ವಿಡಿಯೋ ರಿಪೋರ್ಟ್ ಇಲ್ಲಿದೆ ನೋಡಿ.
ಅವತ್ತು ಜಿಲ್ಲಾಡಳಿತದ ಆಸಕ್ತಿ, ಕಲಾವಿದರ ಶ್ರಮದಿಂದ ಸೈನಿಕ ಪಾರ್ಕ್ ನಿರ್ಮಾಣವಾಗಿತ್ತು. ಸೈನಿಕರು, ಜನರು ಹೆಮ್ಮೆಯಿಂದ ಇಲ್ಲಿಗೆ ಬಂದು ಸಲ್ಯೂಟ್ ಹೊಡೆದಿದ್ದರು. ಆದರೆ ಈಗ ಇದೇ ಪಾರ್ಕ್, ವರ್ಚಸ್ಸು ಕಳೆದುಕೊಂಡಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.
ಈಗ ಹೇಗಿದೆ ಗೊತ್ತಾ ಸೈನಿಕ ಪಾರ್ಕ್?
ಸೈನಿಕ ಪಾರ್ಕ್’ನಲ್ಲಿ ಪ್ರತಿಮೆಗಳು ಧೂಳು ಹಿಡಿದಿವೆ. ಇವುಗಳನ್ನು ಕ್ಲೀನ್ ಮಾಡುವತ್ತ ಯಾರು ಗಮನ ಹರಿಸಿಲ್ಲ. ಪ್ರತಿಮೆಗಳಿಗೆ ಎಂದೋ ಹಾಕಿದ ಹಾರಗಳು ಒಣಗಿ ಹೋಗಿವೆ. ನಿರ್ವಹಣೆ ಇಲ್ಲದಿರುವುದರಿಂದ ಪಾರ್ಕ್’ನಲ್ಲಿ ಅಳವಡಿಸಿದ್ದ ಲೈಟುಗಳು ಧೂಳು ಹಿಡಿದಿವೆ. ಹಲವು ಒಡೆದು ಹೋಗಿವೆ.
ಒಣಗಿ ಹೋಯ್ತು ಲಾನ್, ಗಿಡಗಳು
ಹೆಮ್ಮೆಯ ಸೈನಿಕ ಪಾರ್ಕ್’ಗೆ ನೀರಿನ ವ್ಯವಸ್ಥೆ ಇಲ್ಲದೆ, ಲಾನ್ ಮತ್ತು ಗಿಡಗಳು ಒಣಗಿ ಹೋಗಿವೆ. ಸೈನಿಕ ಪಾರ್ಕ್ ಆರಂಭವಾದಾಗ ಗಿಡಗಳಿಗೆ ನೀರು ಪೂರೈಸಲು ಪೈಪ್’ಲೈನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲವು ತಿಂಗಳ ಹಿಂದೆ ನೀರು ಪೂರೈಕೆ ಪೈಪ್ ಒಡೆದು ಹೊಗಿದೆ. ಆ ಬಳಿಕ ಅದನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಹಾಗಾಗಿ ಲಾನ್ ಮತ್ತು ಗಿಡಗಳು ಸಂಪೂರ್ಣ ಒಣಗಿ ಹೋಗಿದೆ.
ಮದ್ಯದ ಬಾಟಲಿ, ಗುಟ್ಕಾ ಪ್ಯಾಕೆಟ್
ಉದ್ದೇಶದಂತೆ ಪಾರ್ಕ್ ನಿರ್ವಹಣೆಯಾಗಿದ್ದರೆ ಸೈನಿಕ ಪಾರ್ಕ್ ಶಿವಮೊಗ್ಗ ನಗರದ ಮತ್ತೊಂದು ಸಾಂಸ್ಕೃತಿಕ ಕೇಂದ್ರವಾಗುತ್ತಿತ್ತು. ಆದರೆ ಈಗ ಇಲ್ಲಿ ಅನೈತಿಕ ಚಟುವಟಿಕೆ ಕೇಂದ್ರವಾಗಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಗುಟ್ಕಾ ಪ್ಯಾಕೆಟ್’ಗಳೇ ಕಾಣಸಿಗುತ್ತವೆ.
ಕೂಗಳತೆಯಲ್ಲೇ ಡಿಸಿ, ಸಿಇಒ ಮನೆ
ವಿಪರ್ಯಾಸ ಅಂದರೆ ಸೈನಿಕ ಪಾರ್ಕ್’ನ ಕೂಗಳತೆ ದೂರದಲ್ಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರ ಸರ್ಕಾರಿ ಬಂಗಲೆಗಳಿವೆ. ಪ್ರತಿದಿನ ಹಿರಿಯ ಅಧಿಕಾರಿಗಳು ಪಾರ್ಕ್ ಪಕ್ಕದಲ್ಲೇ ತಮ್ಮ ಮನೆಗೆ ತೆರಳುತ್ತಾರೆ. ಹಾಗಿದ್ದೂ, ಪಾರ್ಕ್ ಇಂತಹ ದುಸ್ಥಿತಿಗೆ ತಲುಪಿರುವುದು ವಿಚಿತ್ರ. ಇದೇ ಪಾರ್ಕ್’ನ ಮುಂದೆ ಸೈನಿಕ ಕಲ್ಯಾಣ ಇಲಾಖೆಯಿದ್ದು, ಯೋಧರು, ಮಾಜಿ ಯೋಧರು ಇಲ್ಲಿಗೆ ಭೇಟಿ ಕೊಡುತ್ತಾರೆ. ಈ ವೇಳೆ ಸೈನಿಕ ಪಾರ್ಕ್’ನ ದುಸ್ಥಿತಿ ಕಂಡು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಯೋಧರ ಕುರಿತು ಭಾಷಣ ಮಾಡುವ ಬದಲು ಸೈನಿಕ ಪಾರ್ಕ್ ಸೂಕ್ತ ನಿರ್ವಹಣೆ ಮಾಡಿ ಅವರ ಗೌರವ ಹೆಚ್ಚಿಸುವ ಕೆಲಸ ಮಾಡಬೇಕಿದೆ.
ಸ್ವಚ್ಛತೆಗಿಳಿದ ಪರೋಪಕಾರಂ, ಚೆನ್ನುಡಿ
ಸೈನಿಕ ಪಾರ್ಕ್’ನ ದುಸ್ಥಿತಿ ಕಂಡು, ಶಿವಮೊಗ್ಗದ ಸಾಮಾಜಿಕ ಚಟುವಟಿಕೆಯ ಸಂಘಟನೆ ಪರೋಪಕಾರಂ ಮತ್ತು ಚೆನ್ನುಡಿ ಬಳಗ, ಸ್ವಚ್ಛತೆ ಕಾರ್ಯ ನಡೆಸಿದವು. ಪ್ರತಿಮೆಗಳನ್ನು ಸ್ವಚ್ಛತೆ ಮಾಡಿದ್ದಾರೆ. ಆದರೆ ಇಲ್ಲಿರುವ ಗಿಡಗಳಿಗೆ ನೀರು ಹಾಕಲು ಸೂಕ್ತ ವ್ಯವಸ್ಥೆ ಇಲ್ಲವಾಗಿದೆ ಅನ್ನುತ್ತಾರೆ ಈ ಬಳದ ಸದಸ್ಯರು. ಇನ್ನಾದರೂ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಈ ಪಾರ್ಕ್ ನಿರ್ವಹಣೆಗೆ ಗಮನ ಹರಿಸಬೇಕಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]